ತಾಲೂಕಿನ ಜನತೆ ಜನಸ್ಪಂದನೆ ಕಾರ್ಯಕ್ರಮದ ಲಾಭ ಪಡೆದುಕೊಳ್ಳಿ: ಬುರ್ಲಿ
ಸೆ. 30ರಂದು ಕಾಗವಾಡದಲ್ಲಿ ಜನಸ್ಪಂದನೆ
ಕಾಗವಾಡ 25: ಬರುವ ಸಪ್ಟೆಂಬರ್ 30ರಂದು ಮಧ್ಯಾಹ್ನ 3ಗಂಟೆಗೆ ಮಲ್ಲಿಕಾರ್ಜುನ ವಿದ್ಯಾಲಯದ ಆವರಣದಲ್ಲಿ ಜನಸ್ಪಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಜನತೆ ಇದರ ಲಾಭ ಪಡೆದುಕೊಳ್ಳುವಂತೆ ತಹಶೀಲ್ದಾರ ರಾಜೇಶ ಬುರ್ಲಿ ತಿಳಿಸಿದ್ದಾರೆ.
ಅವರು ಮಂಗಳವಾರ ದಿ. 24ರಂದು ತಮ್ಮ ಕಾರ್ಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಸರ್ಕಾರ ಆದೇಶದ ಮೇರೆಗೆ ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ, ಬೆಳಗಾವಿ ಪೋಲಿಸ್ ಇಲಾಖೆ ಇವುಗಳ ಜಂಟಿ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಮಹಮ್ಮದ ರೋಷನ, ಜಿ.ಪಂ. ಸಿಇಓ ರಾಹುಲ ಶಿಂಧೆ, ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ, ಚಿಕ್ಕೋಡಿ ಎಸಿ ಸುಭಾಷ ಸಂಪಗಾಂವಿ ಇವರ ಉಪಸ್ಥಿತಿಯಲ್ಲಿ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದು, ತಾಲೂಕಿನ ಸಾರ್ವಜನಿಕರ ತಮ್ಮ ಕುಂದು-ಕೊರತೆಗಳ ಅರ್ಜಿಗಳನ್ನು ಇಲ್ಲಿ ಸಲ್ಲಿಸಬಹುದಾಗಿದ್ದು, ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಅವುಗಳಿಗೆ ಸೂಕ್ತ ಪರಿಹಾರ ನೀಡಲಿದ್ದಾರೆ ಎಂದರು.
ಈಗಾಗಲೇ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಪಿಡಿಓಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಆನ್ಲೈನ್ ಪೂರ್ವಿಭಾವಿ ಸಭೆ ನಡೆಸಿ, ಜನಸ್ಪಂದನ ಕಾರ್ಯಕ್ರಮದ ಸಿದ್ದತೆಗಳನ್ನು ಮಾಡಿಕೊಳ್ಳಲು ತಿಳಸಲಾಗಿದೆ. ಜೊತೆಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಎಲ್ಲ ಅಧಿಕಾರಿಗಳ ಸೂಕ್ತ ಕ್ರಮಗಳನ್ನು ಕೈಗಳ್ಳುವಂತೆಯೂ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.