ಜಗನ್ನಾಥ ದಾಸರು ಭಾಗ -2 ಚಲನಚಿತ್ರಕ್ಕೆ ಜನಾರ್ದನರೆಡ್ಡಿ ಚಾಲನೆ
‘ಉತ್ತರ ಕರ್ನಾಟಕ ದಾಸ ಶ್ರೇಷ್ಠರು ನಡೆದಾಡಿದ ಪುಣ್ಯ ಭೂಮಿ’
ಗಂಗಾವತಿ 28: ಮನುಕುಲಕ್ಕೆ ಸರಳ ಭಾಷೆಯಲ್ಲಿ ಆಧ್ಯಾತ್ಮದ ತಿಳಿವಳಿಕೆ ಮೂಡಿಸಿ, ಸನ್ಮಾರ್ಗದ ಹಾದಿ ತೋರಿಸಿದ ದಾಸ ಶ್ರೇಷ್ಠರು ನಡೆದಾಡಿದ ಪುಣ್ಯ ಭೂಮಿ ಉತ್ತರ ಕರ್ನಾಟಕ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ತಿಳಿಸಿದರು.
ಅವರು ಬುಧವಾರ ಹಿರೇಜಂತಕಲ್ನ ಶ್ರೀ ಪಂಪಾಪತಿ ದೇವಸ್ಥಾನದಲ್ಲಿ ದಾಸ ವರೇಣ್ಯ ಶ್ರೀ ಜಗನ್ನಾಥ ದಾಸರು ಚಲನಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ದಾಸರ ಪದಗಳು ಕನ್ನಡ ಸಾಹಿತ್ಯಕ್ಕೆ ಮೇರು ಕೊಡುಗೆ ನೀಡಿದ್ದು ಮಾನವೀಯತೆಯ ನೆಲೆಗಟ್ಟಿನಲ್ಲಿ ಮನೆಮನೆಗೆ ತೆರಳಿ ತಾಳ ತಂಬೂರಿಗಳೊಂದಿಗೆ ಚಿತ್ತಕರ್ಷಕ ಹಾಡುಗಳನ್ನು ಕಟ್ಟಿ ಮನ ಮುಟ್ಟುವಂತೆ ಹಾಡಿನ ಮೂಲಕ ಜನಮನ ಸೂರೆಗೊಂಡು ಅವರಿಗೆ ಸಜ್ಜನಿಕೆಯ ಪಥ ಬೋಧಿಸಿದ ಮಹಾನ್ ಆಧ್ಯಾತ್ಮ ಪುರುಷರು ದಾಸರು, ಜನಸಾಮಾನ್ಯರಿಗೆ ಹತ್ತಿರವಾದ ಚಿತ್ರಗಳನ್ನು ನಿರ್ಮಿಸಿ ಗೆಲ್ಲುವಲ್ಲಿ ವಿಫಲರಾಗುತ್ತಿರುವ ಇಂಥ ದಿನಮಾನಗಳಲ್ಲಿ ದಾಸರ ಚಿತ್ರಗಳನ್ನು ನಿರ್ಮಿಸಿ ಗೆಲ್ಲುವ ಆತ್ಮವಿಶ್ವಾಸ ಹೊಂದಿರುವ ನಿರ್ದೇಶಕ ಮದುಸೂದನ ಹವಲ್ದಾರ್ ಮತ್ತು ತಂಡಕ್ಕೆ ಶುಭವಾಗಲಿ ಎಂದರು.
ಚಲನಚಿತ್ರದ ನಿರ್ದೇಶಕ ಹಾಗು ನಿರ್ಮಾಪಕ ಮಧುಸೂಧನ ಹವಲ್ದಾರ್ ಮಾತನಾಡಿ, ದಾಸರು ಎಂದರೆ ಕನಕದಾಸ ಮತ್ತು ಪುರಂದರ ಜತೆಗೆ ಅನೇಕ ದಾಸರು ಅನೇಕರು ಪರಂಪರೆಯಲ್ಲಿ ಬರುತ್ತಿದ್ದು, ಜಗನ್ನಾಥ ದಾಸರು 5 ಭಾಗಗಳ ಚಿತ್ರ ಬರಲಿದೆ ಮಾತಾಂಬುಜ ಮೂವಿಸ್ನಿಂದ ಎರಡನೇ ಭಾಗ ಇದೀಗ ಚಿತ್ರೀಕರಣ ಆರಂಭಗೊಳ್ಳುತ್ತಿದೆ. ಶ್ರೀ ಪ್ರಸನ್ನ ವೆಂಕಟದಾಸರು ಒಂದು ಭಾಗ ತೆರೆಗೆ ಬಂದಿದ್ದು, ಶ್ರೀ ವಿಜಯದಾಸರು ಚಿತ್ರ ತಯಾರಿಯಲ್ಲಿದೆ, ಇದಲ್ಲದೆ ಕಾಕಂಡಕಿ ಶ್ರೀ ಮಹಿಪತಿ ದಾಸರು, ಕನಕದಾಸರು, ಪುರಂದರ ದಾಸ ಪರಂಪರೆಯ ಎಲ್ಲರನ್ನು ಪರಿಚಯಿಸಲಾಗುತ್ತಿದ್ದು, ಸಾಮಾಜಿ ಕಥಾ ಹಂದರವುಳ್ಳ ಚಿತ್ರಗಳನ್ನು ತೆಗೆಯುವ ಯೋಜನೆ ಇದೆ. ಗಂಗಾವತಿ ಸುತ್ತಮುತ್ತಲಿನ ಪ್ರದೇಶ ಚಲನಚಿತ್ರಕ್ಕೆ ಹೇಳಿಮಾಡಿಸಿದ ಸ್ಥಳವಾಗಿದ್ದು, ಶ್ರೀ ರಾಘವೇಂದ್ರ ಸ್ವಾಮೀಜಿಗಳ ಪಾತ್ರಕ್ಕೆ ಅಮೆರಿಕಾದ ನ್ಯುಜೆರ್ಸಿಯಲ್ಲಿ ಕಳೆದ 53 ವರ್ಷದಿಂದ ನೆಲೆಸಿ ಅಲ್ಲಿ ಕ್ಯಾನ್ಸರ್ ತಜ್ಞರಾಗಿರುವ ಆರ್. ಸುಧೀಂದ್ರ ಆಯ್ಕೆಯಾಗಿರುವುದು ವಿಶೇಷವಾಗಿದೆ. ಅವರಿಗೆ ನಾಡು-ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿ ಇರುವುದಕ್ಕೆ ಪ್ರಾತಕ್ಕೆ ಒಪ್ಪಿರುವುದು ಹೆಮ್ಮೆ ತರುವ ಸಂಗತಿ, ಚಿತ್ರದ ನಾಯಕ ಶರತ್ ಜೋಷಿಯವರು ಸೇರಿ ಸ್ಥಳೀಯರಾದ ವಿಷ್ಣುತೀರ್ಥ ಜೋಶಿ, ರಾಮಮೂರ್ತಿ ನವಲಿ, ಶರದ ದಂಡೀನ ವಕೀಲರು, ನಾಗರಾಜ ಇಂಗಳಗಿ, ಸಿ. ಮಹಾಲಕ್ಷಿ-್ಮ, ಪುರುಷೋತಮ್ಮ ರೆಡ್ಡಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ಯಾಮರಾಮನ್, ನಾರಾಯಣ ಸಿ., ಸಹಾಯಕ ನಿರ್ದೇಶಕರಾಗಿ ಶ್ರೀನಿವಾಸ್, ಬಾಗಲಕೋಟೆ ಭೀಮಸೇನ್ ಜೋಷಿ ವ್ಯವಸ್ಥಾಪಕಕರಾಗಿ ರಾಮಚಂದ್ರರಾವ್ ಕುಲಕರ್ಣಿ, ಪ್ರಸಾದನ ರಮೇಶ ಬಾಬು ನಿರ್ವಹಿಸಲಿದ್ದಾರೆ ಎಂದು ಹವಲ್ದಾರ್ ವಿವರಿಸಿದರು.
ಈ ಸಂದರ್ಭದಲ್ಲಿ ಕೆಆರ್ಪಿಪಿ ಕೊಪ್ಪಳ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರ್, ನಗರ ಪ್ರಚಾರ ಸಮಿತಿ ಅಧ್ಯಕ್ಷ ನರಸಪ್ಪ ಅಮರಜ್ಯೋತಿ, ಮುಖಂಡರಾದ ಜಿಲಾನ್ ಪಾಶಾ ಖಾದ್ರಿ ಸೇರಿದಂತೆ ಇತರರಿದ್ದರು.