ಅಂತರರಾಷ್ಟ್ರೀಯ

ಸುಧಾರಿತ ಕ್ಷಿಪಣಿಗಳು, ಭೂಗತ ‘ಕ್ಷಿಪಣಿ ನಗರ’ ಪ್ರದರ್ಶಿಸಿದ ಇರಾನ್

ಸುಧಾರಿತ ಕ್ಷಿಪಣಿಗಳು, ಭೂಗತ ‘ಕ್ಷಿಪಣಿ ನಗರ’ ಪ್ರದರ್ಶಿಸಿದ ಇರಾನ್
ಟೆಹ್ರಾನ್, ನ. 23  ಅಮೆರಿಕ ಮತ್ತು ಇಸ್ರೇಲ್‌ ದಾಳಿಗಳು ಹಾಗೂ ಹೆಚ್ಚುತ್ತಿರುವ ಆರ್ಥಿಕ ಒತ್ತಡದ ನಡುವೆಯೂ ತನ್ನ ಸೇನಾ ಸಾಮರ್ಥ್ಯವನ್ನು ಪ್ರದರ್ಶಿಸಲು ಇರಾನ್ ಸುಧಾರಿತ ಕ್ಷಿಪಣಿಗಳು, ಭೂಗತ ಸೇನಾ ಸೌಲಭ್ಯಗಳು ಹಾಗೂ ಎರಡು ಕ್ಷಿಪಣಿಗಳನ್ನು ಏಕಕಾಲಕ್ಕೆ ಉಡಾಯಿಸಬಲ್ಲ ಹೊಸ ಉಡಾವಣಾ ವ್ಯವಸ್ಥೆಯನ್ನು ಪ್ರದರ್ಶಿಸಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್‌ (ಐಆರ್‌ಜಿಸಿ) ಮುಖ್ಯಸ್ಥ ಮೇಜರ್ ಜನರಲ್ ಅಹ್ಮದ್ ವಾಹಿದಿ ಅವರು, ಐಆರ್‌ಜಿಸಿ ವೈಮಾನಿಕ ಮತ್ತು ಬಾಹ್ಯಾಕಾಶ ಪಡೆಯ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮಜೀದ್ ಮೌಸವಿ ಅವರೊಂದಿಗೆ ಭೂಗತ ಕ್ಷಿಪಣಿ ಕೇಂದ್ರಕ್ಕೆ ಭೇಟಿ ನೀಡಿದರು. ಈ ವೇಳೆ ಪಡೆಯ ಕಾರ್ಯಾಚರಣಾ ಸನ್ನದ್ಧತೆ ಹಾಗೂ ಕ್ಷಿಪಣಿ ಅಭಿವೃದ್ಧಿಯ ಇತ್ತೀಚಿನ ಪ್ರಗತಿ ಕುರಿತು ವಾಹಿದಿ ಅವರಿಗೆ ಮಾಹಿತಿ ನೀಡಲಾಯಿತು ಎಂದು ಅರೆಸರ್ಕಾರಿ ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಭೂಗತ ಕೇಂದ್ರದಲ್ಲಿ ಸುಧಾರಿತ ಕ್ಷಿಪಣಿಗಳು, ಉಡಾವಣಾ ವ್ಯವಸ್ಥೆಗಳು ಮತ್ತು ಇತರ ಸೇನಾ ಉಪಕರಣಗಳನ್ನು ಪ್ರದರ್ಶಿಸಲಾಯಿತು. ದ್ರವ ಇಂಧನ ಬಳಸುವ ಎರಡು ಕ್ಷಿಪಣಿಗಳನ್ನು ಏಕಕಾಲಕ್ಕೆ ಉಡಾಯಿಸಲು ವಿನ್ಯಾಸಗೊಳಿಸಿದ ಹೊಸ ವ್ಯವಸ್ಥೆಯ ದೃಶ್ಯಗಳನ್ನು ಇರಾನ್‌ನ ಸರ್ಕಾರಿ ದೂರದರ್ಶನ ವಾಹಿನಿ ಐಆರ್‌ಐಬಿ ಪ್ರಸಾರ ಮಾಡಿತು. ಹೊಸ ತಲೆಮಾರಿನ ಕ್ಷಿಪಣಿಗಳಲ್ಲಿ ಹೆಚ್ಚಿನ ಕ್ರಮಣ ವ್ಯಾಪ್ತಿ, ನಿಖರತೆ ಮತ್ತು ಸುಧಾರಿತ ಮಾರ್ಗದರ್ಶನ ಸಾಮರ್ಥ್ಯವಿದ್ದು, ಕೆಲವು ವ್ಯವಸ್ಥೆಗಳು ಅಮೆರಿಕದ ಜಿಪಿಎಸ್ ಅವಲಂಬನೆಯಿಲ್ಲದೆ ಕಾರ್ಯನಿರ್ವಹಿಸಬಲ್ಲವು ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.

ಫೆಬ್ರವರಿ ಅಂತ್ಯದಲ್ಲಿ ಆರಂಭವಾದ ಅಮೆರಿಕ–ಇಸ್ರೇಲ್‌ ಯುದ್ಧದ ಬಳಿಕ, ಮತ್ತೆ ಸಂಘರ್ಷ ಆರಂಭವಾದರೆ ಪ್ರತಿಕ್ರಿಯಿಸುವ ಸಾಮರ್ಥ್ಯ ತನ್ನಲ್ಲಿದೆ ಎಂಬ ಸಂದೇಶ ನೀಡಲು ಟೆಹ್ರಾನ್ ಮುಂದಾಗಿದೆ. ಇದೇ ವೇಳೆ ಅಮೆರಿಕದ ನೌಕಾ ದಿಗ್ಬಂಧನದಿಂದ ಇರಾನ್‌ನ ತೈಲ ರಫ್ತಿಗೆ ಅಡ್ಡಿಯಾಗಿದ್ದು, ಈಗಾಗಲೇ ಆರ್ಥಿಕ ಹಿಂಜರಿತ ಎದುರಿಸುತ್ತಿರುವ ದೇಶದ ಮೇಲೆ ಒತ್ತಡ ಹೆಚ್ಚಿದೆ.

ಇರಾನ್ ಹಲವು ದಶಕಗಳಿಂದ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ವೈಮಾನಿಕ ದಾಳಿಗಳನ್ನು ತಡೆದುಕೊಳ್ಳಬಲ್ಲ ಭೂಗತ ಸೇನಾ ಸೌಲಭ್ಯಗಳನ್ನು ನಿರ್ಮಿಸುತ್ತಿದೆ. ತೀವ್ರ ಬಾಂಬ್ ದಾಳಿಯ ನಡುವೆಯೂ ಉತ್ಪಾದನೆ ಮತ್ತು ದಾಸ್ತಾನು ಕಾರ್ಯವನ್ನು ಮುಂದುವರಿಸಲು ಕ್ಷಿಪಣಿ ಹಾಗೂ ಡ್ರೋನ್ ಉತ್ಪಾದನಾ ಘಟಕಗಳನ್ನು ಭೂಮಿಯ ಮೇಲಿನ ಸೌಲಭ್ಯಗಳಿಂದ ಭೂಗತ ಸಂಕೀರ್ಣಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಐಆರ್‌ಜಿಸಿ ತಿಳಿಸಿದೆ.

ಐಆರ್‌ಜಿಸಿಯ ವೈಮಾನಿಕ ಮತ್ತು ಬಾಹ್ಯಾಕಾಶ ಪಡೆ ನವೆಂಬರ್ 10ರಂದು ಮತ್ತೊಂದು ಭೂಗತ ಕ್ಷಿಪಣಿ ಕೇಂದ್ರವನ್ನು ಅನಾವರಣಗೊಳಿಸಿತ್ತು ಎಂದು ತಸ್ನಿಮ್ ವರದಿ ಮಾಡಿದೆ. ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಅಲಿ ಅಬ್ದೊಲ್ಲಾಹಿ ಮತ್ತು ಬ್ರಿಗೇಡಿಯರ್ ಜನರಲ್ ಮಜೀದ್ ಮೌಸವಿ ಪಾಲ್ಗೊಂಡಿದ್ದ ಆ ಕಾರ್ಯಕ್ರಮದಲ್ಲಿ ಬ್ಯಾಲಿಸ್ಟಿಕ್ ಹಾಗೂ ಕ್ರೂಸ್ ಕ್ಷಿಪಣಿಗಳು ಮತ್ತು ಅವುಗಳ ಉಡಾವಣಾ ವ್ಯವಸ್ಥೆಗಳನ್ನು ಪ್ರದರ್ಶಿಸಲಾಗಿತ್ತು.

ಇತ್ತೀಚಿನ ಭೇಟಿಯ ವೇಳೆ ವಾಹಿದಿ ಅವರು, ಇರಾನ್‌ನ ಎದುರಾಳಿಗಳು ಅನುಭವಿಸಿರುವ ಹಿನ್ನಡೆ ಕೇವಲ ಆರಂಭವಾಗಿದ್ದು, ಅಂತಿಮವಾಗಿ ಅವರು ಅವಮಾನ ಎದುರಿಸಲಿದ್ದಾರೆ ಎಂದು ಹೇಳಿದರು. ಯುದ್ಧದ ಅವಧಿಯಲ್ಲಿ ನ್ಯಾಟೊ ಸದಸ್ಯ ರಾಷ್ಟ್ರಗಳು 5,000 ಹಾರಾಟಗಳನ್ನು ನಡೆಸಿದ್ದವು ಎಂಬ ನ್ಯಾಟೊ ಪ್ರಧಾನ ಕಾರ್ಯದರ್ಶಿಯ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಅದು ಮೈತ್ರಿಕೂಟದ ಒಪ್ಪಿಗೆಯಾಗಿದೆ ಎಂದು ವ್ಯಾಖ್ಯಾನಿಸಿದರು.

ನವೆಂಬರ್ 15ರ ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಇರಾನ್‌ನ ಕ್ಷಿಪಣಿ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶವೂ ಇದ್ದ ಹಲವು ತಿಂಗಳ ಅಮೆರಿಕ ಮತ್ತು ಇಸ್ರೇಲ್‌ ಸೇನಾ ಕಾರ್ಯಾಚರಣೆಗಳ ಬಳಿಕವೂ, ಇರಾನ್ ಬಳಿ 1,500ರಿಂದ 2,500 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಉಳಿದಿವೆ ಎಂದು ಅಮೆರಿಕದ ಗುಪ್ತಚರ ಸಮುದಾಯ ಅಂದಾಜಿಸಿದೆ.

ಸುದ್ದಿ ಓದಿ