ಕಥೆ

ಸಂ-ಬಂಧಗಳು

ಸಂ-ಬಂಧಗಳು

-ಅನಿತಾ ಮಾಲಗತ್ತಿ

ಸದಾಶಿವನಗರ, ಬೆಳಗಾವಿ


ಸೂರ್ಯನಿನ್ನೂ ಬರುವುದಕ್ಕೆ ಕನಿಷ್ಟ 2 ತಾಸು. ನಾನಾಗಲೇ ಎದ್ದು ಕುಳಿತಿದ್ದೇನೆ. ಇಲ್ಲಿಯೇ ಆಗಲೀ ತವರಿನಲ್ಲಿಯೇ ಅಗಲಿ ನಾನು ಎಂದೂ ಇಷ್ಟು ಬೇಗ ಏಳುವುದಿಲ್ಲ. ನನ್ನನ್ನು ಅವಸರಿಸುವವರೂ ಯಾರೂ ಇಲ್ಲ. ಮನೆ ತುಂಬಾ ಆಳು ಕಾಳು, ಕೆಲಸಗಳೂ ನನ್ನ ಕರೆಯುವುದಿಲ್ಲ. ಹಾಸಿಗೆ ತುಂಬಾ ಮಗ್ಗಲು ಬದಲಾಯಿಸುವುದನ್ನು ಕಂಡು ಇವರು ಗೊಣಗುವುದನ್ನು ಕಂಡು ಇವರಿಗೇಕೆ ತೊಂದರೆ ಎಂದು ಮೆಲ್ಲನೆ ಎದ್ದು ಕೆಳಗಿಳಿದಿದ್ದೆ. ಇತ್ತೀಚೆಗೆ ಫೋನೂ ಬೇಜಾರಾಗಿ ಹೋಗಿದೆ. ಕೆಲವು ಸಲ ನಮ್ಮವರ ಹುಟ್ಟು ಹಬ್ಬಗಳೇ ಮರೆತಿರುತ್ತೇವೆ. ಅಂಥಾದ್ದರಲ್ಲಿ ಯಾರ್ಯಾರದೋ ಹುಟ್ಟು ಹಬ್ಬ, ಮದುವೆ ಸಮಾರಂಭಗಳು, ವಾಷರ್ಿಕೋತ್ಸವಗಳು ಒಂದರ ಕೆಳಗೊಂದು ಉತ್ಸವ, ಸಂತೋಷ ಕೂಟಗಳು ಅಷ್ಟಕ್ಕೂ ಅವರೊಡನೆ ಸಂತೋಷಗಳಲ್ಲಿ ಭಾಗಿಯಾಗಲು ನಮಗೂ ಮನಸ್ಸಿರಬೇಕಲ್ಲ?

ಸುಮ್ಮನೆ ಬಾಗಿಲು ತೆರೆದೆ ಎದುರು ಮನೆ ಸೊಸೆ ಹಿಮ ರಂಗೋಲಿ ಬಿಡಿಸುತ್ತಿದ್ದಾಳೆ. ಎಷ್ಟು ಚಂದದ ರಂಗೋಲಿ ತಲ್ಲೀನಳಾಗಿ ಬಿಡಿಸುವ ರಂಗೋಲಿ ನೋಡುತ್ತಾ ನಿಂತೆ. ನನಗೋ ಒಂದೆಳೆಯೂ ಬರುವುದಿಲ್ಲ. ಮಮ್ಮಿ ಹೊಡೆದು ಬಡಿದಾದರೂ ಕಲಿಸಬೇಕಾಗಿತ್ತು ಅನಿಸುತ್ತದೆ. ಕಲಿಸಿದ್ದರೆ ಹೀಗಾಗುತ್ತಿತ್ತೇ? ಹೆಣ್ಣಾಗಿ ನಾಚಿಕೆ ಬರಬೇಕು ಅಂತ ನಾನೇ ಅಂದುಕೊಳ್ಳುತ್ತಿದ್ದೇನೆ. ಹೌದು ಮಮ್ಮಿ ನಮಗೆ ಏನನ್ನೂ ಕಲಿಸಲಿಲ್ಲ; ಸ್ವತಃ ಅವಳಿಗೂ ಏನೂ ಬರುತ್ತಿರಲಿಲ್ಲ. ಎಲ್ಲರಂತೆ ಒಂದು ದೇವರ ಹಾಡು, ನೃತ್ಯ, ಹೆಣಿಕೆ, ಹೊಲಿಗೆ, ಅಡುಗೆ, ಓದು, ಬರಹ, ಊಹುಂ... ಹೋಗಲಿ ಕಲೆ ಇರುವ ಸ್ನೇಹಿತರೂ.....

ಹೈಸ್ಕೂಲಿಗೆ ಹೋಗುವಾಗಲೇ ಕಾರಿನಲ್ಲಿ ಹೋಗಿದ್ದು. ಹಾಗೆ ನೋಡಿದರೆ ಹೈಸ್ಕೂಲಿಗೆ ಕಾರಿನಲ್ಲಿ ಹೋಗುವುದಕ್ಕೂ ಹೆಡ್ ಮಾಸ್ಟರ್ ರಂಗಪ್ಪ ಮೇಷ್ಟ್ರು ಆಕ್ಷೇಪಿಸಿದ್ದರು.

"ನಾವು ಎಲ್ಲ ಮಕ್ಕಳೂ ಸರಿಸಮಾನವಾಗಿರಲಿ ಅಂತ ಬಯಸಿ ಯೂನಿಫಾರ್ಮ, ಬೂಟು, ರಿಬ್ಬನ್ ಅಂತೆಲ್ಲ ಮಾಡಿದ್ದೇವೆ, ಎಲ್ಲ ಮಕ್ಕಳೂ ಕಾಲ್ನಡಿಗೆಯಲ್ಲಿಯೇ ಬರುತ್ತಾರೆ ಅಂಥಾದ್ದರಲ್ಲಿ ನಿಮ್ಮದೆಂಥಾ'' ಎಂದು ಅವರ ಉಡುಪಿ ಸ್ಟೈಲ್ ನಲ್ಲಿ ಕೇಳುತ್ತಿದ್ದರು. 

ಅದಕ್ಕಾಗಿ ಶಾಲೆಗೆ ತುಸು ಅಂತರದಲ್ಲಿ ಲಕ್ಷ್ಮೀ ಟಾಕೀಸ್ ಹತ್ತಿರವೇ ಕಾರ್ ನಿಲ್ಲಿಸಿ ಬಿಡುತ್ತಿದ್ದ ಡ್ರೈವರ್. ಅದೇ ಕಾರಣದಿಂದ ವರ್ಗದ ಎಲ್ಲ ವಿದ್ಯಾಥರ್ಿಗಳೂ ಕಲೆತು ಆಡುವುದು, ಊಟ, ಮನರಂಜನೆಗಳಲ್ಲಿ ನನ್ನನೂ ಕರೆದುಕೊಳ್ಳುತ್ತಿರಲಿಲ್ಲ.  ಆ ಗಿಡ್ಡ ಹುಡುಗಿ ಹೆಸರು ನೆನಪಿಲ್ಲ ಎಲ್ಲರನ್ನೂ ಸುತ್ತಲೂ ಕೂಡಿಸಿಕೊಂಡು ಕಥೆ ಹೇಳುತ್ತಿದ್ದಳು. ನನಗೂ ಕೇಳುವ ಆಸೆ ಆದರೂ ನನ್ನ ಶ್ರೀಮಂತಿಕೆಯ ಇನ್ನೊಂದು ಮುಖವಾದ ಮಡಿವಂತಿಕೆಯಲ್ಲಿಯೇ ಕಳೆದೆ!. ಡೆಸ್ಕ ಬಿಟ್ಟು ಎದ್ದರೆ ಎಲ್ಲಿ ಇಸ್ತ್ರೀ ಹೋಗಿ ಬಿಡುತ್ತದೆಯೋ ಅನ್ನುವಷ್ಟು ನಾಜೂಕಾಗಿ ಕಳೆದೆ. 

ಇನ್ನು ಮನೆಯಲ್ಲಿಯೂ ಅಷ್ಟೇ. ಇಡೀ ಓಣಿಗೇ ಶ್ರೀಮಂತರು ಎಂಬ ಗರ್ವ ಇತ್ತು. ಆಗ ನನ್ನ ಪ್ರಕಾರ ಓಣಿಯ ಯಾವ ಮಕ್ಕಳಿಗೂ ಇಲ್ಲದ ಸೌಕರ್ಯ ನಮಗಿತ್ತು. ಬೇಕೆಂಬು ವಸ್ತು ದೂರದಲ್ಲಿದ್ದರೆ ಪಡೆಯಲು ಕನಿಷ್ಟ ಎದ್ದಾದರೂ ಪ್ರಯತ್ನಿಸುತ್ತಿದ್ದೆ. ಆದರೆ ಬಾಯಿಗೆ ಬರುವ ಮೊದಲೇ ಕೈಗೆಟುಕಿಬಿಟ್ಟರೆ? ಪರಿಣಾಮವೇ ನಾನೀಗ ಎದ್ದರೆ ಕೂಡುವುದು, ಕೂತರೆ ಎದ್ದು ನಿಲ್ಲುವುದು ಕಷ್ಟವಾಗಿದೆ. 

ಪಿಯುಸಿ ಒಂದೇ ವರ್ಷ ಓದಿದ್ದು. ಮನೆಯಲ್ಲಿ ಮದುವೆಯ ಮಾತುಕತೆ ನಡೆಯತೊಡಗಿತ್ತು. ಆಗೆಲ್ಲ ಖುಷಿ, ಕುತೂಹಲಗಳಷ್ಟೇ. ಹೂಂ ಗುಟ್ಟಿದ್ದೆ. ಮದುವೆ ನಿಶ್ಚಯವಾದ ಮೇಲೆ ಹುಟ್ಟಿನಿಂದ ತಿಳಿಯದ ಒಂದು ಸತ್ಯ ತಿಳಿದಿತ್ತು. ಅದೇನೆಂದರೆ ನನಗೂ ಸ್ವಂತಕ್ಕೆ ಐದು ಸೋದರತ್ತೆಯರು ಇರುವುದು, ಅವರಲ್ಲಿ ಇನ್ನೂ ನಾಲ್ಕು ಜನ ಮದುವೆಯಾಗಿಲ್ಲ ಎಂಬುದು!

ಅಪ್ಪನೊಂದಿಗೆ ಅಜ್ಜಿ ಮನೆಗೆ ಹೋದಾಗ ಅಜ್ಜಿ ರಂಪಾಟ ಮಾಡಿದ್ದಳು. "ಬೆಳೆದು ನಿಂತ ತಂಗಿಯರಿಗೆ ಇನ್ನೂ ಮದುವೆ ಇಲ್ಲ, ಆಗಲೇ ನಿನ್ನ ಮಗಳಿಗೆ ಮದುವೆಗೇನು ಅವಸರ? ಸುನೀತಾಗೆ ಇನ್ನು ಹದಿನೆಂಟೂ ತುಂಬಿಲ್ಲ ಎಂಬ ಅವಳ ತರ್ಕದಲ್ಲಿಯೂ ಹುರುಳಿತ್ತು. 

"ಎಷ್ಟಾಗಲಿ ನಿನ್ನ ಹೆಂಡತಿ ಶ್ರೀಮಂತರ ಮಗಳು, ತುಂಬಿಕೊಂಡು ಬಂದಿದ್ದಾಳೆ, ನಿನ್ನೂ ಆಂಗೈಲಿ ಇಟ್ಕೊಂಡಿದ್ದಾಳೆ, ನೀನು ಕುಣಿಯೋ ನನಗೇನು ಕರ್ಮ, ನಾನು ಮದುವೆಗೆ ಬರೋಲ್ಲ, ಅಲ್ಲಿ ಬಂದವರೆದುರು ಅಳುತ್ತಾ ಅಕ್ಕಿ ಹಾಕುವುದಕ್ಕಿಂತ ಮನೆಯಲ್ಲಿಯೇ ಇರುತ್ತೇನೆ'' ಎಂದಿದ್ದಳು. ಅಜ್ಜಿಗೆ ನಾನು ನಮಸ್ಕರಿಸಲು ಹೋದಾಗ, 

"ನಿಮ್ಮಪ್ಪ, ನಿಮ್ಮವ್ವನ ಪಾಪ ನಿಮಗ ತಟ್ಟದ್ ಬ್ಯಾಡವ್ವ ಚಂದಾಗಿರು" ಎಂದು ಬಾಯ್ತುಂಬಾ ಹರಿಸಿದ್ದಳು. ಅಜ್ಜಿಯ ಗುಣಕ್ಕೆ ನಾನೂ ಇಂದಿಗೂ ಋಣಿ. 

ಅಲ್ಲಿಂದ ಇಲ್ಲಿಗೆ ಮುವತ್ತ್ಮೂರು ವರ್ಷಗಳೇ ಕಳೇದಿವೆ. ಕಥೆಗಳಲ್ಲಿ, ಸಿನಿಮಾಗಳಲ್ಲಿ ಆದಷ್ಟೇ ಸುಲಭವಾಗಿ ಅತ್ತೆಯಂದಿರು ಮದುವೆಗಳಾಗಿ ಅವರವರ ಗಂಡನ ಮನೆಯಲ್ಲಿ ಚೆನ್ನಾಗಿಯೇ ಇದ್ದಾರೆ. ಆದರೆ ಚಿಕ್ಕ ಅತ್ತೆ ಮಾತ್ರ ತುಂಬಾ ಮುಂಗೋಪಿ ಬಾಯಿಗೆ ಬಂದದ್ದನ್ನು ಮಾತಾಡಿಯೇ ತೀರುತ್ತಾಳೆ. ಆದರೆ ಮನಸ್ಸು ಮಾತ್ರ ಅಷ್ಟೇ ಮೃದು. ಅವಳಿರುವುದು ಮೈಸೂರಿನಲ್ಲಿ ನಾವೆಲ್ಲ ಟೂರ್ಗೆ ಹೋದಾಗ ಎರಡು ದಿನ ನಮ್ಮನ್ನೆಲ್ಲ ಮನೆಯಲ್ಲಿಯೇ ಇಟ್ಟುಕೊಂಡು ಊರೆಲ್ಲ ತಿರುಗಾಡಿಸಿದಳು, ತರತರದ ಅಡುಗೆ ಮಾಡಿ ತುಂಬಾ ಪ್ರೀತಿ ತೋರಿಸಿದ್ದಳು. ಆಗಾಗ ಅಪ್ಪನನ್ನು ನೆನೆದು ಒದರಾಡುವುದೂ ನಡದೇ ಇತ್ತು. ಅವಳು ಹೇಳುವುದೂ ನಿಜ ಅವರೆಲ್ಲರೂ ಈಗ ಕಾರಿನಲ್ಲಿಯೇ ಓಡಾಡುತ್ತಿದ್ದಾರೆ ಅವರ ಗಂಡ, ಮಕ್ಕಳು ಅವರನ್ನು ಹಾಲು ತುಪ್ಪದಲ್ಲಿಯೇ ಕೈ ತೊಳೆಸುತ್ತಿದ್ದಾರೆ. ಅವರ ಗ್ಯಾರೇಜ್ ನಲ್ಲಿ ಕೆಲಸ ಮಾಡುವ ಸಲಿಂ ಕೂಡಾ ಅವರ ಜೊತೆಯಲ್ಲಿಯೇ ಕುಳಿತು ಊಟ ಮಾಡುತ್ತಾನೆ. ಅವರ ಅಂತಸ್ತಿಗೇನೂ ಧಕ್ಕೆಯಾಡುತ್ತಿಲ್ಲವಲ್ಲ. ಆದರೆ ಇದನ್ನೆಲ್ಲ ನೋಡಲು ಮಮ್ಮಿನೂ ಇಲ್ಲ, ಅಪ್ಪನೂ ಇಲ್ಲ. 

ಈಗ ಅವರೀರ್ವರೂ ಇಲ್ಲದಿದ್ದರೂ ಅತ್ತೆಯಂದಿರು ನಮ್ಮೊಡನೆ ಚೆನ್ನಾಗಿಯೇ ಇದ್ದಾರೆ. ಮಗ ರವಿ ಮಗಳು ರಜನಿ ಇಬ್ಬರೂ ಕೇಳುತ್ತಿದ್ದರು. ಎಲ್ಲರಿಗೂ ರಿಲೇಷನ್ ಇದೆ. ನಮಗೆ ಯಾರೂ ಇಲ್ಲವಾ? ಎಲ್ಲಿಗಾದರೂ ಹೋಗಬೇಕೆಂದರೆ ನಾವು ಎಲ್ಲಿಗೆ ಹೋಗಬೇಕು? ಅವರ ಪ್ರಶ್ನೆಗಳ ಹಿಂದಿನ ನೋವು ನನಗೂ ಅರ್ಥವಾಗುತ್ತಿತ್ತು. ನಾನೇನು ಮಾಡಲಿ ಇವರ ಮನೆಯಲ್ಲಿಯೂ ಇವರು ಒಬ್ಬರೇ. ಇದ್ದವರೂ ಸ್ವರ್ಗಸ್ಥರಾಗಿದ್ದರಿಂದ ನನ್ನಲ್ಲಿ ಉತ್ತರವಿರಲಿಲ್ಲ ನಿಟ್ಟುಸಿರೊಂದನ್ನು ಬಿಟ್ಟು. 

ಎರಡು ವರ್ಷಗಳ ಹಿಂದೆ ನನಗೆ ಬಿ.ಪಿ, ಶುಗರ್ ಹೆಚ್ಚಾಗಿತ್ತು ಕೋಲೆಸ್ಟ್ರಾಲ್ ಕೂಡಾ ನಾನೇನು ಕಮ್ಮಿ ಎನ್ನುತ್ತಿತ್ತಂತೆ ಆಗ ಹೇಗೋ ನನ್ನ ಪರಿಸ್ಥಿತಿ ತಿಳಿದ ನನ್ನ ಆತ್ತೆಯರು ಇದ್ದಕ್ಕಿದ್ದಂತೆ ಆಸ್ಪತ್ರೆಗೆ ಬಂದಿದ್ದರು. ಅಂದಿನಿಂದ ಮತ್ತೆ ಸಂಬಂಧ ಕುಡಿಯೊಡೆದಿತ್ತು. ಈಗ ಎಲ್ಲರ ಫೋನ ನಂಬರಗಳು ಇವೆ. ಮೇಲಿಂದ ಮೇಲೆ ವಿಚಾರಿಸುತ್ತಾರೆ. ನನ್ನ ಮಗ ಲವ್ ಮ್ಯಾರೆಜ್ ಆದಾಗ ದೊಡ್ಡತ್ತೆ ಬಂದು ಸಮಾಧಾನ ಮಾಡಿ ಊರಿಗೂ ಕರೆದುಕೊಂಡು ಹೋಗಿದ್ದಳು ಹದಿನೈದು ದಿನ ಅವಳ ಉಪಚಾರವನ್ನು ನಾನು ಲೈಫ್ನಲ್ಲಿ ಮರೆಯುವುದಿಲ್ಲ. ಅಂದಿನಿಂದ ಒಡನಾಟ ಹೆಚ್ಚಾಗಿದೆ. 

ನನಗೇ ಆಶ್ಚರ್ಯವಾಗುತ್ತಿದೆ. ಮೊದಲಿನ ಬಿಂಕ, ಬಿಗುಮಾನ ನನ್ನಲ್ಲೂ ಇಲ್ಲ. ಕುಳಿತರೆ ಸೋಫಾ ತುಂಬ ಕಾಣುವ ದೇಹ ಹೊತ್ತು ತಿರುಗಾಡುವ ಮನಸ್ಸೂ ಇಲ್ಲ. ತಿನ್ನುಣ್ಣುವ ಆಶೆಗಳು ಊಳಿದಿಲ್ಲ. ಇದ್ದೊಬ್ಬ ಮಗಳ ಮದುವೆಯ ಚಿಂತೆಯೇ ಆಗಿದೆ. ಯಾರೋ ಮಾಡಿದ ಕರ್ಮ ಯಾರಿಗೋ ಎನ್ನುವಂತೆ ನಮ್ಮಿಬ್ಬರಿಗೂ ವಿರುದ್ಧದ ರೂಪ, ಬಣ್ಣ, ಆಕಾರವಾಗಿ ಬೆಳೆದ ರಜನಿ ತುಂಬಾ ಗುಣವಂತೆ. ಆದರೆ ಅವಳನ್ನು ನೋಡಿದ ಎಲ್ಲರೂ ನಮ್ಮ ಹಣ ಅಂತಸ್ತು, ಬಂಗಾರದೊಡವೆಗಳನ್ನು ಕಡೆಗಣ್ಣಿನಿಂದಲೂ ನೋಡದೇ ಹೋಗುತ್ತಿದ್ದುದು ನನ್ನ ಮನಸ್ಸಿನ ತಳಮಳಕ್ಕೆ ಕಾರಣವಾಗಿತ್ತು. ಇಂದೂ ಕನ್ಯಾ ಪರೀಕ್ಷೆಗೆ ಬರುವವರಿದ್ದಾರೆ. ಆ ಚಿಂತೆಯಿಂದಲೇ ನಿದ್ದೆ ಇಲ್ಲ. ನಿಜವಾಗಿಯೂ ರಜನಿ ಅಪರಂಜಿ ಇರುವೆಗೂ ನೋವು ಕೊಡದ ಮಗಳಿಗೆ ಶಿಕ್ಷೆ ಬೇಡ ಎನಿಸಿ "ದೇವರೇ ಅವಳಿಗೆ ಅನ್ಯಾಯವಾಗದಿರಲಿ" ಎಂದು ಮನ ಬೇಡುತ್ತಿತ್ತು. ಅವಳ ಮದುವೆ ನೋಡುವ ಭಾಗ್ಯವಾದರೂ ಇದೆಯೇ ಎಂದು ಮನ ನೊಂದುಕೊಳ್ಳುತ್ತಿತ್ತು. 

ಲೇ ಇಲ್ಲದ್ದೆಲ್ಲ ಯೋಚಿಸಬೇಡ ಎರಡು ಸಾರಿ ಅಟ್ಯಾಕ್ ಆಗಿದೆ ಮತ್ತೆನಾದರೂ ಆದರೆ ರಜನಿಗೆ ಯಾರು ಗತಿ? ಇವರ ಮಾತುಗಳು ಕಿವಿಗೆ ಬೀಳುತ್ತಿದ್ದಂತೆಯೇ ಯೋಚಿಸಿದೆ ಹೌದಲ್ಲವಾ ನಾನೇ ಇಲ್ಲದ ಮೇಲೆ ಮಗಳಿಗೆ ದಿಕ್ಕು ಯಾರು? ಇಂದು ರಜನಿಯನ್ನು ನೋಡಲು ಬರುವವರಿದ್ದಾರೆ. ಏನೆನ್ನುತ್ತಾರೆಯೋ ಎನ್ನುವ ತುಮುಲದಿಂದ ನಾನು ಚಡಪಡಿಸುತ್ತಿರುವುದು ಇವರಿಗೆ ಗೊತ್ತಾಗಿಯೇ ಸಮಾಧಾನಿಸುತ್ತಿದ್ದಾರೆ ಎಂದು ತಿಳಿದು ಏನೂ ಇಲ್ಲವೆಂಬಂತೆ ಎದ್ದು ಮುಂದಿನ ತಯಾರಿಕಡೆ ಗಮನ ಹರಿಸಿದೆ. 

ಆಳುಗಳು ಚಹಾ ತಿಂಡಿಗಳನ್ನೆಲ್ಲ ತಯಾರಿಸಿದ್ದರು. ರಜನಿ ಎಷ್ಟು ಹೇಳಿದರೂ ಸಿಂಪಲ್ಲಾಗಿ ಅಲಂಕಾರ ಮಾಡಿಕೊಂಡಿದ್ದಳು. ಪೆಟ್ಟಿಗೆ ಬಂಗಾರವಿದ್ದರೂ ಅವಳು ಒಂದೆಳೆ ಚೈನ್ ಮಾತ್ರ ಹಾಕಿಕೊಳ್ಳುವುದು. ಅದು ನನ್ನ ಒತ್ತಾಯಕ್ಕೆ! ಮೊನ್ನೆ ದೀಪಾವಳಿಗೆ ಕೊಂಡ ಸೀರೆಯನ್ನು ಉಟ್ಟಿದ್ದಳು. ಅವಳು ತನ್ನ ಬಣ್ಣದ ಬಗ್ಗೆ ತಲೆ ಕೆಡಿಸಿಕೊಂಡವಳಲ್ಲ ಆದರೆ ಈ ವಧು ಪರೀಕ್ಷೆ ಎಂಬುದು ಅವಳಿಗೆ ತಲೆ ನೋವಾಗಿದೆ.

ಸ್ವಾಮಿಗಳೋರ್ವರು "ಯಾವಾಗಲೂ ಮನೆ ಮುಂಬಾಗಿಲನ್ನು ಮುಚ್ಚಿಕೊಂಡಿರಬಾರದು" ಎಂದು ಹೇಳಿದ್ದರು. ಆದ್ದರಿಂದ ಯಾವಾಗಳು ಮುಚ್ಚಿಯೇ ಇರುತ್ತಿದ್ದ ಬಾಗಿಲನ್ನು ಈಗ ತೆರೆದು ಇಟ್ಟಿರುತ್ತೇನೆ. ಸೋಫಾದಲ್ಲಿ ಕುಳಿತು ಟಿ.ವ್ಹಿಯಲ್ಲಿ ಯಾವುದೋ ಹಾಡು ಬರುತ್ತಿತ್ತು ನೋಡುತ್ತಿದ್ದೆ. ಇದ್ದಕ್ಕಿದ್ದಂತೆ ತೆರೆದ ಬಾಗಿಲಿನಿಂದ ನಾಲ್ಕೂ ಅತ್ತೆಯಂದಿರು (ಒಬ್ಬ ಅತ್ತೆ ತೀರಿಕೊಂಡಿದ್ದಳು) ಬಂದಾಗ ನನಗೆ ಸಂತೋಷ, ದಿಗಿಲು ಏಕಕಾಲಕ್ಕೆ. ಖುಷಿಯಿಂದಲೇ ಬರಮಾಡಿಕೊಂಡೆ. ರಜನಿಯೂ ಗೆಲುವಾದಳು. ಏಕೋ ಗೊತ್ತಿಲ್ಲ ನನಗೂ ಎಂದಿಲ್ಲದ ನಿರಾಳ. ಇವರು ಎದ್ದು ಹೋಗಿ ಕಸ್ತೂರಿ ಕಡೆಯಿಂದ ಚಹಾ ನಾಷ್ಟಾ ತರಿಸಿದರು. ಚಹಾ ಕುಡಿಯುತ್ತ "ನೀವೆಲ್ಲ ಬಂದಿದ್ದು ಛಲೋ ಆತು ರಜನಿ ನೋಡಲು ಬರುವವರಿದ್ದಾರೆ, ಅವರು ಬಂದು ಹೋದ ಮೇಲೆ ಊಟ ಮಾಡಿ ಎಲ್ಲಿಗಾದರೂ ತಿರುಗಾಡಿಕೊಂಡು ಬರೋಣ" ಎಂದೆ. 

ಚಹಾ ಕುಡಿದ ಮೇಲೆ ದೊಡ್ಡ ಅತ್ತೆ "ಇಲ್ಲ ಅವರು ಕನ್ಯಾ ಪರೀಕ್ಷೆಗೆ ಬರುವುದಿಲ್ಲ, ಅವರನ್ನು ನಾವೇ ಅಲ್ಲಿಂದ ಅಲ್ಲಿಯೇ ಕಳುಹಿಸಿ ಬಂದಿದ್ದೇವೆ ಎಂದು. ನಾನು ಆತಂಕದಿಂದ "ಆಂ" ಎಂದೆ. 

"ಹೌದು ಈಗಾಗಲೇ ರಜನಿ ಕನ್ಯಾ ಪರೀಕ್ಷೆ ಮುಗಿದಿದೆ. ಯಾವುದೇ ದಕ್ಷಿಣೆ, ದಾಕ್ಷಿಣ್ಯ ಇಲ್ಲದೇ ಕೊಡುವುದಾದರೆ ರಜನಿ ಇಂದಿನಿಂದ ನನ್ನ ಸೊಸೆ ನನ್ನ ಮಗ ನಿಖಿಲ್ ನ ಹೆಂಡತಿ". ಎಂದು ದೊಡ್ಡ ಧ್ವನಿಯಲ್ಲಿ ಘೋಷಿಸಿದಾಗ ನನಗೆ ಮಾತೇ ಹೊರಡಲಿಲ್ಲ. ಈ ಕ್ಷಣಕ್ಕೆ ನನಗೆ ನನಗೆ ನೆನಪಾಗಿದ್ದು ಆ ದಿನ ಅಜ್ಜಿಯನ್ನು ನನ್ನ ಮದುವೆಗೆ ಕರೆಯಲು ಹೋದಾಗ "ಒಂದಿಲ್ಲ ಒಂದಿನ ಸಂಬಂಧಾ ಬೇಕಾಗ್ತೈತೋ" ಅಂದದ್ದು ನೆನಪಾಗಿ ಕಣ್ಣುಗಳು ಒದ್ದೆಯಾದವು. 


ಸುದ್ದಿ ಓದಿ