ಭಿಕ್ಷುಕ
-ಭೋಜರಾಜ ಸೊಪ್ಪಿಮಠ
ಕೊಪ್ಪಳ
ಅವನಸಂಶಯ ನಿಜವಾಗತೊಡಗಿತು. ಮುಂದೇನು ಮಾಡಬೇಕೆಂಬುದೇ ತಿಳಿಯಲಿಲ್ಲ. ಎಲ್ಲಾ ರೀತಿಯಿಂದಲೂ ಪರೀಕ್ಷಿಸಿಯಾಯ್ತು. ಖಂಡಿತ ಇದಕ್ಕೊಂದು ಪರಿಹಾರ ಕಂಡು ಹಿಡಿದುಕೊಳ್ಳಲೇಬೇಕು. ಮುಂದೆ ತೊಂದರೆ ಅನುಭವಿಸುವದಕ್ಕಿಂತ ಈಗಲೇ ಎಚ್ಚೆತ್ತುಕೊಳ್ಳಬೇಕು. ಪೋಲೀಸರಿಗೆ ಕಂಪ್ಲೆಂಟ್ ಮಾಡಿದರೆ... ? ಛೇ! ಹಾಗೆ ಮಾಡಬಾರದು. ಈ ವಿಷಯ ಕೇಳಿದರೆ ಅವರು ಎನನ್ನಬಹುದು. ನಕ್ಕು ಅಪಹಾಸ್ಯ ಮಾಡುತ್ತಾರಷ್ಟೇ. ಹಾಗಂತ ಬಿಡುವಂತಿಲ್ಲ. ತನ್ನ ಸ್ನೇಹಿತರ ಎದುರಿನಲ್ಲಿ ಹೇಳಿಕೊಳ್ಳಲು ಕೂಡಾ ಅಪಹಾಸ್ಯ ಮಾಡುವರೇನೋ ಎಂಬ ಭಯ. ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ಯಾವ ನಿಧರ್ಾರ ತೆಗೆದುಕೊಳ್ಳದೇ ಸಂದಿಗ್ಧತೆಯಲ್ಲಿಯೇ ನಿಂತಿದ್ದ.
ಒಂದು ಕ್ಷಣ ಆ ಮೂಲೆಯತ್ತ ನೋಡಿದ. ಅವನು ಅಲ್ಲಿಯೇ ನಿಂತಿದ್ದ. ತನ್ನತ್ತ ತದೇಕ ಚಿತ್ತನಾಗಿ ನೋಡುತಿದ್ದಾನೆ. ಆ ಕಣ್ಣುಗಳಲ್ಲಿ ಎನೋ ತೀಕ್ಷ್ಣತೆ ಇದೆ. ಅದೇ ನೋಟ, ಅದೇ ವೇಷ, ಅದೇ ಗತ್ತು.
ಕಪ್ಪಗಿನ ಮುಖದಲ್ಲಿ ಗಡ್ಡ, ಮೀಸೆ, ತಲೆಗೂದಲುಗಳು ಒಂದಾಗಿ ವಿಕಾರವಾಗಿ ಕಾಣಿಸುತಿದ್ದ. ಮಾಸಿದ ಪ್ಯಾಂಟ್. ಸಂಪೂರ್ಣವಾಗಿ ಹರಿದ ಒಂದು ಶರ್ಟ, ಅವರಿವರ ಮುಂದೆ ಕೈ ಒಡ್ಡಿ ಬೇಡಿ ಪಡೆದ ಕೈಯಲ್ಲಿನ ನಾಣ್ಯಗಳು. ಇಂಥ ಒಬ್ಬ ಭಿಕ್ಷುಕ ತನ್ನನ್ನೂ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ಬೆನ್ನಟ್ಟುತಿದ್ದಾನೆಂದರೆ...?ಎನಿರಬಹುದು? ಅವನೇನು ಕಳ್ಳನೇ...? ಕೊಲೆಗಾರನೇ? ಎನಾದರೂ ಸಂಚು ಹೂಡಿರಬಹುದೇ? ತಾನು ಹೋದ ಕಡೆಗೆಲ್ಲಾ ಬರುವುದು, ನಿಂತ ಕಡೆ ನಿಲ್ಲುವುದು, ಎತ್ತ ಕಡೆಯೂ ಲಕ್ಷ್ಯವಿರಿಸದೇ ತನ್ನತ್ತ ಗಮನಿಸುತ್ತಿರುವುದು ವಿಚಿತ್ರವೆನ್ನಿಸುತ್ತಿದೆ.
ಅವನು ಯೋಚಿಸುತ್ತಲೇ ಬಸ್ ಸ್ಟ್ಯಾಂಡಿನಿಂದ ಮುಖ್ಯ ರಸ್ತೆಗೆ ಬಂದು ಒಮ್ಮೆ ಹಿಂದುರಿಗಿ ನೋಡಿದ. ಭಿಕ್ಷುಕ ಆಗಲೇ ಹಿಂಬಾಲಿಸುತಿದ್ದ. ತನ್ನ ಆಫೀಸಿಗೆ ಹೋಗಬೇಕೆಂದರೆ ಮುಖ್ಯ ರಸ್ತೆಯಿಂದಲೇ ಹೋಗುತಿದ್ದ. ಇಂದು ಆ ಭಿಕ್ಷುಕನನ್ನು ಪರೀಕ್ಷಿಸಲೆಂದು ಎಲ್ಐಸಿ ಆಫೀಸಿನ ಪಕ್ಕದಿಂದ ಹಾದು ಹೋಗುತಿದ್ದ ಚಿಕ್ಕ ಬೀದಿಯತ್ತ ಒಮ್ಮೆಲೇ ಸರಿದು ನಡೆಯತೊಡಗಿದ. ತುಸು ದಾರಿ ನಡೆದ ಅವನು ಹಿಂದಿರುಗಿ ನೋಡಿದ. ಭಿಕ್ಷುಕ ತನ್ನತ್ತಲೇ ಬರುತಿದ್ದಾನೆ.
ಆ ಬೀದಿ ತುಸು ನಿರ್ಜನವಾಗಿತ್ತು. ಹೀಗಾಗಿ ಭಿಕ್ಷುಕ ಬೇಗ ಬೇಗ ಹೆಜ್ಜೆ ಹಾಕಿದ. ಇದನ್ನು ಗಮನಿಸಿದ ಅವನೂ ಬೇಗನೇ ನಡೆದು ಎಡಕ್ಕಿರುವ ಸಕರ್ಾರಿ ಆಸ್ಪತ್ರೆ ಮುಂದೆ ಹೊರಟ. ಅಲ್ಲಿ ಜನ ಸಂದಣಿ ಇರುವದನ್ನು ಕಂಡ ಭಿಕ್ಷುಕ ಅಮಾಯಕನಂತೆ ಹಿಂದೆ ನಡೆದ.
ಆಸ್ಪತ್ರೆಯಿಂದ ತನ್ನಾಫೀಸಿಗೆ ಹೋಗಬೇಕೆಂದರೆ ಅಥವಾ ಮುಖ್ಯ ರಸ್ತೆಗೆ ಹೋಗಬೇಕೆಂದರೆ ಮುಂದೊಂದು ನಿರ್ಜನ ಸಂದಿಯಿಂದಲೇ ಹೋಗಬೇಕು. ಅತ್ತಲೇ ಹೆಜ್ಜೆ ಹಾಕಿದ.
"ಎ! ನಿಂತ್ಕೋ ಇಲ್ಲಿ ಭಿಕ್ಷುಕ ಅಧಿಕಾರಯುತನಾಗಿ ಕೂಗಿದ. ಮೊದಲೇ ಹೆದರಿದ್ದ ಅವನು ಅದನ್ನು ತೋರ್ಪಡಿಸಿಕೊಳ್ಳದಿರಲು ಗತ್ತಿನಿಂದ "ಎನು?" ಎಂದು ಕೇಳಿದ. "ನಿನ್ನತ್ರ ರೊಕ್ಕ ಎಷ್ಟಿದೆ?" ಕೇಳಿದ. ಖಂಡಿತ ಇವನು ಕಳ್ಳ. ಸುತ್ತ ಮುತ್ತ ನೋಡಿದ. ಯಾರೂ ಕಾಣುತ್ತಿಲ್ಲ. "ಎಷ್ಟಿದ್ರೆ ನಿನಗೇನಂತೆ" ಗದರಿಸುವವನಂತೆ ಒದರಿದ. "ಭಿಕ್ಷೆ ಬೇಕು ಅದಕ್ಕೆ" ಭಿಕ್ಷುಕ ಉತ್ತರಿಸಿದ.
"ಭಿಕ್ಷೆ ಕೇಳೋದು ಹೀಗೇನಾ? ದಿನಾಲೂ ಈ ರೀತಿ ಹಿಂಬಾಲಿಸೋದು ಸರಿನಾ?" ಭಯದಲ್ಲಿ ತಾನೇನು ಮಾತನಾಡುತಿದ್ದೇನೆಂಬುದನ್ನು ಅರಿಯದೇ ಒದರಿದ. "ಹಾಗಾದ್ರೆ ದಿನಾಲೂ ನಾನು ಹಿಂಬಾಲಿಸೋದನ್ನು ಗಮನಿಸಿದ್ದೀಯಾ?" ಭಿಕ್ಷುಕ ಕೇಳಿದ. ಹೌದೆನ್ನಬಾರದು. ಒಪ್ಪಿಕೊಂಡರೆ ಅವನ ಕೈಯೇ ಮೇಲಾಗಬಹುದೆಂದೆನಿಸಿ ಮುಂದೆ ಹೆಜ್ಜೆ ಹಾಕತೊಡಗಿದ. "ನಿನ್ನ ಜೊತೆ ಮಾತನಾಡುವದಿದೆ. ಸ್ವಲ್ಪ ನಿಂತ್ಕೋಳ್ಳೋ ಶೇಖರ್ ಭಿಕ್ಷುಕ ಕೂಗಿದ. 'ಅರೇ ನನ್ನ ಹೆಸರು ಹೇಗೆ ಗೊತ್ತು ಈ ಭಿಕ್ಷುಕನಿಗೆ' ಆಶ್ಚರ್ಯದಿಂದ ನೋಡುತ್ತಾ ನಿಂತ. "ಯಾಕೆ ಆಶ್ಚರ್ಯವಾಗ್ತಿದೆನಾ? ನಾನು ಯಾರು ಅಂತ ಗೊತ್ತಾಗಲಿಲ್ಲಾ?" ಕೇಳಿದ. ಅವನು ಎನೊಂದೂ ಮಾತನಾಡದೇ ಬಿಟ್ಟ ಕಣ್ಣು ಬಿಟ್ಟಂತೆ ನಿಂತಿದ್ದ. "ನಾನೋ ಪ್ರಶಾಂತ್ ಗುರುತು ಸಿಗಲಿಲ್ಲಾ?" ಭಿಕ್ಷುಕ ಕೇಳಿದ.
"ಪ್ರಶಾಂತ್ ಅಂದರೆ ಯುನಿವರ್ಸಿಟಿಯಲ್ಲಿ ನನ್ನ ಕ್ಲಾಸ್ಮೀಟ್ ಆಗಿದ್ದವನು ನೀನೇನಾ?" ತಡವರಿಸುತ್ತಲೇ ಶೇಖರ್ ಕೇಳಿದ. "ಅದೇ ಪ್ರಶಾಂತ್ ನಾನು" ಉತ್ತರಿಸಿದ.
"ಇದೇನೋ ಹೀಗ್ಯಾಕಾಗಿದ್ದೀಯಾ? ನಿನಗೇಕೆ ಇಂಥ ಅವಸ್ಥೆ" ಶೇಖರ್ ಅನುಕಂಪದಿಂದ ಕೇಳಿದ. "ಎಲ್ಲಾ ನನ್ನ ಹಣೆಬರಹ" ನಿಟ್ಟುಸಿರು ಬಿಟ್ಟವನಂತೆ ಗೋಣು ಹಾಕಿದ. "ಮಾತನಾಡಿಸೋಕೆ ಹೀಗೆ ಬೆನ್ನಟ್ಟಿ ಬರೋದಾ? ಜನರ ಮಧ್ಯದಲ್ಲಿ ಮಾತನಾಡಿಸಿದರೆ ನೀನು ನನ್ನ ಸ್ನೇಹಿತ ಅಂತ ಹೇಳಿಕೊಳ್ಳೋಕೆ ನನಗೇನು ಕೀಳರಿಮೆ ಇಲ್ಲ ಕಣೋ" ನುಡಿದ ಶೇಖರ್. "ಅಲ್ಲೇ ಇರೋದು ವಿಷಯ. ನಾನೀಗ ಕ್ರೈಮ್ ಬ್ರಾಂಚ್ನಲ್ಲಿ ಇನ್ಸಪೆಕ್ಟರ್. ಈ ನಗರದಲ್ಲಿ ಖೋಟಾ ನೋಟಿನ ಹಾವಳಿ ಅತಿಯಾಗಿದೆ ಎಂಬ ಇನ್ಫಾರ್ಮೇಷನ್ ನಮ್ಮ ಡಿಪಾರ್ಟಮೆಂಟಿಗೆ ಬಂದಿತ್ತು. ಅದನ್ನು ಕಂಡು ಹಿಡಿಯೋಕೆ ಜಾಲ ಬೀಸಿದ್ವಿ. ಹೀಗಾಗಿ ನನಗೆ ಈ ವೇಷ. ಐದಾರು ದಿನಗಳಿಂದ ನಿನ್ನ ಮಾತನಾಡಿಸೋಕೆ ಪ್ರಯತ್ನಿಸಿದೆ. ನೀನು ಒಂಟಿಯಾಗಿ ಸಿಗಲಿಲ್ಲ. ನಾನ್ಯಾರಂತ ಜನಗಳಿಗೆ ಗೊತ್ತಾಗಬಾರದು. ಆದ್ರೆ ನೀನು ನನ್ನಿಂದ ತಪ್ಪಿಸಿಕೊಳ್ಳುತಿದ್ದಿ. ನಿನ್ನೊಬ್ಬನೊಂದಿಗೆ ಮಾತನಾಡೋಕೆ ನಾನೆಷ್ಟು ಪ್ರಯತ್ನ ಪಟ್ಟೆ ಗೊತ್ತಾ?" ನಗುತ್ತಾ ನುಡಿದ ಪ್ರಶಾಂತ್. ಆಶ್ಚರ್ಯದೊಂದಿಗೆ ಮೂಕನಾಗಿ ಪ್ರಶಾಂತನನ್ನೇ ನೋಡುತಿದ್ದು ಬಿಟ್ಟ.