ಧಾರವಾಡ - ಹುಬ್ಬಳ್ಳಿ

ಡಿಜಿಟಲ್ ಯುಗದಲ್ಲಿ ಗ್ರಾಮೀಣ ಮಕ್ಕಳಿಗೂ ತಂತ್ರಜ್ಞಾನ ಅರಿವು ಅಗತ್ಯ

ಡಿಜಿಟಲ್ ಯುಗದಲ್ಲಿ ಗ್ರಾಮೀಣ ಮಕ್ಕಳಿಗೂ ತಂತ್ರಜ್ಞಾನ ಅರಿವು ಅಗತ್ಯ

ಲೋಕದರ್ಶನ ವರದಿ 

            ಧಾರವಾಡ 05 : ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐಟಿ, ಬಿಟಿ, ಸಿಎಸ್ ಹಾಗೂ ಎಲೆಕ್ಟ್ರಾನಿಕ್ಸ ಕ್ಷೇತ್ರಗಳು ನಮ್ಮನ್ನು ಆಕರ್ಷಿಸುತ್ತಿವೆ. ಅಲ್ಲದೇ ಎಐ ಹಾಗೂ ಮಷಿನ್ ತಂತ್ರಜ್ಞಾನ ಬಹಳ ಪ್ರಭಾವಿಸುತ್ತಿರುವ ಇಂತಹ ಸಂದರ್ಭದಲ್ಲಿ ಗ್ರಾಮೀಣ ಮಕ್ಕಳೂ ಕೂಡ ಮಾಹಿತಿ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಾರ್ಯಾಲಯದ ಉಪನಿರ್ದೇಶಕ ಗೀರೀಶ ಪದಕಿ ಅಭಿಪ್ರಾಯಪಟ್ಟರು. 

           ರಾಯಾಪುರದ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಟಾಟಾ ಕನ್ಸಲ್ಟನ್ಸಿ ಸರ್ವಿಸ್ ಸಹಯೋಗದಲ್ಲಿ ಏರಿ​‍್ಡಸಿದ್ದ ವಿಭಾಗ ಮತ್ತು ರಾಜ್ಯಮಟ್ಟದ ಗ್ರಾಮೀಣ ಐಟಿ ಕ್ವಿಜ್ ಉದ್ಘಾಟಿಸಿ ಮಾತನಾಡಿದರು. ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಜ್ಞಾನ, ಡಿಜಿಟಲ್ ಸಾಕ್ಷರತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಐಟಿ ರಸಪ್ರಶ್ನೆ ಸಹಕಾರಿಯಾಗಲಿದೆ.

             ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ತಂತ್ರಜ್ಞಾನವು ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ಸಂವಹನ ಮತ್ತು ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ. ಇಂದಿನ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಕೇವಲ ಬಳಸುವವರಾಗದೆ, ಅದರ ಹಿಂದಿನ ವಿಜ್ಞಾನವನ್ನು ಅರ್ಥಮಾಡಿಕೊಳ್ಳುವವರಾಗಬೇಕು. ಡಿಜಿಟಲ್ ಜ್ಞಾನ, ಸೃಜನಶೀಲತೆ ಮತ್ತು ನವೀನ ಚಿಂತನೆಗಳು ಭವಿಷ್ಯದ ಸಮಾಜ ನಿರ್ಮಾಣಕ್ಕೆ ಅತ್ಯಗತ್ಯ ಎಂದರು.

             ಇಂತಹ ಕಾರ್ಯಕ್ರಮಗಳು ಶಾಲಾ ಶಿಕ್ಷಣವನ್ನು ತಂತ್ರಜ್ಞಾನ ಸ್ನೇಹಿ, ವಿದ್ಯಾರ್ಥಿ ಕೇಂದ್ರಿತ ಮತ್ತು ಅನುಭವಾಧಾರಿತವಾಗಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತವೆ ಎಂದರು.    ಕಾರ್ಯಕ್ರಮದ ನೋಡಲ್ ಅಧಿಕಾರಿ ಹಾಗೂ ವಿಜ್ಞಾನ ವಿಷಯ ಪರೀವೀಕ್ಷಕಿ  ಡಾ.ಗಿರಿಜಾ ಲಮಾಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧೆಯು ಕೇವಲ ಕಂಪ್ಯೂಟರ್ ಜ್ಞಾನಕ್ಕೆ ಸೀಮಿತವಾಗದೆ,

             ಆಧುನಿಕ ಡಿಜಿಟಲ್ ಸಮಾಜದಲ್ಲಿ ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ವೇದಿಕೆಯಾಗಲಿ. ಜ್ಞಾನ, ಕುತೂಹಲ ಮತ್ತು ತಂತ್ರಜ್ಞಾನದ ಸಮನ್ವಯದಿಂದ ಭವಿಷ್ಯದ ಡಿಜಿಟಲ್ ಸಮರ್ಥ ನಾಗರಿಕರನ್ನು ರೂಪಿಸುವಲ್ಲಿ ಐಟಿ ರಸಪ್ರಶ್ನೆ ಸ್ಪರ್ಧೆಯು ಪ್ರೇರಣಾದಾಯಕ ಹೆಜ್ಜೆಯಾಗಿದೆ ಎಂದರು.   

            ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಿ.ವಿಭು ಭಟ್, ಸತ್ಯಸಾಯಿ ಲೋಕ ಸೇವಾ ಹೈಸ್ಕೂಲ್ ದಕ್ಷಿಣ ಕನ್ನಡ ಹಾಗೂ ದ್ವಿತೀಯ ಸ್ಥಾನವನ್ನು ಯಶವಂತಗೌಡ, ಚಿನ್ಮಯ ಸ್ವತಂತ್ರ ಪದವಿಪೂರ್ವ ಕಾಲೇಜು, ಲಕ್ಷ್ಮಿಸಾಗರ, ಕೋಲಾರ ಪಡೆದರು.  ಡಿವೈಪಿಸಿ ಎಂ.ಎಸ್ ಹುಡೇದಮನಿ, ಶಿಕ್ಷಣಾಧಿಕಾರಿಗಳಾದ ನಫೀಸ ದಾವಲಸಾಬನವರ, ಬಸವರಾಜ ಬ್ಯಾಳಿ, ಶೋಭಾ ಮೂರ್ತಿ, ಲಾಯ್ಟ ಸಾಲ್ಡಾನಾ, ಶ್ರೀನಿವಾಸ ಪೂಜಾರಿ, ವಿಜ್ಞಾನ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಪಾಟೀಲ ಕುಲಕರ್ಣಿ, ಜಿಲ್ಲಾ ಅಧ್ಯಕ್ಷ ಎನ್‌ಎಸ್ ಹಿರೇಮಠ,

              ಎಲ್ಲ ಜಿಲ್ಲೆಗಳ ವಿಷಯ ಪರೀವೀಕ್ಷಕರು, ಶಿಕ್ಷಕರು, ವಿಜ್ಞಾನ ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಪಾಲಕರು-ಪೋಷಕರು ಭಾಗವಹಿಸಿದ್ದರು. ಸಂಜೀವಕುಮಾರ ಭೂಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಮೋದ ವಾದಿರಾಜ ವಂದಿಸಿದರು.    ಸ್ಪರ್ಧೆಯಲ್ಲಿ ಕಂಪ್ಯೂಟರ್‌ನ ಇತಿಹಾಸ,

               ಹಾರ್ಡವೇರ್ ಮತ್ತು ಸಾಫ್ಟವೇರ್, ಕಂಪ್ಯೂಟರ್‌ನ ವಿವಿಧ ಭಾಗಗಳು, ಇಂಟರ್ನೆಟ್, ವೆಬ್‌ಸೈಟ್‌ಗಳು, ಸರ್ಚ್‌ ಎಂಜಿನ್‌ಗಳು, ಕಂಪ್ಯೂಟರ್ ಸಂಕ್ಷಿಪ್ತ ರೂಪಗಳು, ಡಿಜಿಟಲ್ ಸಂವಹನ, ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್‌, ಸೈಬರ್ ಸುರಕ್ಷತೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಆವಿಷ್ಕಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಯಿತು.

             ವಿವಿಧ ಸುತ್ತುಗಳಲ್ಲಿ ನಡೆದ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ತ್ವರಿತ ಚಿಂತನೆ, ತಾರ್ಕಿಕ ವಿಶ್ಲೇಷಣೆ, ನೆನಪಿನ ಶಕ್ತಿ, ಸಮಯಪ್ರಜ್ಞೆ ಮತ್ತು ತಂಡದ ಸಹಕಾರ ಮನೋಭಾವವನ್ನು ಬೆಳೆಸಿತು. ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ತೋರಿದ ಚುರುಕುತನ, ಆತ್ಮವಿಶ್ವಾಸ ಹಾಗೂ ಸ್ಪರ್ಧಾತ್ಮಕ ಮನೋಭಾವ ಗಮನ ಸೆಳೆಯಿತು. 


ಸುದ್ದಿ ಓದಿ