ಜೀವನದಲ್ಲಿ ಸಂಸ್ಕಾರವಂತರಾಗಿ ಬಾಳಬೇಕು: ಹರ್ಷಾನಂದಶ್ರೀ
ಜಮಖಂಡಿ 06: ಸತ್ಯವನ್ನು ನುಡಿಯಬೇಕು. ಧರ್ಮದಿಂದ ನಡೆಯಬೇಕು. ತಂದೆ-ತಾಯಿ, ಗುರುಹಿರಿಯರನ್ನು ಗೌರವಿಸಬೇಕು. ಜೀವನದಲ್ಲಿ ಸಂಸ್ಕಾರವಂತರಾಗಿ ಬಾಳಬೇಕು ಎಂದು ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದ ಶ್ರೀಗುರುದೇವ ಯೋಗಕೇಂದ್ರದ ಆಶ್ರಯದಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ 10 ದಿನಗಳ ಸಂಸ್ಕಾರ ಶಿಬಿರದ ನಡೆದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮೈಗೂರಿನ ಶಿವಾನಂದ ಮಠದ ಗುರುಪ್ರಸಾದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಜೀವನದಲ್ಲಿ ಕಲಿಯುವುದು ಬಹಳವಿದೆ. ಪ್ರತಿನಿತ್ಯ ಯೋಗ ಮತ್ತು ಧ್ಯಾನ ಮಾಡಿ ದೇಶಕ್ಕೆ ಯೋಗ್ಯ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅತಿಥಿಗಳಾಗಿ ಮಾತನಾಡಿ, ಹಿಂದೆ ಕೈಗೊಂಡ ಉತ್ತಮ ಕ್ರಿಯೆಗಳು ಮತ್ತು ಮಾಡಿದ ಒಳ್ಳೆಯ ಆಲೋಚನೆಗಳು ಮನಸ್ಸಿನ ಮೇಲೆ ಬೀರುವ ಪ್ರಭಾವನ್ನು ಸಂಸ್ಕಾರ ಎನ್ನುತ್ತಾರೆ ಎಂದರು.
ನಿವೃತ್ತ ಶಿಕ್ಷಕ ಗುರುನಾಥ ಸುತಾರ ಅತಿಥಿಗಳಾಗಿ ಮಾತನಾಡಿ, ಸಂಸ್ಕಾರವಿಲ್ಲದ ಮನೆ ಮತ್ತು ಮನಸ್ಸು ಸ್ಮಶಾನವಿದ್ದಂತೆ. ಆದ್ದರಿಂದ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದರು.
ನಿವೃತ್ತ ಶಿಕ್ಷಕ ಗಣಪತಿ ಗಲಗಲಿ ಅತಿಥಿಗಳಾಗಿ ಮಾತನಾಡಿ, ಸಂಸ್ಕಾರ ಶಿಬಿರದಲ್ಲಿ ಪಾಲ್ಗೊಂಡು ಜೀವನ ಪಾವನ ಮಾಡಿಕೊಂಡಿದ್ದೀರಿ. ತಂದೆ-ತಾಯಿಗಳ ಋಣ ದೊಡ್ಡದು. ಆದ್ದರಿಂದ ತಂದೆ-ತಾಯಿಗಳ ಮಾತುಗಳನ್ನು ಪಾಲಿಸಬೇಕು ಎಂದರು.
ಶಿಬಿರಾರ್ಥಿಗಳಾದ ಸಾಗರ ತೋಳಮಟ್ಟಿ, ಪ್ರಥ್ವಿರಾಜ ಹೊನಗೌಡ, ಕಿರಣ ಮುದ್ನೂರ, ಸಾಗರ ತಮದಡ್ಡಿ, ದರ್ಶಿಲ ಯಲಗಾರ, ಅಭಿಷೇಕ ಮಂಟೂರ, ಮಲ್ಲು ಮಂಟೂರ, ವಿನಾಯಕ ಪಾಟೀಲ, ನವೀನ ಶಿಬಿರ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಪಾಲಕರ ಪರವಾಗಿ ಬಿಆರ್ಪಿ ಎಸ್.ಆರ್. ಮುದ್ನೂರ ಮಾತನಾಡಿದರು.
ಸಾಗರ ಸ್ವಾಗತಿಸಿದರು. ಭಗವಂತ ನಿರೂಪಿಸಿದರು. ವಿಕಾಸ ಹಂಚಿನಾಳ ವಂದಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.