ಅಣ್ಣಿಗೇರಿ ಪಟ್ಟಣಕ್ಕೆ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಭೇಟಿ; ಮಳೆಹಾನಿ ಪ್ರದೇಶಗಳ ಪರೀಶೀಲನೆ
ಲೋಕದರ್ಶನ ವರದಿ
ಅಣ್ಣಿಗೇರಿ ಪಟ್ಟಣಕ್ಕೆ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಭೇಟಿ; ಮಳೆಹಾನಿ ಪ್ರದೇಶಗಳ ಪರೀಶೀಲನೆ
ಹುಬ್ಬಳ್ಳಿ ಅ.9: ಅಣ್ಣಿಗೇರಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಿನ್ನೆ ( ಅಕ್ಟೋಬರ್ 8) ಸಂಜೆಯಿಂದ ಮಧ್ಯರಾತ್ರಿಯವರೆಗೆ ಅಪಾರ ಪ್ರಮಾಣದ ಮಳೆ ಸುರಿದಿದೆ. ಅಣ್ಣಿಗೇರಿಯ ವಿವಿಧ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ, ಸಾರ್ವಜನಿಕರಿಗೆ ತೊಂದರೆ ಆಗಿದ್ದು, ಇಂದು ಬೆಳಿಗ್ಗೆ ಪ್ರಭಾರ ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಮಳೆ ಹಾನಿ ಪರೀಶೀಲಿಸಿದರು.
ಅವರು ಜಲಾವೃತವಾಗಿರುವ ಅಣ್ಣಿಗೇರಿಯ ಸುರಕೋಡ ಬಡಾವಣೆಗೆ ಭೇಟಿ ನೀಡಿ, ಪರೀಶೀಲಿಸಿದರು. ಬಡಾವಣೆ ನಿವಾಸಿಗಳೊಂದಿಗೆ ಚರ್ಚಿಸಿದರು. ತಹಶೀಲ್ದಾರ ಹಾಗೂ ಪುರಸಭೆ ಅಧಿಕಾರಿಗಳಿಗೆ ಬಡಾವಣೆಯಲ್ಲಿ ನಿಂತಿರುವ ನೀರು ಸಂಪೂರ್ಣವಾಗಿ ಹರಿದು ಹೋಗುವಂತೆ ತಕ್ಷಣ ಪರಿಹಾರ ಕ್ರಮಕೈಗೊಳ್ಳಲು ಮತ್ತು ಜಲಾವೃತ್ತ ಪ್ರದೇಶದ ಮನೆಗಳಲ್ಲಿನ ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲು ಸೂಚಿಸಿದರು.
ಬಡಾವಣೆ ಮೂಲ ನಕ್ಷೆಯನ್ನು ಪರೀಶೀಲಿಸಿ, ರಾಜಕಾಲುವೆ ಹಾಗೂ ಚರಂಡಿ ಒತ್ತುವರಿಯನ್ನು ತೆರವುಗೊಳಿಸಬೇಕು. ಬಡಾವಣೆಗೆ ಬರುವ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥಿತ ಯೋಜನೆ ರೂಪಿಸಿ, ಕಾಮಗಾರಿ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಹಾಗೂ ಪ್ರಸ್ತಾವನೆ ರೂಪಿಸಲು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಂತರ ಅವರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಪರೀಶೀಲಿಸಿದರು.
ಸಾರ್ವಜನಿಕರು ಮಾತನಾಡಿ, ರಸ್ತೆಯ ಪಕ್ಕದಲ್ಲಿ ಒಳಚರಂಡಿ ಕಿರಿದಾಗಿದ್ದು, ಹೂಳು ತುಂಬಿ ನೀರು ಹೊರಬರುತ್ತದೆ. ಅಣ್ಣಿಗೇರಿ ಪಟ್ಟಣದ ಸುತ್ತಲಿನ ಹಳ್ಳಿಗಳ ಜಮೀನುಗಳ ನೀರು ಪಟ್ಟಣಕ್ಕೆ ಬರುತ್ತದೆ. ಇದರಿಂದಾಗಿ ಹೆಚ್ಚು ಹಾನಿ ಆಗುತ್ತಿದೆ. ರಾಜ ಕಾಲುವೆಗೆ ಮಳೆ ನೀರು ಹರಿದು ಹೋಗಲು ಶಾಶ್ವತ ಪರಿಹಾರ ನೀಡಬೇಕು. ಅಲ್ಲದೇ ರಾಜ ಕಾಲುವೆಯ ವಿಸ್ತೀರ್ಣವನ್ನು ಅಗಲೀಕರಣ ಮಾಡಬೇಕೆಂದು ಪ್ರಭಾರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಹರಿಜನಕೇರಿ ಪ್ರದೇಶಕ್ಕೆ ಭೇಟಿ ನೀಡಿ, ಮಳೆ ನೀರು ಹರಿಯುವ ಹಾಗೂ ಒಳಚರಂಡಿ, ರಸ್ತೆ ನಿರ್ಮಾಣದ ಬಗ್ಗೆ ಪರೀಶೀಲಿಸಿ, ಪುರಸಭೆಯಿಂದ ಕಾಮಗಾರಿ ಕೈಗೊಳ್ಳಲು ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ಪ್ರಭಾರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪಟ್ಟಣದ ಸುರಕೋಡ ಬಡಾವಣೆಯಂತೆ ರಾಜರಾಜೇಶ್ವರಿ ನಗರ, ಜೆ.ಎಸ್.ಎಸ್.ಕಾಲೋನಿಯಲ್ಲಿಯೂ ಮಳೆ ನೀರು ನಿಂತಿದೆ. ನಿಂತ ನೀರು ಹರಿದು ಹೋಗಲು ತಾತ್ಕಾಲಿಕವಾಗಿ ಕಾಲುವೆ ತರಹ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ ಎಂ.ಜಿ.ದಾಸಪ್ಪನವರ ಅವರು ತಿಳಿಸಿದರು.
8 ಮನೆ ಭಾಗಶಃ ಹಾನಿ: ನಿನ್ನೆ (ಅ.08) ರಾತ್ರಿ ಆಕಸ್ಮೀಕವಾಗಿ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣದ ಸುಮಾರು 8 ಮನೆಗಳಿಗೆ ಭಾಗಶಃ ಹಾನಿಯಾದ ಬಗ್ಗೆ ಅಧಿಕಾರಿಗಳು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಥಾನಿಕ ಭೇಟಿ ನೀಡಿ, ಪರೀಶೀಲಿಸಿ ವರದಿ ಸಲ್ಲಿಸಿದ ತಕ್ಷಣ ಹಾನಿಗೆ ಅನುಗುಣವಾಗಿ ಸರಕಾರದ ನಿಯಮಾನುಸಾರ ಪರಿಹಾರ ಬಿಡುಗಡೆ ಮಾಡಲಾಗುತ್ತದೆ. ಮಳೆಯಿಂದ ಜನ ಜಾನುವಾರುಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಸೂಚಿಸಿದರು.
ಸಿಡಿಲು ಬಡಿದು 7 ಕುರಿಗಳ ಸಾವು: ರಾತ್ರಿ ಭಾರಿ ಮಳೆಯೊಂದಿಗೆ ಗುಡುಗು, ಸಿಡಿಲು ಇತ್ತು. ಪಟ್ಟಣದ ಹೊರ ವಲಯದಲ್ಲಿದ್ದ ಅಣ್ಣಿಗೇರಿ ಕುರಿಗಾಹಿ ಮಲ್ಲಪ್ಪ ಬೆಳ್ಳಿಕೊಪ್ಪ ಅವರ 7 ಕುರಿಗಳು ಸಿಡಿಲು ಬಡಿದು ಮರಣ ಹೊಂದಿವೆ ಎಂದು ಪ್ರಾಥಮಿಕ ವರದಿ ಸಲ್ಲಿಕೆಯಾಗಿದೆ. ಪಶು ವೈದ್ಯಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪರೀಶೀಲಿಸುತಿದ್ದು, ಅಂತಿಮ ವರದಿ ಸಲ್ಲಿಸಿದ ತಕ್ಷಣ ಸತ್ತಿರುವ ಕುರಿಗಳ ಮಾಲೀಕರ ಖಾತೆಗೆ ಪರಿಹಾರ ಹಣ ಜಮೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಮಳೆಗೆ ಕೊಚ್ಚಿ ಜೋದ ಸಂಪರ್ಕ ಸೇತುವೆ: ಅಣ್ಣಿಗೇರಿ ತಾಲೂಕಿನ ಸೈದಾಪುರ ಮತ್ತು ಹೊಸಳ್ಳಿ ಸಂಪರ್ಕಿಸುವ ಹೊರೆಹಳ್ಳದ ಕಿರು ಸೇತುವೆ ನಿನ್ನೆ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದು ಜಿಲ್ಲಾ ಪಂಚಾಯತ ರಸ್ತೆ ಆಗಿದ್ದು, ಸೇತುವೆ ನಿರ್ಮಾಣಕ್ಕೆ ತಕ್ಷಣ ಕ್ರಿಯಾ ಯೋಜನೆ ರೂಪಿಸಿ, ಸಲ್ಲಿಸುವಂತೆ ಅವರು ಪಿಆರ್ ಇಡಿ ಇಂಜನೀಯರ್ ಅವರಿಗೆ ಸೂಚನೆ ನೀಡಿದರು. ಮತ್ತು ಇದೇ ವೇಳೆ ಹಳ್ಳಿಕೇರಿ - ಇಬ್ರಾಹಿಂಪುರ ರಸ್ತೆ ಸಂಪರ್ಕ ರಸ್ತೆ ಹಾನಿಯಾದ ಬಗ್ಗೆ ಅವರು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಅಣ್ಣಿಗೇರಿ ತಹಶೀಲ್ದಾರರಾದ ಎಂ.ಜಿ. ದಾಸಪ್ಪನವರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಆಯ್.ಎ. ಬಡೆಖಾನ, ಪುರಸಭೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಕಂದಾಯ ಅಧಿಕಾರಿ ರಿಷಿಕುಮಾರ ಸಾರಂಗಿ, ಗ್ರಾಮ ಲೆಕ್ಕಾಧಿಕಾರಿ ಎಮ್.ಎಸ್.ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪುರಸಭೆ ಸದಸ್ಯರು, ಬಡಾವಣೆ ನಿವಾಸಿಗಳು, ಪಟ್ಟಣದ ಪ್ರಮುಖರು, ಸಾರ್ವಜನಿಕರು, ಇತರರು ಉಪಸ್ಥಿತರಿದ್ದರು.
ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಿವಿಧ ಕಿಟ್ ವಿತರಣೆ; ಅರ್ಜಿ ಆಹ್ವಾನ
ಹುಬ್ಬಳ್ಳಿ ಅ.9: ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ, ಸುರಕ್ಷತಾ ಗೌಂಡಿ ಕಿಟ್ (3264), ಸುರಕ್ಷತಾ ಎಲೆಕ್ಟ್ರಿಷಿಯನ್ (812), ಸುರಕ್ಷತಾ ವೆಲ್ಡರ್(200), ಸುರಕ್ಷತಾ ಕಾಪೇಂರ್ಟರ್(634), ಸುರಕ್ಷತಾ ಪೆಂಟರ್(802), ಸುರಕ್ಷತಾ ಪ್ಲಂಬರ್ (260) ಕಿಟ್ಗಳನ್ನು ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರು ನವೀಕರಣಗೊಂಡ ಗುರುತಿನ ಚೀಟಿ, ಆಧಾರ ಕಾರ್ಡ, ಈ ಹಿಂದೆ ಕಿಟ್ಗಳನ್ನು ಪಡೆದಿರುವ ಬಗ್ಗೆ ಸ್ವಯಂ ಘೋಷಣಾ ಪತ್ರ ಮತ್ತು ಮೋಬೈಲ್ ಸಂಖ್ಯೆ ಸಲ್ಲಿಸಬೇಕು. ಅರ್ಜಿದಾರರು ನೇರವಾಗಿ ಸರ್ಕಾರಿ ಕಾರ್ಮಿಕ ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕು. ಮದ್ಯವರ್ತಿಗಳಿಗೆ ಅರ್ಜಿ ಸಲ್ಲಿಸಬಾರದು.
ದಾಖಲಾತಿಗಳೊಂದಿಗೆ ಕಾರ್ಮಿಕ ಇಲಾಖೆಗಳ ಕಚೇರಿಗಳಾದ ಅಣ್ಣಿಗೇರಿ ಬಸ್ ನಿಲ್ದಾಣ ಹತ್ತಿರ, ನವಲಗುಂದ ಗವಿಮಠ, ಕಲಘಟಗಿ ಅನ್ವೇಕರ ಪ್ಲಾಟ್ ಜ್ಯೋತಿ ನಗರ, ಕುಂದಗೋಳ ಸರ್ಕಾರಿ ಇಲಾಖೆಗಳ ಸಂಕೀರ್ಣ ಕಟ್ಟಡ ಹಾಗೂ ಅಳ್ನಾವರ ಇಂದಿರಾ ನಗರ 1 ನೇ ಕ್ರಾಸ್ ಕಾರ್ಮಿಕ ನೀರೀಕ್ಷಕರ ಕಚೇರಿ ಮತ್ತು ಹಿರಿಯ ಕಾರ್ಮಿಕ ನೀರೀಕ್ಷಕರು 1,2,3 ಮತ್ತು 4ನೇ ವೃತ್ತ, ಹುಬ್ಬಳ್ಳಿ ಹಾಗೂ ಹಿರಿಯ ಕಾರ್ಮಿಕ ನೀರೀಕ್ಷಕರು 1್ಘ2ನೇ ವೃತ್ತ, ಧಾರವಾಡ ವೃತ್ತದ ಕಛೇರಿಗಳು, ಕಾರ್ಮಿಕ ಅಧಿಕಾರಿಯವರ ಕಛೇರಿ, ಉಪ ವಿಭಾಗ-1್ಘ2, ಹುಬ್ಬಳ್ಳಿ ಕಛೇರಿಗಳು ಹಾಗೂ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿ, ಕಾರ್ಮಿಕ ಭವನ, ಚೈತನ್ಯ ನಗರ, ಪ್ರಿಯದರ್ಶಿನಿ ಕಾಲೋನಿ, ಹುಬ್ಬಳ್ಳಿ ಕಚೇರಿಗಳಿಗೆ ನವೆಂಬರ್ 5 ರೊಳಗಾಗಿ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ ಹಾಗೂ ಬಂದಂತಹ ಅರ್ಜಿಗಳನ್ನು ನಿಯಮಾನುಸಾರ ಮತ್ತು ಜೇಷ್ಠತೆ ಅನುಸಾರ ಆಯ್ಕೆ ಮಾಡಿ ಕಿಟ್ಗಳನ್ನು ಹಂಚಿಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ ಕಾರ್ಮಿಕ ನೀರೀಕ್ಷಕರು, ಹಿರಿಯ ಕಾರ್ಮಿಕ ನೀರೀಕ್ಷಕರು ಮತ್ತು ಕಾರ್ಮಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಮಿಕ ಇಲಾಖೆಯ ಉಪ ವಿಭಾಗ 1್ಘ2ರ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.