ವಿಜಯನಗರ

ತಂಬಾಕು ಮುಕ್ತ ಶಾಲೆ ಮಾರ್ಗಸೂಚಿ ಕಡ್ಡಾಯ ಅನುಷ್ಠಾನಗೊಳಿಸಿ: ರೆಹಮತ್‌ಉಲ್ಲಾ

ತಂಬಾಕು ಮುಕ್ತ ಶಾಲೆ ಮಾರ್ಗಸೂಚಿ ಕಡ್ಡಾಯ ಅನುಷ್ಠಾನಗೊಳಿಸಿ: ರೆಹಮತ್‌ಉಲ್ಲಾ

ವಿಜಯನಗರ (ಹೊಸಪೇಟೆ) 08: ಜಿಲ್ಲಾಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ವಿಜಯನಗರ ಜಿಲ್ಲೆಯ ಬಿಇಒ/ಇಸಿಒ/ಬಿಆರ್‌ಸಿ/ಸಿಆರ್‌ಸಿ/ಎಚ್‌ಎಂ ಅಧಿಕಾರಿಗಳಿಗೆ ಹೊಸಪೇಟೆ ನಗರದ ಚಿತ್ತವಾಡ್ಗಿ ಪಿವಿಎಸ್ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ 2003 ಮತ್ತು ತಂಬಾಕು ಮುಕ್ತ ಶಾಲೆ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆ” ಕುರಿತು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. 

ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ.ರೆಹಮತ್ ಉಲ್ಲಾ ಅವರು ಮಾತನಾಡಿ, ವಿಜಯನಗರ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕೋಟ್ಪಾ ಕಾಯ್ದೆ ಮಾರ್ಗಸೂಚಿಯನ್ವಯ ತಂಬಾಕು ಮುಕ್ತ ಶಾಲೆಗಳನ್ನಾಗಿ ಘೋಷಣೆ ಮಾಡಲು ಅಗತ್ಯವಿರುವ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದರು. 

ತಂಬಾಕು ಮುಕ್ತ ಶಾಲೆಗಳನ್ನಾಗಿ ಘೋಷಣೆ ಮಾಡಲು ಹೆಚ್ಚು ಶ್ರಮವಹಿಸಿ ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. 

ವಿಜಯನಗರ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ 2003ರ ಸೆಕ್ಷನ್ 6ಬಿ ಅನ್ವಯ ತಂಬಾಕು ಮುಕ್ತ ಶಾಲೆಗಳನ್ನಾಗಿ ಮಾಡಲು ಹಾಗೂ ಪ್ರತಿಯೊಂದು ಶಾಲೆಯಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚನೆ ಮಾಡಿ ವಿದ್ಯಾರ್ಥಿಗಳಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು. ಶಾಲಾ ಆವರಣದ 100 ಯಾರ್ಡ(ಗಜ)ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳು ಮಾರಾಟ ಮಾಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯ ಮೇಲ್ವಿಚಾರಣಾಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾ ತಂಬಾಕು ನಿಯಂತ್ರಣಾ ಕೋಶದ ಸಲಹೆಗಾರರಾದ ದುರುಗಪ್ಪ ಮಾಚನೂರು ಅವರು  ಕೋಟ್ಪಾ-2003 ಕಾಯ್ದೆ ಹಾಗೂ ತಂಬಾಕು ಮುಕ್ತ ಶಾಲೆ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆ ಕುರಿತು ಉಪನ್ಯಾಸ ನೀಡಿದರು. 

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣಾ ಸಂಯೋಜಕರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಎನ್‌.ಸಿ.ಡಿ ಕೋಶದ ಸಿಬ್ಬಂದಿಗಳು,ಬಿಆರ್‌ಸಿ/ಸಿಆರ್‌ಸಿಗಳು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು. ತಂಬಾಕು ವ್ಯಸನಮುಕ್ತ ಕೇಂದ್ರದ ಆಪ್ತ ಸಮಾಲೋಚಕ ಮಲ್ಲೇಶಪ್ಪ ನಿರೂಪಿಸಿದರು. 


ಸುದ್ದಿ ಓದಿ