ಬಿಜೆಪಿಯ 50 ಕೋಟಿ ಆಫರ್ ನನಗೆ ಬಂದಿಲ್ಲ: ಶಾಸಕ ಕಾಗೆ
ಅಥಣಿ 22: ಬಿಜೆಪಿಯ 50 ಕೋಟಿ ಆಫರ್ ನನಗೆ ಬಂದಿಲ್ಲ, ಬಿಜೆಪಿಯವರು ಈ ಸಂಬಂಧ ನನ್ನನ್ನು ಸಂಪರ್ಕಿಸಿಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದರು.
ಅವರು ಕಾಗವಾಡ ಮತಕ್ಷೇತ್ರದ ಪಾರ್ಥನಳ್ಳಿ, ಚಮಕೇರಿ, ಬೇಡರಹಟ್ಟಿ, ಗುಂಡೇವಾಡಿ, ಬಳ್ಳಿಗೇರಿ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ವಿರೋಧ ಪಕ್ಷದವರು ರಾಜಕೀಯ ದುರುದ್ದೇಶಕ್ಕಾಗಿ ಸರಕಾರದ ಮೇಲೆ ಸುಳ್ಳು ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಜನ ವಿರೋಧ ಪಕ್ಷದವರ ಸುಳ್ಳು ಆರೋಪಗಳಿಗೆ ಸೊಪ್ಪು ಹಾಕುವುದಿಲ್ಲ ಎಂದ ಅವರು ಬೆಳಗಾವಿಯ ಚಳಿಗಾಲದ ಅಧಿವೇಶನ ಸಿಎಮ್ ಸಿದ್ಧರಾಮಯ್ಯನವರ ಕೊನೆಯ ಅಧಿವೇಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ರಾಜು ಕಾಗೆ ವಿರೋಧ ಪಕ್ಷದವರು ಇದನ್ನು ಬಿಟ್ಟು ಬೇರೆ ಇನ್ನೇನು ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು.
ಚಳಿಗಾಲದ ಅಧಿವೇಶನದ ಒಳಗಾಗಿಯೇ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಎರಡು ಮೋಟರ್ ಗಳ ಮೂಲಕ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುವುದು ಮತ್ತು ಮುಂಬರುವ ಜೂನ್ ತಿಂಗಳಲ್ಲಿಯೇ ಈ ಯೋಜನೆಯ ನಾಲ್ಕೂ ಮೋಟಾರಗಳ ಮೂಲಕ ಸಂಪೂರ್ಣವಾಗಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಸಕ್ಕರೆ ಕಾರಖಾನೆಯ ಮಾಲಿಕರು ರೈತರಿಗೆ ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಈ ಸಂಬಂಧ ಕಳೆದ ವರ್ಷ ಸಕ್ಕರೆ ಸಚಿವ ಶಿವಾನಂದ ಪಾಟೀಲ ಸಕ್ಕರೆ ಕಾರಖಾನೆಗಳ ಹೊರಗೆ ತೂಕದ ಮಶೀನ್ ಅಳವಡಿಸುವುದಾಗಿ ಹೇಳಿದ್ದರು ಆದರೆ ಈ ವರೆಗೂ ತೂಕದ ಮಶೀನ್ ಅಳವಡಿಸಿಲ್ಲ ಎಂದ ಅವರು ಈಗಿನ್ನೂ ಕಬ್ಬು ನುರಿಸುವ ಹಂಗಾಮು ಪ್ರಾರಂಭಗೊಂಡಿದ್ದು, ತಕ್ಷಣ ಎಲ್ಲ ಸಕ್ಕರೆ ಕಾರಖಾನೆಗಳ ಹೊರಗೆ ಸರಕಾರದಿಂದ ತೂಕದ ಮಶೀನಗಳನ್ನು ಅಳವಡಿಸಬೇಕು ಎಂದು ರಾಜು ಕಾಗೆ ಆಗ್ರಹಿಸಿದರು. ಕಾಗವಾಡ ಮತಕ್ಷೇತ್ರದ ಪ್ರತಿ ಗ್ರಾಮಗಳಿಗೆ ಬೇಡಿಕೆ ಅನುಸಾರ 12.5 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಮತ್ತು 72 ಗ್ರಾಮಗಳಲ್ಲಿ ಒಂದೊಂದು ಸಮುದಾಯ ಭವನಗಳು ಮಂಜೂರು ಅನುಷ್ಠಾನದ ಹಂತದಲ್ಲಿವೆ ಎಂದ ಅವರು ಕಾಗವಾಡ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ 25 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದೆ ಎಂದರು.
ಧುರೀಣರಾದ ಘೂಳಪ್ಪ ಜತ್ತಿ, ಶಿವಾನಂದ ಗೊಲಭಾವಿ, ಸಿದರಾಯ ತೇಲಿ, ಶರೀಫ್ ಮುಲ್ಲಾ, ರಫಿಕ್ ಪಟೇಲ್, ಚಂದ್ರಕಾಂತ ಇಮ್ಮಡಿ, ಬಸವರಾಜ ನಾವಿ, ಬಸವರಾಜ ಪಾಟೀಲ, ಗುತ್ತಿಗೆದಾರರಾದ ಶಂಕರ ಮುಜಗೋಣಿ, ಮಲ್ಲಿಕಾರ್ಜುನ ದಳವಾಯಿ, ಈರ್ಪ ಶಿರಗುರ, ಪಿಂಟು ಮಗದುಮ್, ಧನಪಾಲ ಕಾಂಬಳೆ, ಶಿವಾನಂದ ಹುಚ್ಚಗೌಡರ, ವಿನಯ ಇಮ್ಮಡಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.