ಕರ್ನಾಟಕ ವಕ್ಫ್ ನಿಯಮಗಳ ಅಂತಿಮ ರೂಪಕ್ಕೆ ಉನ್ನತ ಮಟ್ಟದ ಸಮಿತಿ ರಚನೆ
ಕೊಪ್ಪಳ, 6: ಕೇಂದ್ರ ಸರ್ಕಾರದ ಉಮ್ಮೀದ್ ಕಲಂ 109ರ ಅಡಿಯಲ್ಲಿ ‘ಕರ್ನಾಟಕ ರಾಜ್ಯ ವಕ್ಫ್ 2026' ಜಾರಿಗೊಳಿಸಲು ಸಿದ್ಧಪಡಿಸಲಾಗಿರುವ ಕರಡು ನಿಯಮಗಳನ್ನು ಪರೀಶೀಲಿಸಿ ಅಂತಿಮಗೊಳಿಸಲು ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.
ಸಮಿತಿಯಲ್ಲಿ ಕೊಪ್ಪಳದ ಹಿರಿಯ ನ್ಯಾಯವಾದಿ ಹಾಗೂ ಕರ್ನಾಟಕ ವಕ್ಫ್ ಮಂಡಳಿಯ ಮಾಜಿ ಸದಸ್ಯ ಎಸ್. ಆಸಿಫ್ ಅಲಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಗಣ್ಯರು, ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಈ ಕುರಿತು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಸ್. ಜಿಯಾಸ್ ಪಾಷಾ ಅವರು ಅಕ್ಟೋಬರ್ 5, 2026ರಂದು ಆದೇಶ ಹೊರಡಿಸಿದ್ದಾರೆ. ಹಿಂದೆ ನಿವೃತ್ತ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಚರ್ಚಿಸಿ ಸಿದ್ಧಪಡಿಸಿದ್ದ ಕರಡು ನಿಯಮಗಳನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರ್ಕಾರಕ್ಕೆ ಸಲ್ಲಿಸಿದ್ದರು. ಇದೀಗ ಆ ಕರಡು ನಿಯಮಗಳನ್ನು ಕೂಲಂಕಷವಾಗಿ ಪರೀಶೀಲಿಸಿ ಅಂತಿಮ ರೂಪ ನೀಡಲು ಹೊಸ ಸಮಿತಿ ರಚಿಸಲಾಗಿದೆ.