ಜೋತು ಬಿದ್ದ ವಿದ್ಯುತ್ ತಂತಿ: ರಸ್ತೆ ಆವರಿಸಿದ ಬೇಲಿ
ಜಂಗಮರ ಕಲ್ಗುಡಿ-ಹೊಸಗೇರಾ ಕ್ಯಾಂಪ್ ರಸ್ತೆ
ಗಂಗಾವತಿ 21: ಗಂಗಾವತಿ ಸಮೀಪದ ಕಲ್ಗುಡಿ ಮತ್ತು ಹೊಸಕೇರಾ ಕ್ಯಾಂಪ್ ಸಂಪರ್ಕಿಸುವ ಮುಖ್ಯ ಡಾಂಬಾರ್ ರಸ್ತೆ ಬೇಲಿ ಗಿಡದಿಂದ ಆವರಿಸಿ ದಾರಿ ಹೋಕರಿಗೆ ತುಂಬಾ ತೊಂದರೆಯಾಗಿದೆ. ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯ ಅರ್ಧ ಭಾಗ ಬೇಲಿ ಆವರಿಸಿಕೊಂಡಿದ್ದು ವಾಹನಗಳನ್ನೇರಿ ಹೊರಡುವ ಶಾಲಾ ಮಕ್ಕಳು, ಬಸ್ ಸಂಚಾರ ಹಾಗು ಟ್ರಾಕ್ಟರ್ ಸಂಚಾರಕ್ಕೂ ಈ ರಸ್ತೆ ಸಂಚಕಾರ ತಂದಿದೆ. ಎದುರಿಗೆ ಬರುವ ವಾಹನಗಳಿಗೆ ಸೈಡ್ ನೀಡಲು ಆಗದಂತೆ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಶಾಲಾ ಮಕ್ಕಳು ಮುಳ್ಳುಗಳಿಂದ ಮುಖ ಮೈ ತೆರಿಚಿದ ಘಟನೆಗಳು ಜರುಗಿವೆ ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕೆಂದು ಇಲ್ಲೀನ ನಾಗರೀಕರು ಆಗ್ರಹಿಸಿದ್ದಾರೆ.
ಅಲ್ಲದೇ ಈ ರಸ್ತೆಯನ್ನು ಪಿಡಬ್ಲ್ಯೂಡಿ ಇಲಾಖೆ ಎತ್ತರಿಸಿ ನಿರ್ಮಿಸಿರುವ ಕಾರಣ ಹಳೆ ರಸ್ತೆ ಇದ್ದ ಸಂದರ್ಭದಲ್ಲಿ ಹಾಕಿದ್ದ ವಿದ್ಯುತ್ ಪೋಲುಗಳು ಹಾಗೆ ಇದ್ದು, ದುರಾದೃಷ್ಟದ ಸಂಗತಿಯೆಂದರೆ, ಹಳೆಯದಾದ ವಿದ್ಯುತ್ ತಂತಿಗಳು ರಸ್ತೆಗೆ ಜೋತು ಬಿದ್ದಿವೆ ಅನೇಕ ಸಂದರ್ಭದಲ್ಲಿ ರೈತರ ಸರಕು ತುಂಬಿದ ವಾಹನಗಳು ಅಪಾಯಕ್ಕೆ ಸಿಲುಕಿದ ಉದಾಹರಣೆಗಳಿವೆ. ಲಾರಿ ಚಲಿಸುತ್ತಿದ್ದರೆ ವಿದ್ಯುತ್ ತಂತಿಗಳು ಅದಕ್ಕೆ ತಾಗುತ್ತವೆ, ಹುಲ್ಲಿನ ಟ್ರಾಕ್ಟರ್ಗಳಿಗು ವಿದ್ಯುತ್ ತಂತಿ ತಗಲು ಬೆಂಕಿ ಕೂಡಾ ತಗಲಿದ್ದು ಜೆಸ್ಕಾ ಇಲಾಖೆ ಸ್ಥಳ ಪರೀಶೀಲಿಸಿ ಕೂಡಲೆ ಪೋಲು ಬದಲಿಸಿ ವಿದ್ಯುತ್ ತಂತಿ ಬಿಗಿಗೊಳಿಸಬೇಕೆಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್ವರರಾವ್ ಹಾಗು ಪ್ರಗತಿಪರ ರೈತ ಕಿಶೋರ್ ಒತ್ತಾಯಿಸಿದ್ದಾರೆ ವಿಳಂಬವಾದಲ್ಲಿ ಸಂಬಂಧ ಪಟ್ಟ ಇಲಾಖೆಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.