ಗುರುದೇವ ಸತ್ಸಂಗ ಕಾರ್ಯಕ್ರಮ
ಜಮಖಂಡಿ: 28: ಸುಂದರ ಬದುಕಿಗೆ ಬೇಕಾಗಿರುವ ಮೊದಲನೆಯ ತಳಪಾಯ ವಿಶ್ವಾಸ ಮತ್ತು ಶ್ರದ್ಧೆ. ಶ್ರದ್ಧೆ ಇದ್ದರೆ ಜ್ಞಾನವಾಗುತ್ತದೆ. ಜ್ಞಾನವಾದರೆಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ಎಂದು ಚಿಕ್ಕಾಲಗುಂಡಿಯ ಕಾಡಸಿದ್ಧೇಶ್ವರ ಮಠದ ಶಿವಶರಣಾನಂದ ಮಹಾಸ್ವಾಮಿಗಳು ಹೇಳಿದರು. ತಾಲ್ಲೂಕಿನ ಹುಲ್ಯಾಳ ಗ್ರಾಮದಗುರುದೇವಾಶ್ರಮದಲ್ಲಿ ಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ನಡೆದ ಗುರುದೇವ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಸುಂದರ ಬದುಕಿನ ಸೂತ್ರಗಳು ಕುರಿತು ಆಶೀರ್ವಚನ ನೀಡಿದ ಅವರು. ನಮ್ಮ ಬದುಕು ನಮಗೆ ನೆಮ್ಮದಿ ಕೊಟ್ಟರೆ ಸಾಕು.ಆದರೆ, ನಾವು ಇನ್ನಬ್ಬರನ್ನು ನೋಡಿ ದುಃಖಿಗಳಾಗುತ್ತಿದ್ದೇವೆ. ನಮ್ಮನ್ನು ನಾವು ನೋಡಿಎಂದೂ ದುಃಖಿಗಳಾಗುವುದಿಲ್ಲ. ಜಡರೂಪದ ವಸ್ತುಗಳಲ್ಲಿ ಸುಖವಿಲ್ಲ. ಆದರೆ, ನಮ್ಮ ಮನಸ್ಸಿನಲ್ಲಿನ ಅಂತಃಕರಣದ ವೃತ್ತಿಗಳು ಹೊರಗಡೆ ಬಂದು ನಮ್ಮ ಇಂದ್ರಿಯಗಳ ಮೂಲಕ ಆ ವಸ್ತುವಿನ ಸಂಯೋಗ ಮಾಡಿದಾಗ ಮಾತ್ರ ಸುಖ ದೊರೆಯುತ್ತದೆ ಎಂದರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಗುವ ದಾರಿ ಸರಿ ಇರುವ ಬಗ್ಗೆ ತಿಳಿವಳಿಕೆ ಇರಬೇಕು. ಇನ್ನೊಬ್ಬರಿಗೆ ಗೌರವ ಕೊಡಬೇಕು. ನಮ್ಮ ಸಾಮರ್ಥ್ಯ ನಮಗೆ ತಿಳಿದಿರಬೇಕು. ಸಾಮರ್ಥ್ಯಕ್ಕೆ ತಕ್ಕಂತೆ ದುಡಿಯಬೇಕು. ಇನ್ನೊಬ್ಬರನ್ನು ನೋಡಿ ಸಂತೋಷ ಪಡಬೇಕು. ಯಾರಿಗೂ ಕೆಟ್ಟದ್ದನ್ನು ಮಾತನಾಡಬಾರದು. ನಾವು ಎಲ್ಲಿಂದ ಬಂದಿದ್ದೇವೆ, ಎಲ್ಲಿಗೆ ಹೋಗಬೇಕು ಎಂಬುದು ಗೊತ್ತಿರಬೇಕು ಎಂದು ಸಿದ್ಧೇಶ್ವರ ಶ್ರೀಗಳು ತಮ್ಮ ಸಾಧಕರಿಗೆ ಬೋಧನೆ ಮಾಡಿದ್ದನ್ನು ಸ್ಮರಿಸಿದರು.
ಗುರುಬಸಗೌಡ ಪಾಟೀಲ, ರಾಮಚಂದ್ರ ಹೂಗಾರ ತಬಲಾ, ಪರಮೇಶ್ವರ ತೇಲಿ ಹಾರ್ಮೊನಿಯಂ ಸಂಗೀತ ಸೇವೆ ಸಲ್ಲಿಸಿದರು. ಅನ್ನದಾಸೋಹ ಮಾಡಿದ ವೆಂಕಣ್ಣ ಪಡತಾರೆ, ಮಲ್ಲಪ್ಪ ಕುಂಬಾರ ಅವರನ್ನು ಶ್ರೀ ಗುರುದೇವಾಶ್ರಮದ ವತಿಯಿಂದ ಸನ್ಮಾನಿಸಲಾಯಿತು. ಮಲ್ಲೇಶ ಗೆದ್ದೆಪ್ಪನವರ ನಿರೂಪಿಸಿದರು. ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದಲ್ಲಿ ನಡೆದ ಶ್ರೀ ಗುರುದೇವ ಸತ್ಸಂಗ ಕಾರ್ಯಕ್ರಮದಲ್ಲಿ ಚಿಕ್ಕಾಲಗುಂಡಿಯ ಶ್ರೀಕಾಡಸಿದ್ಧೇಶ್ವರ ಮಠದ ಶಿವಶರಣಾನಂದ ಶ್ರೀಗಳು ಆಶೀರ್ವಚನ ನೀಡಿದರು. ಹರ್ಷಾನಂದ ಶ್ರೀಗಳು ಇದ್ದಾರೆ.