ಎಸ್.ಜಿ.ವಿ.ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ’ಸೇವಾ ಮನೋಭಾವದೊಂದಿಗೆ ವೈದ್ಯಕೀಯ ವೃತ್ತಿ ಆರಂಭಿಸಿ’ ಪ್ರಭುನೀಲಕಂಠ ಸ್ವಾಮೀಜಿ
ಬೈಲಹೊಂಗಲ 26: ’ಆಯುರ್ವೇದ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಸೇವಾ ಮನೋಭಾವದೊಂದಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಸಮಾಜದ ಆರೋಗ್ಯ ಸುಧಾರಣೆಗೆ ಶ್ರಮಿಸಬೇಕು’ ಎಂದು ಎಸ್.ಜಿ.ವಿ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು. ನಗರದ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಶ್ರೀ ನೀಲಕೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಎಸ್.ಜಿ.ವಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶನಿವಾರ ನಡೆದ ವೈದ್ಯಕೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.’ವಿದ್ಯಾರ್ಥಿಗಳು ಕನಸುಗಳ ಬೆನ್ನು ಹತ್ತಿ ಯಶಸ್ವಿನ ಗುರಿ ಸಾಧಿಸಬೇಕು.
ಸೇವಾ ಮನೋಭಾವ ಬೆಳೆಸಿಕೊಂಡು ವೈದ್ಯಕೀಯ ವೃತ್ತಿ ಆರಂಭಿಸಬೇಕು. ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡಿ ಜನಾನುರಾಗಬೇಕು’ ಎಂದರು.ಹುಬ್ಬಳ್ಳಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ನಿರ್ದೇಶಕ ಡಾ. ಪ್ರಶಾಂತ ’ಆಯುರ್ವೇದ ವೈದ್ಯಕೀಯ ಶಿಕ್ಷಣದ ಮಹತ್ವದ ಕುರಿತು’ ತಿಳಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ. ಸಂತೋಷ ಗದಾಡವರ, ಈಶಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಾಗೇಂದ್ರ ಪಾಟೀಲ, ಎಸ್.ಜಿ.ವಿ.ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಸುಭಾಷ ಬಾಗಡೆ ಪದವೀಧರರಿಗೆ ಶುಭ ಹಾರೈಸಿದರು.ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಾದ ಡಾ.ವೈಷ್ಣವಿ ಪಾಟೀಲ, ಡಾ. ಸಾಯಲಿ ರಾವತ್, ಡಾ. ಶ್ರಾವಣಿ ಪಾಟೀಲ, ಡಾ. ಸೌರಭ ಜಗಪಾತ, ಡಾ. ಸಂಕೇತ ಗಾಡೆ, ಡಾ. ಅಶ್ವಿನಿ ಕೊಚರಿ ಅನಿಸಿಕೆಗಳನ್ನು ಹಂಚಿಕೊಂಡರು.
ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪದವಿ ಪ್ರದಾನ ಮಾಡಿ ಗೌರವಿಸಲಾಯಿತು. ಹಲವು ವರ್ಷಗಳ ಪರಿಶ್ರಮ, ಅಧ್ಯಯನ, ಸಾಧನೆಯ ಫಲವಾಗಿ ಪದವಿ ಪಡೆದ ವಿದ್ಯಾರ್ಥಿಗಳ ಮುಖದಲ್ಲಿ ಸಂತಸ, ಹೆಮ್ಮೆ, ಭವಿಷ್ಯದ ಕನಸುಗಳು ಎದ್ದು ಕಾಣುತ್ತಿದ್ದವು. ಪ್ರಶಸ್ತಿ ಸ್ವೀಕರಿಸಿದ ವಿದ್ಯಾರ್ಥಿಗಳು ಪರಸ್ಪರ ಅಭಿನಂದಿಸಿಕೊಳ್ಳುತ್ತ, ಸಹಪಾಠಿಗಳು, ಉಪನ್ಯಾಸಕರು, ಪಾಲಕರೊಂದಿಗೆ ಸಂಭ್ರಮ ಹಂಚಿಕೊಂಡರು.ಸಮಾರಂಭದ ಬಳಿಕ ವಿದ್ಯಾರ್ಥಿಗಳು ಲವಲವಿಕೆಯಿಂದ ಕಲ್ಯಾಣ ಮಂಟಪದ ಆವರಣದಲ್ಲಿ ಓಡಾಡುತ್ತ, ಸ್ನೇಹಿತರೊಂದಿಗೆ ಸೇಲ್ಪಿ, ಗುಂಪು ಫೋಟೊಗಳನ್ನು ತೆಗೆಸಿಕೊಂಡರು.
ಸಹಪಾಠಿಗಳೊಂದಿಗೆ ಕಳೆದ ವಿದ್ಯಾರ್ಥಿ ಜೀವನದ ಸವಿನೆನಪುಗಳನ್ನು ಮೆಲುಕು ಹಾಕುತ್ತ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪಾಲಕರ ಮುಖದಲ್ಲಿಯೂ ಮಕ್ಕಳ ಸಾಧನೆಯ ಹೆಮ್ಮೆ, ಸಂತೋಷ ಎದ್ದು ಕಾಣುತ್ತಿತ್ತು. ಸಮಾರಂಭವು ಸಂಭ್ರಮ, ಆತ್ಮೀಯತೆ ಹಾಗೂ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.ಪ್ರಾಂಶುಪಾಲ ಡಾ. ಸುಭಾಷ ಬಾಗಡೆ ಸ್ವಾಗತಿಸಿದರು. ಡಾ. ನರೇಂದ್ರ ಗುರವ ನಿರೂಪಿಸಿದರು. ಐಶ್ವರ್ಯ ಹಾಗೂ ಸಂಗಡಿಗರು ಧನ್ವಂತರಿ ಗೀತೆ ಹಾಡಿದರು. ವಿದ್ಯಾರ್ಥಿಗಳು, ಪಾಲಕರು, ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.