ಹಿಟ್ ಅಂಡ್ ರನ್: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ: ವೃದ್ಧ ಸಾವು, ಓರ್ವ ಗಾಯ
ಬೈಲಹೊಂಗಲ 16 : ಸಂಗನಕೇರಿ-ಗೋಕಾಕ ಮುಖ್ಯ ರಸ್ತೆಯಲ್ಲಿ ನಡೆದ ಹಿಟ್ ಅಂಡ್ ರನ್ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.ಲೋಳಸೂರ ಗ್ರಾಮದ ಕರಾವಳಿ ಧಾಬಾ ಹತ್ತಿರ ಅ.15 ರಂದು ಸಂಜೆ 5 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.ಮೃತ ವ್ಯಕ್ತಿಯನ್ನು ಗದ್ದಿಕರವಿನಕೊಪ್ಪ ಗ್ರಾಮದ ನಿಂಗಪ್ಪಾ ಫಕೀರಾ್ಪ ಹುಬ್ಬಳ್ಳಿ (63) ಎಂದು ಗುರುತಿಸಲಾಗಿದೆ.
ಗಾಯಾಳು ಬಸಪ್ಪಾ ಯಲ್ಲಪ್ಪಾ ಚಿಂದರಗಿ (52) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಮೂಲಗಳ ಪ್ರಕಾರ, ಮೃತ ನಿಂಗಪ್ಪಾ ಮತ್ತು ಬಸಪ್ಪಾ ಇಬ್ಬರೂ ತಮ್ಮ ಮೋಟಾರ್ ಸೈಕಲ್ ಸಂಖ್ಯೆ ಕೆಎ-22-ಇಜೆ-6094 ರಲ್ಲಿ ಗೋಕಾಕ ಕಡೆಗೆ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಅತಿವೇಗವಾಗಿ ಬಂದ ಅಪರಿಚಿತ ವಾಹನ ಅವರ ಬೈಕ್ಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದೆ. ಅಪಘಾತದಲ್ಲಿ ಇಬ್ಬರಿಗೂ ತಲೆ ಹಾಗೂ ಕೈಕಾಲುಗಳಿಗೆ ತೀವ್ರ ಗಾಯಗಳಾಗಿವೆ.
ತೀವ್ರವಾಗಿ ಗಾಯಗೊಂಡಿದ್ದ ನಿಂಗಪ್ಪಾ ಅವರನ್ನು ಗೋಕಾಕ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಈ ಕುರಿತು ಮೃತರ ಮಗ ಅಡಿವೇಪ್ಪಾ ನಿಂಗಪ್ಪಾ ಹುಬ್ಬಳ್ಳಿ (40) ನೀಡಿದ ದೂರಿನ ಮೇರೆಗೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ವಾಹನ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.