ಮೂಡಲಗಿಯಲ್ಲಿ ವರದಕ್ಷಿಣೆ ಪಿಡುಗು, ಆಸಿಡ್ ದಾಳಿ ತಡೆಗೆ ಕಾನೂನು ಅರಿವು ಕಾರ್ಯಕ್ರಮ
ಲೋಕದರ್ಶನ ವರದಿ
ಮೂಡಲಗಿ 16 : ಒಬ್ಬ ವ್ಯಕ್ತಿಯ ಮೇಲೆ ಉದ್ದೇಶ ಪೂರ್ವಕವಾಗಿ ಆಮ್ಲ ಅಥವಾ ಇತರ ದಹನಕಾರಿ ರಾಸಾಯನಿಕಗಳನ್ನು ಎರಚಿ, ಗಂಭೀರ ಗಾಯಗಳನ್ನು ಉಂಟುಮಾಡುವ ಕ್ರೂರ ಕೃತ್ಯಕ್ಕೆ ಆಸಿಡ್ ದಾಳಿ ಎನ್ನಬಹುದಾಗಿದೆ ಎಂದು ಮೂಡಲಗಿ ನ್ಯಾಯವಾದಿ ಸಂಘದ ಅಧ್ಯಕ್ಷರಾದ ಬಿ.ಎನ್. ಸಣ್ಣಕ್ಕಿ ಹೇಳಿದರು. ಪಟ್ಟಣದ ಶ್ರೀಪಾದಭೋದ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮೂಡಲಗಿಯ ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಇತರೆ ಇಲಾಖೆಗಳ ಸಹಯೋಗದಲ್ಲಿ ಜರುಗಿದ ವರದಕ್ಷಿಣೆ ಪಿಡುಗು ಹಾಗೂ ಆಸಿಡ್ ದಾಳಿ ಕುರಿತು ಕಾನೂನು ಅರಿವು ಕಾರ್ಯಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಸಿಡ್ ದಾಳಿಗಳು ಮುಖ್ಯವಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತವೆ. ಕೆಲವು ಬಾರಿ ಪುರುಷರೂ ಕೂಡ ಇದರ ಬಲಿಪಶುಗಳಾಗಿದ್ದಾರೆ. ಪ್ರೀತಿಯ ನಿರಾಕರಣೆ, ಕೌಟುಂಬಿಕ ಕಲಹಗಳು, ಪ್ರತೀಕಾರದ ಮನೋಭಾವ, ಅಸೂಯೆ ಹಾಗೂ ಅನುಮಾನಗಳು ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಆಸಿಡ್ ದಾಳಿಗೆ ತುತ್ತಾದವರು ನಿರ್ಭೀತರಾಗಿ ಬಿ.ಎನ್.ಎಸ್-124 ಅಡಿ ಪ್ರಕರಣ ದಾಖಲಿಸಿ ಕಾನೂನು ನೆರವು ಪಡೆಯಬಹುದಾಗಿದೆ ಎಂದರು.
ನ್ಯಾಯವಾದಿ ಸಂಘದ ಉಪಾಧ್ಯಕ್ಷರಾದ ಲಕ್ಷ್ಮಣ ಅಡಿಹುಡಿ ವರದಕ್ಷಿಣೆ ಪಿಡುಗಿನ ಬಗ್ಗೆ ಉಪನ್ಯಾಸ ನೀಡುತ್ತಾ ಮಾತನಾಡಿ, ಮದುವೆಯ ಸಂದರ್ಭದಲ್ಲಿ ವರನ ಕಡೆಯವರು ವಧುವಿನ ಕಡೆಯವರಿಂದ ಹಣ, ಚಿನ್ನ, ಬೆಳ್ಳಿ, ವಾಹನ, ಆಸ್ತಿ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಬೇಡುವುದು ಅಥವಾ ಪಡೆಯುವುದನ್ನು ವರದಕ್ಷಿಣೆ ಪದ್ಧತಿ ಎಂದು ಕರೆಯುತ್ತಾರೆ. ಈ ಪದ್ಧತಿಯಿಂದ ಮಹಿಳೆಯರು ಮತ್ತು ಅವರ ಕುಟುಂಬಗಳು ಆರ್ಥಿಕ ಹಾಗೂ ಮಾನಸಿಕ ತೊಂದರೆಗಳನ್ನು ಅನುಭವಿಸುವುದರಿಂದ ವರದಕ್ಷಿಣೆ ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ವರದಕ್ಷಿಣೆ ಪಿಡುಗು ಮಹಿಳೆಯರ ಗೌರವ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ. ಇದನ್ನು ನಿರ್ಮೂಲನೆ ಮಾಡಲು ಜನರಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸಬೇಕು, ಹೆಣ್ಣುಮಕ್ಕಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿ ವರದಕ್ಷಿಣೆ ರಹಿತ ಮದುವೆಗಳನ್ನು ಪ್ರೋತ್ಸಾಹಿಸಬೇಕು. ವರದಕ್ಷಿಣೆ ಮುಕ್ತ ಸಮಾಜವನ್ನು ನಿರ್ಮಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಅತಿಥಿಗಳಾಗಿ ಸಿಡಿಪಿಓ ಯಲ್ಲಪ್ಪ ಗದಾಡಿ, ನ್ಯಾಯವಾದಿ ಸಂಘದ ಸಹ ಕಾರ್ಯದರ್ಶಿಗಳಾದ ಆರ್.ಬಿ.ಮುಂಡಿಗನಾಳ, ಪ್ರಾಚಾರ್ಯರಾದ ಎಮ್.ವಾಯ್.ಕಂಬಾರ, ಪ್ರೊ. ಚೇತನರಾಜ್.ಬಿ, ಪ್ರೊ. ರಾಧಾ ಎಮ್.ಎನ್, ಮೂಡಲಗಿ ನ್ಯಾಯವಾದಿ ಸಂಘದ ಪದಾಧಿಕಾರಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.