ವಿಶ್ವ ಅರಿವಳಿಕೆ ದಿನಾಚರಣೆ
ಲೋಕದರ್ಶನ ವರದಿ
ಬೆಳಗಾವಿ 16: ವಿಶ್ವ ಅರಿವಳಿಕೆ ದಿನದ ಅಂಗವಾಗಿ ಬೆಳಗಾವಿಯ ಕೆಎಲ್ಇ ಸೆಂಟಿನರಿ ಚಾರಿಟೆಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅರಿವಳಿಕೆ ವಿಭಾಗದ ವತಿಯಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ್ ಕಂಬಾರ್, ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗಳಿಗೆ ಸುರಕ್ಷಿತ ಅರಿವಳಿಕೆ ನೀಡುವುದು, ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಹಾಗೂ ಶಸ್ತ್ರಚಿಕಿತ್ಸೆಯ ನಂತರ ಸೂಕ್ತ ಆರೈಕೆ ಒದಗಿಸುವಲ್ಲಿ ಅರಿವಳಿಕೆ ತಜ್ಞರ ಪಾತ್ರ ಮಹತ್ವದ್ದಾಗಿದೆ ಎಂದರು.
ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ. ಆರ್. ಜಿ. ನೆಲವಗಿ ಮಾತನಾಡಿ, ಶಸ್ತ್ರಚಿಕಿತ್ಸೆಯ ವೇಳೆ ರೋಗಿಗಳಿಗೆ ನೋವು ಮತ್ತು ಅಸ್ವಸ್ಥತೆ ಉಂಟಾಗದಂತೆ ನೋಡಿಕೊಳ್ಳುವುದರ ಜೊತೆಗೆ ಉಸಿರಾಟ, ಹೃದಯ ಬಡಿತ ಹಾಗೂ ರಕ್ತದೊತ್ತಡದಂತಹ ಪ್ರಮುಖ ದೈಹಿಕ ಕಾರ್ಯಗಳನ್ನು ನಿರಂತರವಾಗಿ ಗಮನಿಸುವುದು ಅರಿವಳಿಕೆ ತಜ್ಞರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ತುರ್ತು ಚಿಕಿತ್ಸೆ, ತೀವ್ರ ನಿಗಾ ಘಟಕ ಹಾಗೂ ನೋವು ನಿರ್ವಹಣೆಯಲ್ಲಿಯೂ ಅರಿವಳಿಕೆ ವಿಭಾಗ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಆಧುನಿಕ ತಂತ್ರಜ್ಞಾನ, ವೈದ್ಯಕೀಯ ಪರಿಣತಿ ಮತ್ತು ಸುರಕ್ಷತಾ ಕ್ರಮಗಳು ರೋಗಿಗಳಿಗೆ ಉತ್ತಮ ಚಿಕಿತ್ಸಾ ಫಲಿತಾಂಶ ನೀಡಲು ಸಹಕಾರಿಯಾಗಿವೆ. ರೋಗಿಗಳ ಸುರಕ್ಷತೆ ಹಾಗೂ ಗುಣಮಟ್ಟದ ಚಿಕಿತ್ಸೆಗೆ ವೈದ್ಯರು, ನರ್ಸಿಂಗ್ ಸಿಬ್ಬಂದಿ ಮತ್ತು ಇತರ ಆರೋಗ್ಯ ಕಾರ್ಯಕರ್ತರ ಸಮನ್ವಯ ಅಗತ್ಯ ಎಂದು ಅವರು ಹೇಳಿದರು. ಕೆಎಲ್ಇ ಸಂಸ್ಥೆಯ ನಿರ್ದೇಶಕ ಡಾ. ಎಚ್. ಬಿ. ರಾಜಶೇಖರ ಹಾಗೂ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಎನ್. ಅವರು ಅರಿವಳಿಕೆ ವಿಭಾಗದ ಕಾರ್ಯವನ್ನು ಶ್ಲಾಘಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅರಿವಳಿಕೆ ವಿಭಾಗದ ವೈದ್ಯರು, ಸಿಬ್ಬಂದಿ ಹಾಗೂ ಇತರ ಆರೋಗ್ಯ ಕಾರ್ಯಕರ್ತರು ಭಾಗವಹಿಸಿದ್ದರು.