ಮೌಲ್ಯಶಿಕ್ಷಣ ಅಳವಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಿ: ರಾಜು ಹಜೇರಿ
ಲೋಕದರ್ಶನ ವರದಿ
ಮೌಲ್ಯಶಿಕ್ಷಣ ಅಳವಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಿ: ರಾಜು ಹಜೇರಿ
ಬೈಲಹೊಂಗಲ: ತಾಲ್ಲೂಕಿನ ಊಟಕೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ರಾಜ್ಯಮಟ್ಟದ ಉಪನ್ಯಾಸಕ ರಾಜು ಹಜೇರಿ ಅವರಿಂದ ಮೌಲ್ಯಶಿಕ್ಷಣ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳು ಕಲಿಯುವ ವಯಸ್ಸಿನಲ್ಲಿ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಗುರುಗಳು ಹಾಗೂ ತಂದೆ-ತಾಯಿಗಳಿಗೆ ಗೌರವದಿಂದ ನಡೆದುಕೊಳ್ಳಬೇಕು. ಪರಿಶ್ರಮ ಮತ್ತು ನಿರಂತರ ಪ್ರಯತ್ನವೇ ಯಶಸ್ಸಿಗೆ ಮೆಟ್ಟಿಲು ಎಂದು ರಾಜು ಹಜೇರಿ ಹೇಳಿದರು.
ಮೊಬೈಲ್ ಚಟದಿಂದ ದೂರವಿದ್ದು, ಹೆಚ್ಚು ಅಂಕ ಗಳಿಸಲು ನೆರವಾಗುವ ಓದಿನ ಕಡೆಗೆ ಆಸಕ್ತಿ ಬೆಳೆಸಿಕೊಂಡರೆ ಶಾಲೆ ಹಾಗೂ ಊರಿಗೆ ಕೀರ್ತಿ ತರಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರಿಂದ ಪುರಸ್ಕಾರ ಪಡೆದಿರುವ, ಕೇವಲ ಮೂರನೇ ತರಗತಿ ಕಲಿತರೂ 18 ಜಿಲ್ಲೆಗಳಲ್ಲಿ ಉಪನ್ಯಾಸ ನೀಡಿರುವ ರಾಜು ಹಜೇರಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಹಿರಿಯ ಶಿಕ್ಷಕ ಎಸ್.ಜಿ. ತುರಮಂದಿ ಮಾತನಾಡಿದರು. ಶಿಕ್ಷಕರಾದ ಎನ್.ಜೆ. ನಾಯಕ್, ವಿ.ಎಸ್. ಸಿದ್ದಾಪುರ, ಪಿ.ಬಿ. ಶೆಟ್ಟೆಪ್ಪನವರ್ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಪಾರ್ವತಿ ಮೆಟ್ಯಾಳ ಪ್ರಾರ್ಥನೆ ಹಾಡಿದರು. ಭಾರತೀ ಗೂಳಪ್ಪನವರ್ ಸ್ವಾಗತಿಸಿದರು.