ಬೈಲಹೊಂಗಲ

ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ : ಪೂರ್ವಭಾವಿ ಸಭೆ

ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ : ಪೂರ್ವಭಾವಿ ಸಭೆ

ಬೈಲಹೊಂಗಲ 17 : ಪಟ್ಟಣ ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದ ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ ಆಚರಿಸುವ ಸಲುವಾಗಿ ಎಲ್ಲ ಅಂಗ ಸಂಸ್ಥೆಗಳ, ಹಳೇ ವಿದ್ಯಾರ್ಥಿಗಳ ಪೂರ್ವಭಾವಿ ಸಭೆಯನ್ನು ಡಾ.ಶಿವಾನಂದ ಭಾರತಿ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಏ.7 ರಂದು ಮುಂಜಾನೆ 10.30 ಕ್ಕೆ ಶ್ರೀ ಶಿವಯೋಗೀಶ್ವರ ಜ್ಞಾನ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದು ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ-ಸೂಚನೆ ನೀಡಬೇಕೆಂದು ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದಭಾರತಿ ಸ್ವಾಮೀಜಿ ಹೇಳಿದರು.

ಅವರು ಇಂಚಲ ಗ್ರಾಮದ ಶೀವಯೋಗೀಶ್ವರ ಗ್ರಾಮೀಣ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿನ್ನುದ್ದೇಶಿಸಿ ಮಾತನಾಡಿ, ಮೂಲಭೂತ ಸೌಕರ್ಯವಿಲ್ಲದ ಗ್ರಾಮದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮಿಜಿಯವರು ಈ ಭಾಗದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಅಭಿಲಾಷೆಯಿಂದ ಶಿವಯೋಗೀಶ್ವರ ಸಂಸ್ಥೆಯನ್ನು ಹುಟ್ಟುಹಾಕಿ , ಎಲ್‌ಕೆಜಿಯಿಂದ ಹಿಡಿದು ಪಿಎಚ್‌ಡಿವರೆಗೆ ವಿದ್ಯಾಮಂದಿರ ಸ್ಥಾಪಿಸಿ , ಬರುವ ದಿನಗಳಲ್ಲಿ ಬಿಎಸ್‌ಸಿ ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜು, ಬಿಇಡಿ, ಆಂಗ್ಲ ಮಾಧ್ಯಮ ವಸತಿ ಶಾಲೆ ಆರಂಭಿಸುವ ಸಂಕಲ್ಪ ತೊಟ್ಟಿದ್ದಾರೆ. ಶ್ರೀಮಠದ ಮೂರನೇ ಪೀಠಾಧಿಕಾರಿ ವಾಕಸಿದ್ಧಿ ಪುರುಷ ಸಿದ್ಧರಾಮ ಶಿವಯೋಗೀಶ್ವರರು ಅಂದು ನುಡಿದ ಅಮೃತ ವಾಣಿ ಪುಟ್ಟ ಗ್ರಾಮ ಇಂಚಲಕ್ಕೆ ದೇಶದ ವಿವಿಧ ಮೂಲೆಗಳಿಂದ ಶಿಕ್ಷಣಕ್ಕೆ ಬರುತ್ತಾರೆಂದು ನುಡಿದ ವಾಣಿ ಇಂದು ಅಕ್ಷರಸಹ ಸತ್ಯವಾಗಿದೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಅಖಿಲ ಭಾರತ ವೇದಾಂತ ಪರಿಷತ್ ಹಮ್ಮಿಕೊಳ್ಳುವ ಮೂಲಕ ಈ ಭಾಗದಲ್ಲಿ ಆಧ್ಯಾತ್ಮಿಕತೆಯ ಜ್ಞಾನಾರ್ಜನೆ ಬಿತ್ತುತ್ತಿರುವ ಕಾರ್ಯ ಅಮೂಘವಾಗಿದೆ ಎಂದರು.  ಶ್ರೀಗಳು ಹುಟ್ಟು ಹಾಕಿದ ಸಂಸ್ಥೆ ಇಂದು ಸುವರ್ಣ ಮಹೋತ್ಸವ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಇಂಚಲ ಗ್ರಾಮ ಇಂದು ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚು ಶಿಕ್ಷಕರನ್ನು ಕೊಟ್ಟ ದೊಡ್ಡ ಕೊಡುಗೆಯಿಂದಾಗಿ ಈ ಗ್ರಾಮ ಶಿಕ್ಷಕರ ತವರೂರು ಎಂಬ ಬಿರುದಿಗೆ ಪಾತ್ರವಾಗಿದೆ. ಇದರ ಕುರುಹಿಗಾಗಿ ದೇಶದಲ್ಲಿಯೇ ಅತೀ ಹೆಚ್ಚು ಶಿಕ್ಷಕರನ್ನು ಒಳಗೊಂಡ ಪ್ರಥಮ ಗ್ರಾಮವೆಂದು ಗೂಗಲ್‌ನಲ್ಲಿ ಘೋಷಣೆಯಾಗಿರುವುದು ಸಂತಸ ತಂದಿದೆ. ಸಂಸ್ಥೆಯಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ಹೆಮ್ಮೆಯ ವಿಚಾರ. ಶೈಕ್ಷಣಿಕ, ಆಧ್ಯಾತ್ಮಿಕ, ಶಿಕ್ಷಕ ವೃತ್ತಿ, ಹೈನುಗಾರಿಕೆ, ಸಾವಯುವ ಕೃಷಿ, ಗೋಶಾಲೆ ಆರಂಭಿಸುವ ಮೂಲಕ ರೈತರ ಸ್ವಾವಲಂಭಿ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಒಬ್ಬ ಯೋಗಿ ಸಂಕಲ್ಪ ಮಾಡಿದರೆ ಏನ ಬೇಕಾದರೂ ಸಾಧನೆ ಮಾಡಬಹುದೆಂಬುದು ಡಾ.ಶಿವಾನಂದ ಭಾರತಿ ಶ್ರೀಗಳ ಸಾಕ್ಷಿಯಾಗಿದ್ದಾರೆ. ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಜಿಯವರ 85 ನೇ ಜಯಂತ್ಯೋತ್ಸವ, 55 ನೇ ಅಖಿಲ ಭಾರತ ವೇದಾಂತ ಪರಿಷತ್ ಮತ್ತು ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ 50 ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಚರಣೆಯ ಸಮಾರಂಭಕ್ಕೆ ರಾಷ್ಟ ಹಾಗೂ ರಾಜ್ಯ ಮಟ್ಟದ ಗಣ್ಯ-ಮಾನ್ಯರು, ಸಾಧು-ಸೂಫಿ-ಸಂತರು, ವಿದ್ವಾಂಸರು, ಕಲಾವಿದರು, ಸಾಹಿತಿಗಳು, ಸಾಧಕರನ್ನು ಆಹ್ವಾನಿಸಲಾಗುವುದೆಂದರು. ಜಾತಿ-ಮತ-ಪಂಥ, ಬಡವ, ಶ್ರೀಮಂತ, ಹೆಣ್ಣು-ಗಂಡು ಎನ್ನುವ ಬೇಧ-ಭಾವ ತೊರೆದು ನಾಡಿನೆಲ್ಲೆಡೆ ಮಾದರಿ ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದರು. ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಎಂ.ರಾಹುತನವರ ಮಾತನಾಡಿ, ಶಿಕ್ಷಣ ಸಂಸ್ಥೆ, ಶ್ರೀಮಠದ ನಡೆದು ಬಂದ ದಾರಿ ಕುರಿತು ಮಾರ್ಮಿಕವಾಗಿ ವಿವರಿಸಿದರು. ಹಳೆಯ ವಿದ್ಯಾರ್ಥಿ ಎಸ್.ಡಿ.ಗಂಗಣ್ಣವರ ಮಾತನಾಡಿ, ಈ ಸಮಾರಂಭಕ್ಕೆ ಸುಮಾರು 20 ಸಾವಿರಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಗೋಷ್ಠಿಯಲ್ಲ್ಲಿ ಗೌ.ಕಾರ್ಯದರ್ಶಿ ಎಸ್.ಎನ್.ಕೊಳ್ಳಿ, ಎಸ್.ಬಿ.ಮದಿಹಳ್ಳಿ, ಆರ್.ಸಿ.ರಾಯನಾಯ್ಕರ, ಡಾ.ಜಿ.ವಿನಯಮೋಹನ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ಕರವಿನಕೊಪ್ಪ ಸ್ವಾಗತಿಸಿದರು. ಪ್ರಾಚಾರ್ಯ ಎಂ.ಸಿ.ಮಟ್ಟಿ ನಿರೂಪಿಸಿದರು. ಮುಖ್ಯಾಧ್ಯಾಪಕ ಬಿ.ಪಿ.ತುಪ್ಪದ ವಂದಿಸಿದರು. 




ಸುದ್ದಿ ಓದಿ