ರಾಷ್ಟ್ರೀಯ

ಬಿಹಾರದ ಸರಣ್‌ನಲ್ಲಿ ಟ್ರಕ್-ಆಟೋ ಮುಖಾಮುಖಿ ಡಿಕ್ಕಿ: 9 ತಿಂಗಳ ಮಗು ಸೇರಿದಂತೆ ನಾಲ್ವರು ಸಾವು

ಬಿಹಾರದ ಸರಣ್‌ನಲ್ಲಿ ಟ್ರಕ್-ಆಟೋ ಮುಖಾಮುಖಿ ಡಿಕ್ಕಿ: 9 ತಿಂಗಳ ಮಗು ಸೇರಿದಂತೆ ನಾಲ್ವರು ಸಾವು

ಛಾಪ್ರಾ, ಅ. 28 : ಬಿಹಾರದ ಸರಣ್ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಟ್ರಕ್ ಮತ್ತು ಪ್ರಯಾಣಿಕರ ಆಟೋರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಒಂಬತ್ತು ತಿಂಗಳ ಹೆಣ್ಣು ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಗರ್ಖಾ ಪೊಲೀಸ್ ಠಾಣೆ ವ್ಯಾಪ್ತಿಯ ಭೈಸ್ಮಾರಾ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 722ರಲ್ಲಿ ಈ ಅಪಘಾತ ಸಂಭವಿಸಿದೆ. ಛಾಪ್ರಾದಿಂದ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೋರಿಕ್ಷಾಕ್ಕೆ ಎದುರಿನಿಂದ ಬಂದ ಟ್ರಕ್ ಡಿಕ್ಕಿ ಹೊಡೆದಿದೆ.

ಮೃತರನ್ನು ಪರ್ಸಾ ಪೊಲೀಸ್ ಠಾಣೆ ವ್ಯಾಪ್ತಿಯ ಪುರೇ ಛಾಪ್ರಾ ಗ್ರಾಮದ ವಿಶಾಲ್ ಕುಮಾರ್ ರಾಮ್ ಅವರ ಪತ್ನಿ ಅನು ಕುಮಾರಿ (26), ಭಗವಾನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರತನ್‌ಪುರ ಪ್ರದೇಶದ ಸುರೇಂದ್ರ ಪ್ರಸಾದ್ ಅವರ ಪುತ್ರ ಆಶಿಶ್ ಕುಮಾರ್ (25) ಹಾಗೂ ಕತ್ರಾ ಪ್ರದೇಶದ ಭೋಲಾ ಪ್ರಸಾದ್ ಅವರ ಪುತ್ರ ಅಮನ್ ಕುಮಾರ್ (15) ಎಂದು ಗುರುತಿಸಲಾಗಿದೆ. ಮೃತಪಟ್ಟ ನಾಲ್ಕನೇ ವ್ಯಕ್ತಿ ಒಂಬತ್ತು ತಿಂಗಳ ಹೆಣ್ಣು ಮಗು ಎಂದು ಪೊಲೀಸರು ತಿಳಿಸಿದ್ದಾರೆ.

ಆ ಮಾರ್ಗವಾಗಿ ಸಂಚರಿಸುತ್ತಿದ್ದ 112 ತುರ್ತು ಪೊಲೀಸ್ ತಂಡವು ತಕ್ಷಣವೇ ಗಾಯಾಳುಗಳನ್ನು ಛಾಪ್ರಾದ ಸದರ್ ಆಸ್ಪತ್ರೆಗೆ ಕರೆದೊಯ್ದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಬಳಿಕ ಟ್ರಕ್ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರಾರಿಯಾಗಿರುವ ಅಪರಿಚಿತ ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಸುದ್ದಿ ಓದಿ