ಜಿಯೋ ಮುಂದಿನ ಹಂತದಲ್ಲಿ ಎಐ, ಕ್ಲೌಡ್ ಮತ್ತು ಬಾಹ್ಯಾಕಾಶ ಸಂಪರ್ಕ ತಂತ್ರಜ್ಞಾನಕ್ಕೆ ಆದ್ಯತೆ: ಆಕಾಶ್ ಅಂಬಾನಿ
ಮುಂಬೈ, ಅ. 28 : ಜಿಯೋ ಪ್ಲಾಟ್ಫಾರ್ಮ್ಸ್ ಬುಧವಾರ ಷೇರುಪೇಟೆಯಲ್ಲಿ ಭರ್ಜರಿ ಆರಂಭ ಕಂಡಿದ್ದು, ಅದರ ಷೇರುಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಬೆಲೆಗಿಂತ ಶೇ. 21.36ರಷ್ಟು ಪ್ರೀಮಿಯಂನಲ್ಲಿ ವಹಿವಾಟು ಆರಂಭಿಸಿವೆ.
ಮುಂಬೈನಲ್ಲಿ ನಡೆದ ಷೇರುಪೇಟೆ ಪ್ರವೇಶ ಸಮಾರಂಭದಲ್ಲಿ ಮಾತನಾಡಿದ ಜಿಯೋ ಪ್ಲಾಟ್ಫಾರ್ಮ್ಸ್ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಅಂಬಾನಿ, ಮುಂದಿನ ದಶಕದಲ್ಲಿ ಕಂಪನಿಯ ತಂತ್ರಜ್ಞಾನ ಕ್ಷೇತ್ರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ವಿವರಿಸಿದರು. ಕೃತಕ ಬುದ್ಧಿಮತ್ತೆ (ಎಐ), ಕ್ಲೌಡ್ ಕಂಪ್ಯೂಟಿಂಗ್, ಸಂಪರ್ಕಿತ ಸಾಧನಗಳು ಮತ್ತು ಉಪಗ್ರಹ ಆಧಾರಿತ ಸಂಪರ್ಕ ವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.
ಮುಂದಿನ ಹಂತದ ಬೆಳವಣಿಗೆಯಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ದೇಶದ ಕೋಟ್ಯಂತರ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಜಿಯೋದ ಪ್ರಮುಖ ಉದ್ದೇಶವಾಗಿದೆ ಎಂದು ಆಕಾಶ್ ಹೇಳಿದರು.
ಸಂಪರ್ಕ ವ್ಯವಸ್ಥೆ, ಕಂಪ್ಯೂಟಿಂಗ್ ಮತ್ತು ಬುದ್ಧಿಮತ್ತೆಯನ್ನು ಸಮನ್ವಯಗೊಳಿಸುವ ಮೂಲಕ ಸಮಗ್ರ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಕಂಪನಿ ಹೊಂದಿದೆ. ಇದರಿಂದ ವಿವಿಧ ಪ್ರದೇಶಗಳು ಮತ್ತು ಭಾಷೆಗಳ ಜನರು ಡಿಜಿಟಲ್ ಆರ್ಥಿಕತೆಯಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂದರು.
ಭಾರತೀಯರ ಜೀವನ ಮತ್ತು ಕೆಲಸದ ವಿಧಾನದಲ್ಲಿ ಮಹತ್ವದ ಬದಲಾವಣೆ ತರಬಲ್ಲ ತಂತ್ರಜ್ಞಾನಗಳನ್ನು ಜನರಿಗೆ ತಲುಪಿಸುವುದು ಜಿಯೋದ ಉದ್ದೇಶವಾಗಿದೆ. ಎಐ, ಕ್ಲೌಡ್ ಮೂಲಸೌಕರ್ಯ, ಸಂಪರ್ಕಿತ ಸಾಧನಗಳು, ಬಾಹ್ಯಾಕಾಶ ಆಧಾರಿತ ಸಂಪರ್ಕ ವ್ಯವಸ್ಥೆ ಹಾಗೂ ಭವಿಷ್ಯದ ಡಿಜಿಟಲ್ ಸೇವೆಗಳು ಕಂಪನಿಯ ಪ್ರಮುಖ ಆದ್ಯತೆಗಳಾಗಿವೆ ಎಂದು ಅವರು ಹೇಳಿದರು.
ಜಿಯೋದ ಮೊದಲ ದಶಕದ ಪ್ರಯಾಣವನ್ನು ಸ್ಮರಿಸಿದ ಆಕಾಶ್, ಮೊಬೈಲ್ ಡೇಟಾವನ್ನು ಕೈಗೆಟುಕುವ ದರದಲ್ಲಿ ಒದಗಿಸುವುದು ಮತ್ತು ಲಕ್ಷಾಂತರ ಜನರನ್ನು ಡಿಜಿಟಲ್ ಆರ್ಥಿಕತೆಯ ಭಾಗವಾಗಿಸುವುದು ಕಂಪನಿಯ ಆರಂಭಿಕ ಗುರಿಯಾಗಿತ್ತು ಎಂದರು. ಮುಂದಿನ ಹಂತದಲ್ಲಿ ಇದೇ ಉದ್ದೇಶವನ್ನು ಹೊಸ ತಂತ್ರಜ್ಞಾನಗಳಿಗೂ ವಿಸ್ತರಿಸಿ, ಡಿಜಿಟಲ್ ಸಂಪರ್ಕ ಹೊಂದಿದ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಜಿಯೋ ಪ್ಲಾಟ್ಫಾರ್ಮ್ಸ್ ಅನ್ನು ಕೇವಲ ಭಾರತೀಯ ಮಾರುಕಟ್ಟೆಗೆ ಸೀಮಿತಗೊಳಿಸದೆ, ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟ ತಂತ್ರಜ್ಞಾನ ಕಂಪನಿಯನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯನ್ನೂ ಅವರು ವ್ಯಕ್ತಪಡಿಸಿದರು.
ಭಾರತದ ನಿರ್ದಿಷ್ಟ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಜಿಯೋ ತನ್ನ ತಂತ್ರಜ್ಞಾನ ಸಾಮರ್ಥ್ಯಗಳನ್ನು ದೇಶದಲ್ಲೇ ಅಭಿವೃದ್ಧಿಪಡಿಸಿದೆ ಎಂದು ಆಕಾಶ್ ಹೇಳಿದರು. ಭಾರತವು ಇತರ ದೇಶಗಳಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ಬಳಕೆದಾರ ರಾಷ್ಟ್ರವಾಗಿರುವುದರಿಂದ ಹೊರಬಂದು, ಸ್ವಂತ ತಂತ್ರಜ್ಞಾನ ಮತ್ತು ಡಿಜಿಟಲ್ ವೇದಿಕೆಗಳನ್ನು ಅಭಿವೃದ್ಧಿಪಡಿಸುವ ರಾಷ್ಟ್ರವಾಗಿ ಬೆಳೆಯುತ್ತಿದೆ ಎಂದರು.
ಭಾರತದ ಬೃಹತ್ ಜನಸಂಖ್ಯೆ ಮತ್ತು ಅಗತ್ಯಗಳಿಗೆ ತಕ್ಕಂತೆ ಅನೇಕ ಅಸ್ತಿತ್ವದಲ್ಲಿರುವ ತಂತ್ರಜ್ಞಾನ ಪರಿಹಾರಗಳನ್ನು ರೂಪಿಸಲಾಗಿಲ್ಲ. ಹೀಗಾಗಿ ಜಿಯೋ ತನ್ನದೇ ಆದ ತಂತ್ರಜ್ಞಾನ ಸಾಮರ್ಥ್ಯಗಳನ್ನು ಆರಂಭದಿಂದಲೇ ಅಭಿವೃದ್ಧಿಪಡಿಸಿದೆ ಎಂದು ಅವರು ವಿವರಿಸಿದರು.
ಐಪಿಒಗೆ ಹೂಡಿಕೆದಾರರಿಂದ ದೊರೆತ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ ಆಕಾಶ್, ಸಾರ್ವಜನಿಕ ಷೇರು ವಿತರಣೆ ಆರಂಭವಾದ ಕೇವಲ 95 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಂದಾದಾರಿಕೆಯಾಗಿದೆ. ಇದು ಭಾರತದ ಅತಿದೊಡ್ಡ ಐಪಿಒಗೆ ದೊರೆತ ಅತ್ಯಂತ ವೇಗದ ಚಂದಾದಾರಿಕೆ ಎಂದು ಹೇಳಿದರು.
ಜಿಯೋದ ಆರಂಭಿಕ ದಿನಗಳನ್ನು ಸ್ಮರಿಸಿದ ಅವರು, ಆರಂಭದಲ್ಲಿ ಗ್ರಾಹಕರ ನೆಲೆ ಅಥವಾ ಆದಾಯವಿಲ್ಲದಿದ್ದರೂ, ವಿಶ್ವಮಟ್ಟದ ತಂತ್ರಜ್ಞಾನವನ್ನು ಭಾರತೀಯರಿಗೆ ಕೈಗೆಟುಕುವ ದರದಲ್ಲಿ ಒದಗಿಸುವ ಗುರಿಯೊಂದಿಗೆ ಕಂಪನಿ ತನ್ನ ಪ್ರಯಾಣ ಆರಂಭಿಸಿತ್ತು ಎಂದರು.
2017ರ ಫೆಬ್ರವರಿ 20ರಂದು ಜಿಯೋ 10 ಕೋಟಿ ಗ್ರಾಹಕರ ಮೈಲಿಗಲ್ಲು ತಲುಪಿದ ದಿನವನ್ನು ಅವರು ವಿಶೇಷವಾಗಿ ಸ್ಮರಿಸಿದರು. ನಂತರ 50 ಕೋಟಿ ಗ್ರಾಹಕರನ್ನು ತಲುಪುವ ಗುರಿ ಹೊಂದಲಾಗಿತ್ತು. ಇದೀಗ ಆ ಗುರಿಯನ್ನೂ ಕಂಪನಿ ದಾಟಿದೆ ಎಂದು ತಿಳಿಸಿದರು.
ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ ಆಕಾಶ್, ಗ್ರಾಹಕರಿಗೆ ಮೌಲ್ಯಯುತ ಸೇವೆಗಳನ್ನು ಒದಗಿಸುವುದರ ಜೊತೆಗೆ ದೀರ್ಘಾವಧಿಯಲ್ಲಿ ಷೇರುದಾರರ ಸಂಪತ್ತನ್ನು ರಕ್ಷಿಸಿ ವೃದ್ಧಿಸುವುದು ಜಿಯೋ ಪ್ಲಾಟ್ಫಾರ್ಮ್ಸ್ನ ಪ್ರಮುಖ ಆದ್ಯತೆಯಾಗಿದೆ ಎಂದರು.
ಷೇರುಪೇಟೆ ಪ್ರವೇಶವು ಕಂಪನಿಯ ಪ್ರಯಾಣದ ಅಂತ್ಯವಲ್ಲ, ಬದಲಾಗಿ ಹೊಸ ಹಂತದ ಆರಂಭವಾಗಿದೆ ಎಂದು ಅವರು ಬಣ್ಣಿಸಿದರು. ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸಲು ಪಾರದರ್ಶಕ ಸಂವಹನ, ನೀಡಿದ ಭರವಸೆಗಳ ಪಾಲನೆ ಮತ್ತು ಕಾರ್ಯಗಳ ಮೂಲಕ ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.