ವಿದ್ಯಾರ್ಥಿಗಳಲ್ಲಿ ಗುರಿ, ಪರಿಶ್ರಮ , ಏಕಾಗ್ರತೆ ಅಗತ್ಯ - ಶಾಸಕ ಕೃಷ್ಣನಾಯಕ
ಲೋಕದರ್ಶನ ವರದಿ
ಹೂವಿನಹಡಗಲಿ ಅ. 28: ವಿದ್ಯಾರ್ಥಿಗಳು ಜೀವನದಲ್ಲಿ ಸಮಯ ವ್ಯರ್ಥ ಮಾಡದೇ ,ಭವಿಷ್ಯದ ಬಗ್ಗೆ ಸ್ಪಷ್ಟವಾದ ಗುರಿ ಹೊಂದಿದಾಗ ಮಾತ್ರ ಶೈಕ್ಷಣಿಕ ಸಾಧನೆ ಸಾಧ್ಯ ಎಂದು ಶಾಸಕ ಕೃಷ್ಣನಾಯಕ ಸಲಹೆ ನೀಡಿದರು. ಪಟ್ಟಣದ ರುದ್ರಾಂಬ ಎಂ.ಪಿ.ಪ್ರಕಾಶ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ 2026-27 ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ, ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಮಾಣಿಕ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ. ಅದಕ್ಕೆ ಬೇಕಾಗುವ ಎಲ್ಲಾ ಮೂಲಭೂತಸೌಕರ್ಯಗಳನ್ನು ಒದಗಿಸುವುದಾಗಿ ಹೇಳಿದ ಅವರು ತಾಲೂಕಿನ ಅಭಿವೃದ್ಧಿ ಜತೆಗೆ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟು ಅನುದಾನ ನೀಡಲಾಗಿದೆ ಎಂದ ಅವರು ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲೇ ಭವಿಷ್ಯದ ಬಗ್ಗೆ ಪರಿಕಲ್ಪನೆ ಹೊಂದಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕೆಂಬ ಛಲ ಹಾಗೂ ಗುರಿ ಹೊಂದಬೇಕು. ಆತ್ಮವಿಶ್ವಾಸ, ಪ್ರಾಮಾಣಿಕವಾದ ಪ್ರಯತ್ನದಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು.
ಎಸ್.ಆರ್.ಎಂ.ಪಿ.ಪಿ.ಕಾಲೇಜಿನ ಪ್ರಾಚಾರ್ಯ ಎಂ.ವಿಜಯಕುಮಾರ ಹೇಮಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಬಿಜೆಪಿ ಮಂಡಲ ಅದ್ಯಕ್ಷ ಪೂಜಾರ ಮಲ್ಲಿಕಾರ್ಜುನ,ಮುಖಂಡರಾದ ಬೀರಬ್ಬಿ ಬಸವರಾಜ, ಈಟಿ.ಲಿಂಗರಾಜ, ಮಹಾಂತೇಶ,ಮಂಜುನಾಥ ಜೈನ್, ವಿಲ್ಸನ್ ಸ್ವಾಮಿ,ಶಿವರಾಜ್, ಮೀರಾಬಾಯಿ,ಸೌಮ್ಯ, ನಿ.ಶಿಕ್ಷಕ ಹೆಚ್.ಡಿ.ಜಗ್ಗಿನ್ , ಕಾಲೇಜಿನ ಅಭಿವೃದ್ದಿ ಸಮಿತಿ ಸದಸ್ಯರು ,ಉಪನ್ಯಾನಕರು ಇದ್ದರು. ಅಧ್ಯಾಪಕ ಡಾ.ಸುರೇಶ್ ಬೂದನೂರು ಸ್ವಾಗತಿಸಿದರು.ಈ ಸಂದರ್ಭದಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಏಳು ವಿದ್ಯಾರ್ಥಿಗಳಿಗೆ ಅಧ್ಯಾಪಕ ಸತೀಶ ಪಾಟೀಲ ತಲಾ ಎರಡು ಸಾವಿರ ನಗದು ಬಹುಮಾನ ನೀಡಿದರು.