ನವೆಂಬರ್ 1ರಿಂದ ಸಣ್ಣ ಇ-ಕಾಮರ್ಸ್ ಮಾರಾಟಗಾರರಿಗೆ ಸರಳೀಕೃತ ಜಿಎಸ್ಟಿ ನೋಂದಣಿ ಸೌಲಭ್ಯ ಜಾರಿ
ನವದೆಹಲಿ, ಅ. 23 : ಸಣ್ಣ ಇ-ಕಾಮರ್ಸ್ ಮಾರಾಟಗಾರರಿಗಾಗಿ ಸರಳೀಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನೋಂದಣಿ ಸೌಲಭ್ಯವನ್ನು ನವೆಂಬರ್ 1ರಿಂದ ಜಾರಿಗೆ ತರಲಾಗುವುದು ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಡೆದ 57ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಶಿಫಾರಸು ಮಾಡಲಾಗಿದ್ದ ಈ ಸೌಲಭ್ಯವನ್ನು ಆರಂಭಿಸಲು ಅಗತ್ಯವಿರುವ ತಾಂತ್ರಿಕ ವ್ಯವಸ್ಥೆಗಳ ಬದಲಾವಣೆಗಳು ಪೂರ್ಣಗೊಂಡಿವೆ. ಮುಂದಿನ ತಿಂಗಳ ಆರಂಭದಿಂದ ಜಿಎಸ್ಟಿ ಪೋರ್ಟಲ್ನಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಮಾತನಾಡಿದ ಅಧಿಕಾರಿ ತಿಳಿಸಿದರು.
ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ಟಿ) ನಿಯಮಗಳು, 2017ರ ಹೊಸ ನಿಯಮ 14ಬಿ ಅಡಿಯಲ್ಲಿ ಐಚ್ಛಿಕ ಸರಳೀಕೃತ ನೋಂದಣಿ ವ್ಯವಸ್ಥೆಯನ್ನು ಜಿಎಸ್ಟಿ ಮಂಡಳಿ ಪ್ರಸ್ತಾಪಿಸಿದೆ. ಈ ವ್ಯವಸ್ಥೆಯು ಇ-ಕಾಮರ್ಸ್ ಆಪರೇಟರ್ಗಳ (ಇಸಿಒ) ಮೂಲಕ ಮಾತ್ರ ಸರಕುಗಳನ್ನು ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳಿಗೆ ಅನ್ವಯಿಸುತ್ತದೆ.
ಈ ಸೌಲಭ್ಯದಡಿ, ಅರ್ಹ ಸಣ್ಣ ಮಾರಾಟಗಾರರು ಇತರ ರಾಜ್ಯಗಳಲ್ಲಿ ತಮ್ಮದೇ ಆದ ಕಚೇರಿ ಅಥವಾ ಅಂಗಡಿಯನ್ನು ಸ್ಥಾಪಿಸುವ ಅಗತ್ಯವಿಲ್ಲ. ಬದಲಿಗೆ, ಇ-ಕಾಮರ್ಸ್ ವೇದಿಕೆಯ ಗೋದಾಮನ್ನು ತಮ್ಮ ಪ್ರಮುಖ ವ್ಯವಹಾರ ಸ್ಥಳವೆಂದು ಘೋಷಿಸುವ ಮೂಲಕ ಆ ರಾಜ್ಯಗಳಲ್ಲಿ ಜಿಎಸ್ಟಿ ನೋಂದಣಿ ಪಡೆಯಬಹುದು.
ಆದರೆ, ಮಾರಾಟಗಾರರು ತಿಂಗಳಿಗೆ ಗರಿಷ್ಠ 2.5 ಲಕ್ಷ ರೂ. ಮಿತಿಯೊಳಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವರ್ಗಾಯಿಸುವ ಅರ್ಹತೆಯನ್ನು ಹೊಂದಿರಬೇಕು. ಅಲ್ಲದೆ, ಕನಿಷ್ಠ ಒಂದು ರಾಜ್ಯದಲ್ಲಿ ಈಗಾಗಲೇ ಭೌತಿಕ ವ್ಯವಹಾರ ಸ್ಥಳ ಮತ್ತು ಜಿಎಸ್ಟಿ ನೋಂದಣಿ ಹೊಂದಿರಬೇಕು. ಆ ರಾಜ್ಯವು ಅವರ ತವರು ರಾಜ್ಯವಾಗಿ ಮುಂದುವರಿಯಲಿದೆ.
ಈ ಯೋಜನೆಯಡಿ ಪಡೆಯುವ ನೋಂದಣಿಯನ್ನು ಇ-ಕಾಮರ್ಸ್ ವೇದಿಕೆಗಳ ಮೂಲಕ ನಡೆಯುವ ಸರಕು ಪೂರೈಕೆಗೆ ಮಾತ್ರ ಬಳಸಬಹುದು. ಸಂಬಂಧಪಟ್ಟ ಇ-ಕಾಮರ್ಸ್ ಆಪರೇಟರ್ನ ಒಪ್ಪಿಗೆಯನ್ನು ವ್ಯವಸ್ಥೆಯ ಮೂಲಕ ಪಡೆಯಲಾಗುತ್ತದೆ.
ನೋಂದಣಿ ಪ್ರಕ್ರಿಯೆಯನ್ನು ವಿವರಿಸುವ ವಿಸ್ತೃತ ಸುತ್ತೋಲೆಗಳು ಹಾಗೂ ಅಗತ್ಯ ಅಧಿಸೂಚನೆಗಳನ್ನು ಮುಂದಿನ ಕೆಲವು ದಿನಗಳಲ್ಲಿ ಹೊರಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು. ಜಿಎಸ್ಟಿ ಮಂಡಳಿ ಅನುಮೋದಿಸಿರುವ ಕೆಲವು ಮರುಪಾವತಿ ಸಂಬಂಧಿತ ಬದಲಾವಣೆಗಳ ಕುರಿತ ಅಧಿಸೂಚನೆಗಳು ಮತ್ತು ಸುತ್ತೋಲೆಗಳೂ ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆಯಿದೆ.
ಹೊಸ ವ್ಯವಸ್ಥೆಯನ್ನು ಎಷ್ಟು ಸಣ್ಣ ಮಾರಾಟಗಾರರು ಅಳವಡಿಸಿಕೊಳ್ಳುತ್ತಾರೆ ಮತ್ತು ಇದರಿಂದ ಅವರು ತಮ್ಮ ವ್ಯವಹಾರವನ್ನು ಇತರ ರಾಜ್ಯಗಳಿಗೆ ಹೇಗೆ ವಿಸ್ತರಿಸಿಕೊಳ್ಳುತ್ತಾರೆ ಎಂಬುದನ್ನು ಸರ್ಕಾರ ಗಮನಿಸಬೇಕು ಎಂದು ಅಧಿಕಾರಿ ಹೇಳಿದರು. ಈ ಸೌಲಭ್ಯದ ಪ್ರಯೋಜನಗಳನ್ನು ಕಾಲಕಾಲಕ್ಕೆ ಮೌಲ್ಯಮಾಪನ ಮಾಡಿ ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದೂ ಅವರು ಅಭಿಪ್ರಾಯಪಟ್ಟರು.
ಐಟಿಸಿ ನಿಯಮದ ಕುರಿತು ಅಧಿಕಾರಿಗಳ ಸಮಿತಿ ಪರಿಶೀಲನೆ
ಇದೇ ವೇಳೆ, ಸಿಜಿಎಸ್ಟಿ ಕಾಯ್ದೆಯ ಸೆಕ್ಷನ್ 16(2)(ಸಿ) ಅಡಿಯಲ್ಲಿ ಇರುವ ನಿರ್ಬಂಧದ ಕುರಿತು ಅಧಿಕಾರಿಗಳ ಸಮಿತಿ ವಿವರವಾದ ಪರಿಶೀಲನೆ ನಡೆಸಲಿದೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಈ ನಿಯಮವು ಖರೀದಿದಾರರು ಪಡೆಯುವ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸೌಲಭ್ಯವನ್ನು ಮಾರಾಟಗಾರರು ಸರ್ಕಾರಕ್ಕೆ ನಿಜವಾಗಿಯೂ ತೆರಿಗೆ ಪಾವತಿಸಿರುವುದಕ್ಕೆ ಸಂಬಂಧಿಸುತ್ತದೆ.
ಈ ವಿಷಯವನ್ನು ಪರಿಶೀಲಿಸಲು ರಚಿಸಲಾಗಿರುವ ಅಧಿಕಾರಿಗಳ ಸಮಿತಿಯು ಮೂರು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ವರದಿ ಸಿದ್ಧವಾದ ಬಳಿಕ ಅದನ್ನು ಅಂತಿಮ ನಿರ್ಧಾರಕ್ಕಾಗಿ ಜಿಎಸ್ಟಿ ಮಂಡಳಿಯ ಮುಂದೆ ಮಂಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು.
ಈ ವಿಷಯದ ಕುರಿತು ಹೆಚ್ಚಿನ ಪರಿಶೀಲನೆ ನಡೆಸಬೇಕೆಂದು ಹಲವು ರಾಜ್ಯಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ 57ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ವಿಚಾರವನ್ನು ಅಧಿಕಾರಿಗಳ ಸಮಿತಿಗೆ ವಹಿಸಲಾಗಿತ್ತು.
ಪ್ರಸ್ತುತ, ಖರೀದಿದಾರರು ಮಾನ್ಯವಾದ ಇನ್ವಾಯ್ಸ್ ಹೊಂದಿದ್ದರೂ, ಸರಕು ಅಥವಾ ಸೇವೆಗಳನ್ನು ಸ್ವೀಕರಿಸಿದ್ದರೂ ಮತ್ತು ಮಾರಾಟಗಾರರಿಗೆ ಹಣ ಪಾವತಿಸಿದ್ದರೂ, ಮಾರಾಟಗಾರರು ಸರ್ಕಾರಕ್ಕೆ ಸಂಬಂಧಪಟ್ಟ ತೆರಿಗೆಯನ್ನು ಪಾವತಿಸದಿದ್ದರೆ ಖರೀದಿದಾರರ ಐಟಿಸಿ ಸೌಲಭ್ಯವನ್ನು ನಿರಾಕರಿಸುವ ಅಥವಾ ಹಿಂಪಡೆಯುವ ಸಾಧ್ಯತೆಯಿದೆ.
ಅಧಿಕಾರಿಗಳ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಕೈಗೊಳ್ಳುವ ಯಾವುದೇ ನಿರ್ಧಾರವನ್ನು 2027ರ ಏಪ್ರಿಲ್ 1ರಿಂದ ಜಾರಿಗೆ ತರುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.