ಬಿಹಾರ ವಿಧಾನ ಪರಿಷತ್ತಿನ 8 ಸ್ಥಾನಗಳಿಗೆ ಮತದಾನ ಆರಂಭ: 150 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಪಾಟ್ನಾ, ಅ. 23 : ಬಿಹಾರ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆಯಡಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಎಂಟು ಸ್ಥಾನಗಳಿಗೆ ಶುಕ್ರವಾರ ಬಿಗಿ ಭದ್ರತೆಯ ನಡುವೆ ಮತದಾನ ಆರಂಭವಾಗಿದ್ದು, 150 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ನಾಲ್ಕು ಪದವೀಧರ ಕ್ಷೇತ್ರಗಳಾದ ಪಾಟ್ನಾ, ದರ್ಭಾಂಗಾ, ತಿರ್ಹುತ್ ಮತ್ತು ಕೋಶಿ ಹಾಗೂ ನಾಲ್ಕು ಶಿಕ್ಷಕರ ಕ್ಷೇತ್ರಗಳಾದ ಪಾಟ್ನಾ, ದರ್ಭಾಂಗಾ, ತಿರ್ಹುತ್ ಮತ್ತು ಸರಣ್ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ಚುನಾವಣಾ ಆಯೋಗದ ಪ್ರಕಾರ, ಬೆಳಿಗ್ಗೆ 10 ಗಂಟೆಯ ವೇಳೆಗೆ ಶಿಕ್ಷಕರ ಕ್ಷೇತ್ರಗಳಲ್ಲಿ ಶೇ. 11.08ರಷ್ಟು ಮತದಾನವಾಗಿದ್ದರೆ, ಪದವೀಧರ ಕ್ಷೇತ್ರಗಳಲ್ಲಿ ಶೇ. 5.86ರಷ್ಟು ಮತದಾನ ದಾಖಲಾಗಿದೆ.
ಶಿಕ್ಷಕರ ಕ್ಷೇತ್ರಗಳ ಪೈಕಿ ಸರಣ್ನಲ್ಲಿ ಅತಿ ಹೆಚ್ಚು ಶೇ. 13.56ರಷ್ಟು ಮತದಾನವಾಗಿದ್ದು, ಪಾಟ್ನಾದಲ್ಲಿ ಶೇ. 12.88, ದರ್ಭಾಂಗಾದಲ್ಲಿ ಶೇ. 12 ಮತ್ತು ತಿರ್ಹುತ್ನಲ್ಲಿ ಶೇ. 5.88ರಷ್ಟು ಮತದಾನ ದಾಖಲಾಗಿದೆ.
ಪದವೀಧರ ಕ್ಷೇತ್ರಗಳ ಪೈಕಿ ದರ್ಭಾಂಗಾದಲ್ಲಿ ಶೇ. 8ರಷ್ಟು ಮತದಾನವಾಗಿದ್ದು, ಪಾಟ್ನಾದಲ್ಲಿ ಶೇ. 5.50, ಕೋಶಿಯಲ್ಲಿ ಶೇ. 5.14 ಮತ್ತು ತಿರ್ಹುತ್ನಲ್ಲಿ ಶೇ. 4.81ರಷ್ಟು ಮತದಾನವಾಗಿದೆ.
ಒಟ್ಟು 5,32,847 ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನಕ್ಕೆ ಅರ್ಹರಾಗಿದ್ದಾರೆ. 933 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಇವುಗಳಲ್ಲಿ ಪದವೀಧರ ಕ್ಷೇತ್ರಗಳಲ್ಲಿ 598 ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ 335 ಮತಗಟ್ಟೆಗಳಿವೆ. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯಗೊಳ್ಳಲಿದೆ. ಅಕ್ಟೋಬರ್ 27ರಂದು ಮತ ಎಣಿಕೆ ನಡೆಯಲಿದೆ.
ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ), ಪ್ರತಿಪಕ್ಷಗಳ ಮಹಾಘಟಬಂಧನ್ ಮತ್ತು ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕೆಲವು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಪಾಲುದಾರ ಪಕ್ಷಗಳ ಅಭ್ಯರ್ಥಿಗಳೇ ಪರಸ್ಪರ ಸ್ಪರ್ಧಿಸುತ್ತಿರುವುದರಿಂದ ಚುನಾವಣಾ ಕಣ ಮತ್ತಷ್ಟು ಕುತೂಹಲ ಮೂಡಿಸಿದೆ.
ಪದವೀಧರ ಕ್ಷೇತ್ರಗಳಲ್ಲಿ ಜೆಡಿಯು ಪಾಟ್ನಾದಿಂದ ನೀರಜ್ ಕುಮಾರ್ ಮತ್ತು ತಿರ್ಹುತ್ನಿಂದ ಅಭಿಷೇಕ್ ಝಾ ಅವರನ್ನು ಕಣಕ್ಕಿಳಿಸಿದೆ. ಶಿಕ್ಷಕರ ಕ್ಷೇತ್ರಗಳಲ್ಲಿ ದರ್ಭಾಂಗಾದಿಂದ ಘನಶ್ಯಾಮ್ ರೈ ಮತ್ತು ಸರಣ್ನಿಂದ ಆನಂದ್ ಪುಷ್ಕರ್ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಲ್ಲಿ ಪಾಟ್ನಾ ಶಿಕ್ಷಕರ ಕ್ಷೇತ್ರದಿಂದ ನವಲ್ ಕಿಶೋರ್ ಯಾದವ್, ಕೋಶಿ ಪದವೀಧರ ಕ್ಷೇತ್ರದಿಂದ ಡಾ. ಎನ್.ಕೆ. ಯಾದವ್, ದರ್ಭಾಂಗಾ ಪದವೀಧರ ಕ್ಷೇತ್ರದಿಂದ ಸರ್ವೇಶ್ ಕುಮಾರ್ ಮತ್ತು ತಿರ್ಹುತ್ ಶಿಕ್ಷಕರ ಕ್ಷೇತ್ರದಿಂದ ನರೇಂದ್ರ ಪ್ರಸಾದ್ ಸಿಂಗ್ ಸ್ಪರ್ಧಿಸುತ್ತಿದ್ದಾರೆ.
ಪ್ರತಿಪಕ್ಷಗಳ ಮಹಾಘಟಬಂಧನ್ನಲ್ಲಿ ಸ್ಥಾನ ಹಂಚಿಕೆ ಕುರಿತು ಒಮ್ಮತ ಮೂಡದ ಹಿನ್ನೆಲೆಯಲ್ಲಿ ಆರ್ಜೆಡಿ ಮತ್ತು ಕಾಂಗ್ರೆಸ್ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿದಿವೆ. ಪಾಟ್ನಾ ಶಿಕ್ಷಕರ, ಪಾಟ್ನಾ ಪದವೀಧರ, ದರ್ಭಾಂಗಾ ಪದವೀಧರ ಮತ್ತು ಕೋಶಿ ಪದವೀಧರ ಕ್ಷೇತ್ರಗಳಲ್ಲಿ ಈ ಎರಡು ಪಕ್ಷಗಳ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಆರ್ಜೆಡಿ ಅಭ್ಯರ್ಥಿಗಳಲ್ಲಿ ಪಾಟ್ನಾ ಶಿಕ್ಷಕರ ಕ್ಷೇತ್ರದಿಂದ ಸಂಜೀವ್ ಕುಮಾರ್ ಸಿಂಗ್, ಪಾಟ್ನಾ ಪದವೀಧರ ಕ್ಷೇತ್ರದಿಂದ ದಿಲೀಪ್ ಕುಮಾರ್, ಕೋಶಿ ಪದವೀಧರ ಕ್ಷೇತ್ರದಿಂದ ನಿತೇಶ್ ಕುಮಾರ್, ದರ್ಭಾಂಗಾ ಪದವೀಧರ ಕ್ಷೇತ್ರದಿಂದ ಅನಿಲ್ ಕುಮಾರ್ ಝಾ, ಸರಣ್ ಶಿಕ್ಷಕರ ಕ್ಷೇತ್ರದಿಂದ ಪ್ರೊ. ಜೈರಾಮ್ ಯಾದವ್, ತಿರ್ಹುತ್ ಪದವೀಧರ ಕ್ಷೇತ್ರದಿಂದ ಡಾ. ರಶ್ಮಿ ವಿನಾಯಕ ಗೌತಮ್ ಮತ್ತು ದರ್ಭಾಂಗಾ ಶಿಕ್ಷಕರ ಕ್ಷೇತ್ರದಿಂದ ಕುನ್ವರ್ ರೈ ಸ್ಪರ್ಧಿಸುತ್ತಿದ್ದಾರೆ.
ಕಾಂಗ್ರೆಸ್ ಪಾಟ್ನಾ ಶಿಕ್ಷಕರ ಕ್ಷೇತ್ರದಿಂದ ಡಾ. ಸಂಜಯ್ ಯಾದವ್, ಪಾಟ್ನಾ ಪದವೀಧರ ಕ್ಷೇತ್ರದಿಂದ ಡಾ. ಅಸದ್ಉಲ್ಲಾ ಖಾನ್, ದರ್ಭಾಂಗಾ ಪದವೀಧರ ಕ್ಷೇತ್ರದಿಂದ ರಜನೀಕಾಂತ್ ಪಾಠಕ್, ಕೋಶಿ ಪದವೀಧರ ಕ್ಷೇತ್ರದಿಂದ ಮನೋಜ್ ಕುಮಾರ್ ಜೈಸ್ವಾಲ್ ಮತ್ತು ದರ್ಭಾಂಗಾ ಶಿಕ್ಷಕರ ಕ್ಷೇತ್ರದಿಂದ ಡಾ. ಮದನ್ ಮೋಹನ್ ಝಾ ಅವರನ್ನು ಕಣಕ್ಕಿಳಿಸಿದೆ.
ಜನ ಸುರಾಜ್ ಪಕ್ಷವು ಎಂಟೂ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಪಾಟ್ನಾ ಪದವೀಧರ ಕ್ಷೇತ್ರದಿಂದ ಡಾ. ಅನುಜ್ ಸಿಂಗ್, ದರ್ಭಾಂಗಾ ಪದವೀಧರ ಕ್ಷೇತ್ರದಿಂದ ಡಾ. ಮೊಹಮ್ಮದ್ ಇಮ್ತಿಯಾಜ್ ನೂರಾನಿ, ತಿರ್ಹುತ್ ಪದವೀಧರ ಕ್ಷೇತ್ರದಿಂದ ಡಾ. ವಿಮೋಹನ್ ಕುಮಾರ್ ಮತ್ತು ಕೋಶಿ ಪದವೀಧರ ಕ್ಷೇತ್ರದಿಂದ ರಜನೀಶ್ ರಂಜನ್ ಅವರನ್ನು ಕಣಕ್ಕಿಳಿಸಿದೆ.
ಶಿಕ್ಷಕರ ಕ್ಷೇತ್ರಗಳಲ್ಲಿ ಪಾಟ್ನಾದಿಂದ ದಿವ್ಯ ಜ್ಯೋತಿ, ದರ್ಭಾಂಗಾದಿಂದ ಎಸ್.ಪಿ. ರೈ, ಸರಣ್ನಿಂದ ಅಫಾಕ್ ಅಹ್ಮದ್ ಮತ್ತು ತಿರ್ಹುತ್ನಿಂದ ಶ್ಯಾಮ್ ನಂದನ್ ಯಾದವ್ ಸ್ಪರ್ಧಿಸುತ್ತಿದ್ದಾರೆ.
ಒಟ್ಟು 150 ಅಭ್ಯರ್ಥಿಗಳ ಪೈಕಿ ಪದವೀಧರ ಕ್ಷೇತ್ರಗಳಿಂದ 90 ಮಂದಿ ಮತ್ತು ಶಿಕ್ಷಕರ ಕ್ಷೇತ್ರಗಳಿಂದ 60 ಮಂದಿ ಚುನಾವಣಾ ಕಣದಲ್ಲಿದ್ದಾರೆ. ಅಕ್ಟೋಬರ್ 27ರಂದು ನಡೆಯಲಿರುವ ಮತ ಎಣಿಕೆಯ ಬಳಿಕ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.