ಮೂರನೇ ದಿನವೂ ಕುಸಿದ ಷೇರುಪೇಟೆ; 22,700ಕ್ಕಿಂತ ಕೆಳಗೆ ನಿಫ್ಟಿ
ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ 460.30 ಅಂಕಗಳು ಅಥವಾ ಶೇ. 0.62ರಷ್ಟು ಕುಸಿದು 73,249.39ಕ್ಕೆ ತಲುಪಿತು. ಎನ್‌ಎಸ್‌ಇ ನಿಫ್ಟಿ 123.70 ಅಂಕಗಳು ಅಥವಾ ಶೇ. 0.54ರಷ್ಟು ಇಳಿಕೆಯಾಗಿ 22,687.65ರಲ್ಲಿ ವಹಿವಾಟು ಮುಕ್ತಾಯಗೊಳಿಸಿತು.
ಮಾರುಕಟ್ಟೆಗಳು ಕುಸಿತದೊಂದಿಗೆ ವಹಿವಾಟು ಆರಂಭಿಸಿದವು. ದಿನದ ಬಹುತೇಕ ಅವಧಿಯಲ್ಲಿ ನಕಾರಾತ್ಮಕ ವಲಯದಲ್ಲೇ ಮುಂದುವರಿದವು. ವಿವಿಧ ವಲಯಗಳ ಷೇರುಗಳಲ್ಲಿ ವ್ಯಾಪಕ ಮಾರಾಟದ ಒತ್ತಡದಿಂದ ನಿಫ್ಟಿ ಇಂಟ್ರಾಡೇ ವಹಿವಾಟಿನಲ್ಲಿ 22,600ರ ಮಟ್ಟಕ್ಕಿಂತ ಕೆಳಗೆ ಕುಸಿಯಿತು. ಬಳಿಕ ದಿನದ ಕನಿಷ್ಠ ಮಟ್ಟವಾದ 22,554.85ರಿಂದ ಚೇತರಿಸಿಕೊಂಡು 22,650ಕ್ಕಿಂತ ಮೇಲಿನ ಮಟ್ಟದಲ್ಲಿ ಮುಕ್ತಾಯಗೊಂಡಿತು.
ಎಲ್ಲ ವಲಯಗಳ ಸೂಚ್ಯಂಕಗಳು ನಷ್ಟದೊಂದಿಗೆ ವಹಿವಾಟು ಮುಗಿಸಿದವು. ಆಟೊಮೊಬೈಲ್, ಗ್ರಾಹಕ ಬಳಕೆಯ ಬಾಳಿಕೆ ಬರುವ ಉತ್ಪನ್ನಗಳು, ತೈಲ ಮತ್ತು ಅನಿಲ, ಮಾಹಿತಿ ತಂತ್ರಜ್ಞಾನ, ಇಂಧನ ಹಾಗೂ ಎಫ್‌ಎಂಸಿಜಿ ವಲಯಗಳ ಸೂಚ್ಯಂಕಗಳು ಶೇ. 0.5ರಿಂದ ಶೇ. 1.7ರಷ್ಟು ಕುಸಿದವು. ಮಾಧ್ಯಮ ವಲಯದ ಸೂಚ್ಯಂಕ ಶೇ. 2.3ರಷ್ಟು ಇಳಿಕೆಯಾಗಿ ಅತಿ ಹೆಚ್ಚು ನಷ್ಟ ದಾಖಲಿಸಿತು.
ನಿಫ್ಟಿಯಲ್ಲಿ ನೆಸ್ಲೆ ಇಂಡಿಯಾ, ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್, ಎಚ್‌ಡಿಎಫ್‌ಸಿ ಲೈಫ್, ಟೆಕ್ ಮಹೀಂದ್ರಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಪ್ರಮುಖ ನಷ್ಟ ಅನುಭವಿಸಿದ ಷೇರುಗಳಾಗಿದ್ದವು. ಬಜಾಜ್ ಫೈನಾನ್ಸ್, ಸಿಪ್ಲಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಆಟೊ ಮತ್ತು ಐಸಿಐಸಿಐ ಬ್ಯಾಂಕ್ ಲಾಭ ಗಳಿಸಿದ ಷೇರುಗಳಲ್ಲಿ ಸೇರಿದ್ದವು.
ಭಾರತೀಯ ರೂಪಾಯಿ ಕೂಡ ತನ್ನ ಸತತ ಎಂಟು ದಿನಗಳ ಏರಿಕೆಯ ಓಟಕ್ಕೆ ವಿರಾಮ ನೀಡಿತು. ಗುರುವಾರ ಡಾಲರ್ ಎದುರು ರೂಪಾಯಿ ಮೌಲ್ಯ 36 ಪೈಸೆ ಕುಸಿದು 94.82ಕ್ಕೆ ತಲುಪಿತು. ಹಿಂದಿನ ವಹಿವಾಟಿನಲ್ಲಿ ಇದು 94.46ರ ಮಟ್ಟದಲ್ಲಿತ್ತು.
ವಹಿವಾಟಿನ ವೇಳೆ 480ಕ್ಕೂ ಹೆಚ್ಚು ಷೇರುಗಳು ತಮ್ಮ 52 ವಾರಗಳ ಕನಿಷ್ಠ ಮಟ್ಟವನ್ನು ತಲುಪಿದವು. ಕ್ರೆಡಿಟ್‌ಆಕ್ಸೆಸ್ ಗ್ರಾಮೀಣ್, ಎಂಅ್ಯಂಡ್‌ಎಂ ಫೈನಾನ್ಷಿಯಲ್, ಎಸ್‌ಆರ್‌ಎಫ್, ಸ್ವಿಗ್ಗಿ, ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್, ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್, ಬಾಂಬೆ ಬರ್ಮಾ, ವಿಶಾಲ್ ಮೆಗಾ ಮಾರ್ಟ್, ಯುಟಿಐ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ, ಕಾಮಾ ಹೋಲ್ಡಿಂಗ್ಸ್, ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಅವೆನ್ಯೂ ಸೂಪರ್‌ಮಾರ್ಟ್ಸ್, ಪವರ್ ಗ್ರಿಡ್ ಕಾರ್ಪೊರೇಷನ್, ಮ್ಯಾಕ್ಸ್ ಹೆಲ್ತ್‌ಕೇರ್, ನಾವಾ, ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್, ಫಿನೋಲೆಕ್ಸ್ ಇಂಡಸ್ಟ್ರೀಸ್, ಲುಪಿನ್, ಕೋಲ್ಗೇಟ್-ಪಾಮೋಲಿವ್ ಮತ್ತು ಫೋರ್ಟಿಸ್ ಹೆಲ್ತ್‌ಕೇರ್ ಸೇರಿದಂತೆ ಹಲವು ಕಂಪನಿಗಳ ಷೇರುಗಳು ಈ ಪಟ್ಟಿಯಲ್ಲಿದ್ದವು.
ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಮಾತನಾಡಿ, ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾದ ಪರಿಣಾಮ ಕಚ್ಚಾ ತೈಲದ ಬೆಲೆ ತೀವ್ರವಾಗಿ ಏರಿದ್ದು, ಹಣದುಬ್ಬರದ ಆತಂಕಗಳು ಗುರುವಾರದ ವಹಿವಾಟಿನಲ್ಲಿ ಪ್ರಮುಖವಾಗಿ ಕಂಡುಬಂದವು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಚೇತರಿಕೆ ಕಂಡಿದ್ದ ರೂಪಾಯಿ ಮತ್ತೆ ದುರ್ಬಲಗೊಂಡು, ಇಡೀ ವಹಿವಾಟಿನ ಅವಧಿಯಲ್ಲಿ ಕುಸಿತದ ಪ್ರವೃತ್ತಿ ಮುಂದುವರಿಸಿತು. ಇದು ಹೂಡಿಕೆದಾರರ ಭಾವನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಬ್ಯಾಂಕಿಂಗ್ ಷೇರುಗಳ ನೇತೃತ್ವದಲ್ಲಿ ಪ್ರಮುಖ ಸೂಚ್ಯಂಕಗಳು ಚೇತರಿಸಿಕೊಳ್ಳಲು ಪ್ರಯತ್ನಿಸಿದರೂ, ಆ ಏರಿಕೆ ಹೆಚ್ಚಿನ ಮಟ್ಟದಲ್ಲಿ ಮುಂದುವರಿಯಲಿಲ್ಲ ಎಂದು ಅವರು ತಿಳಿಸಿದರು.
ದೇಶೀಯ ಬಾಂಡ್‌ಗಳ ಇಳುವರಿ ಇತ್ತೀಚಿನ ಗರಿಷ್ಠ ಮಟ್ಟಗಳಿಗೆ ಮರಳಿರುವುದರಿಂದ ಷೇರುಗಳ ಮೌಲ್ಯಮಾಪನದ ಮೇಲಿನ ಪ್ರೀಮಿಯಂ ಕುರಿತು ಮತ್ತೆ ಪರಿಶೀಲನೆ ಆರಂಭವಾಗಿದೆ. ಇದರ ಪರಿಣಾಮ ಬಹುತೇಕ ಎಲ್ಲ ವಲಯಗಳಲ್ಲೂ ಮಾರಾಟದ ಒತ್ತಡ ಹೆಚ್ಚಾಯಿತು ಎಂದು ನಾಯರ್ ವಿವರಿಸಿದರು.
ಜಪಾನ್‌ನ ಹಣದುಬ್ಬರದ ಅಂಕಿಅಂಶಗಳ ಪ್ರಕಟಣೆಗೆ ಮುನ್ನ ಜಾಗತಿಕ ಮಾರುಕಟ್ಟೆಗಳಿಂದ ಬಂದ ನಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ, ಏರಿಳಿತದ ವಹಿವಾಟಿನ ಬಳಿಕ ಭಾರತೀಯ ಷೇರುಪೇಟೆಗಳು ನಷ್ಟದೊಂದಿಗೆ ಮುಕ್ತಾಯಗೊಂಡವು. ಮಧ್ಯಮ ಮತ್ತು ಸಣ್ಣ ಬಂಡವಾಳದ ಕಂಪನಿಗಳ ಷೇರುಗಳು ದೊಡ್ಡ ಕಂಪನಿಗಳ ಷೇರುಗಳಿಗಿಂತ ಹೆಚ್ಚು ಕುಸಿತ ಕಂಡವು ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಬಾಂಡ್‌ಗಳ ಇಳುವರಿ ಕುರಿತು ಹೂಡಿಕೆದಾರರು ಎಚ್ಚರಿಕೆಯ ನಿಲುವು ತಳೆಯುವ ಸಾಧ್ಯತೆಯಿದ್ದು, ವಿದೇಶಿ ಹೂಡಿಕೆದಾರರ ಹಣದ ಹರಿವು ಒತ್ತಡಕ್ಕೆ ಒಳಗಾಗಬಹುದು. ಮುಂದಿನ ವಾರ ಅಮೆರಿಕದ ಫೆಡರಲ್ ರಿಸರ್ವ್, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಜಪಾನ್‌ಗಳ ನೀತಿ ನಿರ್ಧಾರಗಳ ಮೇಲೆ ಮಾರುಕಟ್ಟೆಯ ಗಮನ ಕೇಂದ್ರೀಕೃತವಾಗಿರಲಿದೆ ಎಂದು ನಾಯರ್ ಅಭಿಪ್ರಾಯಪಟ್ಟರು.
ದೇಶೀಯವಾಗಿ, ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಕಂಪನಿಗಳ ಗಳಿಕೆಯ ಫಲಿತಾಂಶಗಳು ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಮುಂಬರುವ ತ್ರೈಮಾಸಿಕಗಳಲ್ಲಿ ಬೇಡಿಕೆಯ ಪರಿಸ್ಥಿತಿ ಹೇಗಿರಲಿದೆ ಎಂಬುದರ ಕುರಿತು ಕಂಪನಿಗಳ ಆಡಳಿತ ಮಂಡಳಿಗಳು ನೀಡುವ ಅಭಿಪ್ರಾಯಗಳನ್ನು ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸಲಿದ್ದಾರೆ ಎಂದು ಅವರು ತಿಳಿಸಿದರು.