ರಸಗೊಬ್ಬರ ವಿತರಣಾ ಪೂರ್ವಭಾವಿ ಸಭೆೆ
ಬೈಲಹೊಂಗಲ 25: ಮುಂಗಾರು ಹಂಗಾಮು ಆಷಾದಾಯಕವಾಗಿದ್ದು ಈಗಾಗಲೆ 17,000 ಕ್ವಿಂ.ಗಳಷ್ಟು ಸೋಯಾಬಿನ್ ಬೀಜಗಳ ದಾಸ್ತಾನು ಮಾಡಿಕೊಳ್ಳಲಾಗಿದ್ದು, ಸ್ಥಳಿಯವಾಗಿ ಮಣ್ಣಿನ ತೇವಾಂಶ ಹಾಗೂ ಹವಾಮಾನವನ್ನು ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಂಡು ಬೀಜ ವಿತರಣೆಯನ್ನು ಪ್ರಾರಂಭಿಸಬೇಕೆಂದು ಬೆಳಗಾವಿ ಕೃಷಿ ಇಲಾಖೆ ಜಂಟಿ ನಿರ್ದೆಶಕ ಶಿವನಗೌಡ.ಎಸ್.ಪಾಟೀಲ ತಿಳಿಸಿದರು.
ಸೋಮವಾರ ಕೃಷಿ ಇಲಾಖೆಯಿಂದ ತಾ.ಪಂ ಸಭಾಗೃಹದಲ್ಲಿ ತಾಲೂಕಿನ ಎಲ್ಲ ಸರಕಾರದ ಸಹಾಯ ಧನದಲ್ಲಿ ಬೀಜ ವಿತರಿಸುವ 29 ಪಿ.ಕೆ.ಪಿ.ಎಸ್.ಕೇಂದ್ರಗಳ ಕಾರ್ಯದರ್ಶಿ ಹಾಗೂ ಪ್ರಮುಖ ಕೃಷಿ ಪರಿಕರ ಮಾರಾಟಗಾರರ ಮುಂಗಾರು ಹಂಗಾಮಿನ ಬೀಜ, ರಸಗೊಬ್ಬರ ವಿತರಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬೀಜ ವಿತರಣಾ ಕೇಂದ್ರಗಳಲ್ಲಿ ಕೋವಿಡ-19 ಮಹಾಮಾರಿ ರೋಗವು ಹರಡದಂತೆ ಮಾಸ್ಕ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಸ್ಯಾನಿಟೈಜರ್ಗಳನ್ನು ಬಳಸಿ ಹೆಚ್ಚಿನ ಜನಸಂದಣಿ ಉಂಟಾಗುವ ವಿತರಣಾ ಕೇಂದ್ರಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ರೈತರಿಗೆ ಚೀಟಿಗಳನ್ನು ನೀಡಿ ಬೀಜವನ್ನು ವಿತರಿಸಬೇಕು. ಡಿ.ಎ.ಪಿ.ಗೊಬ್ಬರ ಹೆಚ್ಚಿನ ಬೇಡಿಕೆ ಇರುವಂತಹ ಕೇಂದ್ರಗಳಲ್ಲಿ ಗೊಬ್ಬರದ ಜೊತೆಗೆ ಡಿ.ಎ.ಪಿ. ಗೊಬ್ಬರದಲ್ಲಿರುವಂತಹ ಪೋಶಕಾಂಶಗಳನ್ನು ಒಳಗೊಂಡಂಹತ ಎನ್.ಪಿ.ಕೆ.ಕಾಪ್ಲೆಕ್ಸ್ ಗೊಬ್ಬರಗಳಾದ 10:26:26, 12:32:16, ರೈತರಿಗೆ ನೀಡಲು ಸೂಚಿಸಿದರು.
ಕೃಷಿ ಇಲಾಖೆ ಉಪ ನಿರ್ದೆಶಕ ಹೆಚ್.ಡಿ.ಕೊಳೆಕರ ಮಾತನಾಡಿ, ರೈತರು ಬಿತ್ತನೆ ಬೀಜಗಳನ್ನು ಖರೀದಿಸಲು ಕಂದಾಯ ಇಲಾಖೆಯಿಂದ ನೀಡಿರುವ ಖಾತಾ ಉತಾರ, ಬೀಜ ಕೋಪನ್, ಆಧಾರ ಕಾರ್ಡ ಝರಾಕ್ಸ್, ಬ್ಯಾಂಕ ಪುಸ್ತಕ, ಪರಿಶಿಷ್ಠ ಜಾತಿ, ಪಂಗಡದ ರೈತರು ಆರ್.ಡಿ.ನಂಬರ ಹೊಂದಿರುವಂತಹ ಜಾತಿ ಪ್ರಮಾಣ ಪತ್ರವನ್ನು ತಂದು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಬೀಜ ಪಡೆದುಕೊಳ್ಳಲು ತಿಳಿಸಿದರು.
ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಸಿ.ಆರ್.ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಕಿತ್ತೂರ ಸಹಾಯಕ ಕೃಷಿ ನಿರ್ದೇಶಕ ಎಂ.ಎನ್.ಕಿತ್ತೂರ, ಭಾರತಿ ಮೆಣಶಿನಕಾಯಿ, ಎಂ.ಎಸ್.ಬಿಸಗುಪ್ಪಿ, ಆರ್.ಐ.ಕುಂಬಾರ, ದೀಪಕ ಕೌಜಲಗಿ, ಮಂಜುನಾಥ ಕೆಂಚರಾಹುತ, ಬಸಯ್ಯ ಚಿಕ್ಕಮಠ, ತಾಲೂಕಿನ ಸಹಾಯಕ ಕೃಷಿ ಅಧಿಕಾರಿಗಳು, ಕೃಷಿ ಪರಿಕರ ಮಾರಾಟಗಾರರು ಮತ್ತು ಪಿ.ಕೆ.ಪಿ.ಎಸ್.ಸಂಸ್ಥೆಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.