ರಾಯಬಾಗ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಡಾ. ಪಿ.ಬಿ. ಗವಾನಿ ಆಯ್ಕೆ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಡಾ. ಪಿ.ಬಿ. ಗವಾನಿ ಆಯ್ಕೆ



            ರಾಯಬಾಗ 16 : ಪಟ್ಟಣದ ಚಿತ್ರ ಕಲಾವಿದ, ವಿವೇಕಾನಂದ ಲಲಿತ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಬಿ.ಗವಾನಿ ಅವರು 2026ನೇ ಸಾಲಿನ ರಾಷ್ಟ್ರೀಯ ದೃಶ್ಯ ಕಲಾ ಅಕಾಡೆಮಿ, ಧಾರವಾಡ ಇವರು ಕೊಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ದೃಶ್ಯ ಕಲಾ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ದೃಶ್ಯ ಅಕಾಡೆಮಿ ಧಾರವಾಡ ಇವರ ಸಹಯೋಗದಲ್ಲಿ ನ.20 ಮತ್ತು 21 ರಂದು ದಾವಣಗೆರೆಯಲ್ಲಿ ನಡೆಯಲಿರುವ ಪ್ರೊ. ಎಸ್‌.ಸಿ ಪಾಟೀಲ್ ರವರ ಗ್ರಂಥಗಳ ಅವಲೋಕನ ರಾಜ್ಯಮಟ್ಟದ ವಿಚಾರ ಸಂಕೀರ್ಣ ಮತ್ತು ರಾಷ್ಟ್ರೀಯ ದೃಶ್ಯ ಕಲಾ ಅಕಾಡೆಮಿಯ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಡಾ. ಬಸವರಾಜ ಗವಿಮಠ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.

            ಡಾ.ಪಿ ಬಿ. ಗವಾನಿ ಅವರು 1967 ರಲ್ಲಿ ಜನಿಸಿ ಬೆಂಗಳೂರಿನ ಕೆನ್ ಕಲಾ ಶಾಲೆಯಿಂದ ಆರ್ಟ ಮಾಸ್ಟರ್ ಡಿಪ್ಲೋಮಾದಲ್ಲಿ ರಾಜ್ಯಕ್ಕೆ ರಾಂಕ್ ಗಳಿಸುವ ಮೂಲಕ ಪಾಸಾಗಿದ್ದಾರೆ. 2013ರಲ್ಲಿ ಕರ್ನಾಟಕದ ವಸ್ತು ಸಂಗ್ರಹಾಲಯಗಳಲ್ಲಿ ಚಿತ್ರಕಲೆ ಕುರಿತ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಇಲ್ಲಿಯವರೆಗೆ ತಾಲೂಕ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾಮಟ್ಟದ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿ, ಗುರು ತಿಲಕ ಪ್ರಶಸ್ತಿ,ತೇಜರತ್ನ ಪ್ರಶಸ್ತಿ, ಸೇವಾರತ್ನ ಪ್ರಶಸ್ತಿ,ಸ್ವಾಮಿ ವಿವೇಕಾನಂದ ಪ್ರಶಸ್ತಿ, ಕಾಯಕ ಪ್ರಶಸ್ತಿ ಅಲ್ಲವೇ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಬೆಂಗಳೂರು ಇವರ ಫೆಲೋಶಿಫ್ ಪಡೆದಿದ್ದಾರೆ.

              ಹಾಗೂ ಇವರು ಬರೆದ ದೃಶ್ಯಕಲಾ ಚಿಂತನ ಪುಸ್ತಕಕ್ಕೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ಇವರು ಪುಸ್ತಕ ಬಹುಮಾನ ನೀಡಿ ಗೌರವಿಸಿದ್ದಾರೆ. ಡಾ. ಪಿ.ಬಿ. ಗವಾನಿ ಯವರು ಇಲ್ಲಿಯವರೆಗೆ 17 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, 42ಕ್ಕೂ ಹೆಚ್ಚು ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಪಶ್ಚಿಮ ಬಂಗಾಳ ನ್ಯೂಜಲಪಾಯಿ ಗುರಿ ತಮಿಳುನಾಡಿನ ನಾಗರಕೋಯಿಲ್, ಕೇರಳ ಹಾಗೂ ಕನ್ನಡ ವಿಶ್ವವಿದ್ಯಾಲಯ ಹಂಪಿ, ಮುಂತಾದ ಕಡೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಉಪನ್ಯಾಸ ಹಾಗೂ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ. 2013ರಲ್ಲಿ ಶ್ರೀಲಂಕಾದ ಕೋಲಂಬೋ ದಲ್ಲಿ ಜರುಗಿದ ಅಂತರಾಷ್ಟ್ರೀಯ ಮಟ್ಟದ ಕಲಾ ಪ್ರದರ್ಶನದಲ್ಲಿಯೂ ಭಾಗವಹಿಸಿದ್ದಾರೆ.

                 ಅಲ್ಲದೇ ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ಇವರು ಏರಿ​‍್ಡಸುವ ಕಲಾ ಶಿಬಿರಗಳಲ್ಲಿ ಭಾಗವಹಿಸಿ ಕಲಾಕೃತಿಗಳನ್ನು ರಚಿಸಿದ್ದಾರೆ. ಇವರ ಅನೇಕ ಲೇಖನಗಳು ನಾಡಿನ ಪ್ರತಿಷ್ಠಿತ ದಿನಪತ್ರಿಕೆಗಳು, ಸಂಚಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಮೂರು ಪುಸ್ತಕಗಳು ಪ್ರಕಟಗೊಂಡಿವೆ. ಅಪ್ಪಾಸಾಹೇಬ್ ಕಾಡಾಪೂರಕ ರವರ ಜೀವನ ಚರಿತ್ರೆ ಪುಸ್ತಕ, ದೃಶ್ಯಕಲಾ ಚಿಂತನೆ ಪುಸ್ತಕ ಹಾಗೂ ಕರ್ನಾಟಕದ ವಸ್ತು ಸಂಗ್ರಹಾಲಯಗಳಲ್ಲಿನ ಚಿತ್ರಕಲೆ ಪುಸ್ತಕವನ್ನು ಕರ್ನಾಟಕ ಸರ್ಕಾರದ ಪ್ರಾಚ್ಯ ವಸ್ತು ಸಂಗ್ರಹಾಲಯ ಮೈಸೂರು ಇವರು ಪ್ರಕಟಿಸಿದ್ದಾರೆ. ಇವರು ವಿಶ್ವವಿದ್ಯಾಲಯಗಳ ಬಿ,ಒ,ಎಸ್‌. ಬಿ,ಓ,ಇ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ, ಹೀಗೆ ಡಾ. ಪಿ.ಬಿ ಗವಾನಿ ಅವರು ಕಳೆದ 32 ವರ್ಷಗಳಿಂದ ದೃಶ್ಯ ಕಲೆಯ ಸೃಜನಶೀಲ ಕಲಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 


ಸುದ್ದಿ ಓದಿ