ಅಥಣಿ

ಮತ್ತೊಬ್ಬರಿಗೆ ಬೆಳಕಾಗುವ ಕಣ್ಣುಗಳನ್ನು ದಾನ ಮಾಡಿ: ಶಾಸಕ ಲಕ್ಷ್ಮಣ ಸವದಿ

ಮತ್ತೊಬ್ಬರಿಗೆ ಬೆಳಕಾಗುವ ಕಣ್ಣುಗಳನ್ನು ದಾನ ಮಾಡಿ: ಶಾಸಕ ಲಕ್ಷ್ಮಣ ಸವದಿ

ಅಥಣಿ 29: ತಮ್ಮ ದೇಹಾಂತದ ನಂತರ ಮತ್ತೊಬ್ಬರಿಗೆ ಬೆಳಕಾಗುವ ತಮ್ಮ ತಮ್ಮ ಕಣ್ಣುಗಳನ್ನು ದಾನ ಮಾಡಿ ಈ ನಿಟ್ಟಿನಲ್ಲಿ ನಾನು 15 ವರ್ಷಗಳ ಹಿಂದೆಯೇ ನನ್ನ ಕಣ್ಣುಗಳನ್ನು ದಾನ ಮಾಡಿರುವೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.  

ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಅಥಣಿಯ ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಮತ್ತು ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಮತ್ತು ಹಿಂದುಪುರದ ಜನಹಿತ ಐಕೇರ ಸೆಂಟರ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.        ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ದಿನ ನಿತ್ಯ ನೇತ್ರ ಚಿಕಿತ್ಸೆಗಳು ನಡೆಯಬೇಕು ಇದಕ್ಕಾಗಿ ಆಸ್ಪತ್ತೆಗೆ ಬೇಕಾಗುವ ಸೌಲಭ್ಯಗಳಿಗಾಗಿ ಅವಶ್ಯವಾಗಿ ಬೇಕಾಗುವ ವೈದ್ಯಕೀಯ ಸಾಮಗ್ರಿಗಳ ಖರೀದಿಗೆ ಬೇಕಾಗುವ 16 ಲಕ್ಷ ರೂ.ಗಳನ್ನು ನಾನು ವ್ಯಯಕ್ತಿಕವಾಗಿ ಕೊಟ್ಟಿದ್ದು, ಇನ್ನು  ಸ್ಥಳೀಯರು ನಿತ್ಯವೂ ಶಸ್ತ್ರ ಚಿಕಿತ್ಸೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. 

ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಪ್ರತಿ 6 ತಿಂಗಳಿಗೊಮ್ಮೆ ಉಚಿತ ನೇತ್ರ ಚಿಕಿತ್ಸೆ ನಡೆಯುತ್ತಿದೆ ಈ ಶಿಬಿರದಲ್ಲಿ ಸಾವಿರಾರು ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಆದರೆ ಇತ್ತೀಚಿಗೆ ಸಕ್ಕರೆ ರೋಗದ ಪರಿಣಾಮ ಕಣ್ಣಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಇಂತಹ ರೋಗಿಗಳಿಗೆ 6 ತಿಂಗಳು ಕಾಯಲು ಸಾಧ್ಯವಿಲ್ಲ ಹೀಗಾಗಿ ಅಂತಹ ರೋಗಿಗಳ ಅನಕೂಲಕ್ಕಾಗಿ ದಿನ ನಿತ್ಯ ಶಸ್ತ್ರ ಚಿಕಿತ್ಸೆ ನಡೆಯಬೇಕು ಎನ್ನುವುದು ನನ್ನ ಆಶಯ ಎಂದರು. 

ರಾಜ್ಯದ ಟಾಪ್ ಟೆನ್ ಆಸ್ಪತ್ರೆಗಳಲ್ಲಿ ಅಥಣಿಯ ಸರಕಾರಿ ಆಸ್ಪತ್ರೆ ಇರುವುದು ನಮಗೆಲ್ಲ ಅಭಿನಂದನಾರ್ಹ ಸಂಗತಿಯಾಗಿದ್ದು, ಇದಕ್ಕೆ ಡಾ.ಬಸಗೌಡ ಕಾಗೆ ನೇತೃತ್ವದ ವೈದ್ಯರ ತಂಡ, ದಾದಿಯರು ಮತ್ತು ಇಲ್ಲಿಯ ಸಿಬ್ಬಂದಿಗಳೇ ಕಾರಣ ಎಂದು ಹೇಳಿದ ಅವರು ಹಿಂದೊಂದು ದಿನ ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿತ್ತು ಹೀಗಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು ಆದರೆ ಇಂದು ಸ್ಥಳೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳ ಪ್ರಾಮಾಣಿಕ ಕಾರ್ಯದ ಪರಿಣಾಮ ದಿನ ನಿತ್ಯ ಸಾವಿರಾರು ಬಡ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಹೀಗಾಗಿಯೇ ಇಡೀ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ        ಅಥಣಿಗೆ ತಾಯಿ ಮಕ್ಕಳ ಆಸ್ಪತ್ರೆ ಅವಶ್ಯಕತೆ ಇತ್ತು ಹೀಗಾಗಿ ಹಳೆ ತಹಶೀಲ್ದಾರ ಕಛೇರಿ ಇರುವ ಸ್ಥಳವನ್ನು ಕಂದಾಯ ಇಲಾಖೆಯಿಂದ ಆರೋಗ್ಯ ಇಲಾಖೆಯ ಹೆಸರಿಗೆ ವರ್ಗವಾಗಿದೆ ಇನ್ನೂ ಕೆಲವೇ ದಿನಗಳಲ್ಲಿಯೇ  50 ಬೆಡ್ ಗಳ ಆಸ್ಪತ್ರೆ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದ ಅವರು 100 ಹಾಸಿಗೆ ಇರುವ ಅಥಣಿ ಸರಕಾರಿ ಆಸ್ಪತ್ರೆಯನ್ನು 200 ಹಾಸಿಗೆಗೆ ಗೆಚ್ಚಿಸುವ ಕಾರ್ಯ ಕೂಡ ಪ್ರಗತಿಯಲ್ಲಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿ.ಎಚ್‌.ಒ ಡಾ.ಶರಣಪ್ಪ ಗಡಾದ ಮಾತನಾಡಿದರು. ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಶ ಸಂಪಗಾಂವಿ, ತಹಶೀಲ್ದಾರ ವಾಣಿ. ಯು, ಕಾಗವಾಡ ತಹಶೀಲ್ದಾರ ರಾಜೇಶ್ ಬುರ್ಲಿ, ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಪುರಸಭಾ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಜನಹಿತ ಐಕೇರ್ ಸೆಂಟರ್ ನ ಡಾ.ಕೃಷ್ಣಮೋಹನ ಜಿಂಕಾ ಆಗಮಿಸಿದ್ದರು. 

ಧುರೀಣರಾದ ದೀಲೀಪ ಲೋಣಾರೆ, ದತ್ತಾ ವಾಸ್ಟರ್, ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ಸಂತೋಷ ಸಾವಡಕರ, ವಿನಾಯಕ ಬಾಗಡಿ, ರಾಮನಗೌಡ ಪಾಟೀಲ, ಅಪ್ಪು ನೇಮಗೌಡ, ಸೈಯ್ಯದಮೀನ್ ಗದ್ಯಾಳ, ಬಸವರಾಜ ಹಳ್ಳದಮಳ, ರಮೇಶ ಗಾಡಿವಡ್ಡರ, ತಿಪ್ಪಣ್ಣ ಭಜಂತ್ರಿ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು. 

ತಾಲೂಕಾ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಸ್ವಾಗತಿಸಿದರು, ವಿಷ್ಣುಕುಮಾರ ಮಾಳಿ ನಿರೂಪಿಸಿದರು. 


ಸುದ್ದಿ ಓದಿ