ವಿದ್ಯೆ ಸಿಗಬೇಕಾದರೆ ಶ್ರದ್ಧಾ ಮನೋಭಾವ ಮುಖ್ಯ: ಬೆಟಗೇರಿ
ಲೋಕದರ್ಶನ ವರದಿ
ಗೋಕಾಕ 20: ವಿದ್ಯೆಗೆ ವಿನಯವೇ ಭೂಷಣವಾಗಿದೆ. ವಿದ್ಯೆ ಸಿಗಬೇಕಾದರೆ ಶ್ರದ್ಧಾಮನೋಭಾವ ಬಹುಮುಖ್ಯವಾದುದು ಎಂದು ಹಿರಿಯ ರಂಗಕರ್ಮಿ ಈಶ್ವರಚಂದ್ರ ಬೆಟಗೇರಿ ಹೇಳಿದರು.
ಅವರು ನಗರದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕವಯಿತ್ರಿ ವಿದ್ಯಾ ರೆಡ್ಡಿ ಗ್ರಾಮೀಣ ಭಾಗದ ಯುವಕರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಪರಿಶ್ರಮದಾಯಕವಾದ ಯಶಸ್ಸು ಗಳಿಸಲು ವಿದ್ಯಾರ್ಥಿ ಬದುಕು ಸಹಕಾರಿಯಾಗಿದೆ ಎಂದು ಹೇಳಿದರು.
ಕಳೆದ ಸಾಲಿನ ವಿವಿಧ ತರಗತಿಗಳ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಾದ ವರುಣ ಬೆಲ್ಲದ ಮಂಜುನಾಥ ಸಂಪಗಾವ ಸುಷ್ಮೀತಾ ಛಾಯಪ್ಪಗೋಳ ರೋಹಿತ ಗಸ್ತಿ ಸಯ್ಯದ ಗಲಗಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಾಚಾರ‌್ಯ ಜಯಾನಂದ ಮಾದರ ಸಭೆಯ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳ ಸಾರ್ಥಕ ಬದುಕಿನಿಂದ ತಂದೆ ಮತ್ತು ಗುರುವಿಗೆ ನೆಮ್ಮದಿ ದೊರೆಯುತ್ತದೆ. ಶಿಕ್ಷಣಕ್ಕೆ ಬದುಕನ್ನು ಬದಲಿಸುವ ಶಕ್ತಿಯಿದೆ.ಎಂದರು.
ಅಧ್ಯಾಪಕ ಮಲ್ಲಮ್ಮ ದಳವಾಯಿ ಹಾಗೂ ವಿಜಯಕುಮಾರ ನಾಯಿಕ ಅಭಿನಂದನ ನುಡಿ ಆಡಿದರು. ಸುಗಂಧಾ ಹೊನಕುಪ್ಪಿ ಪ್ರಾರ್ಥಿಸಿದರು, ಲಕ್ಕಪ್ಪಾ ಯಡ್ರಾಂವಿ ಸ್ವಾಗತಿಸಿದರು, ದೀಪಾ ಶಿಂತ್ರಿ ನಿರೂಪಿಸಿ ವಂದಿಸಿದರು.