ಧಾರವಾಡ - ಹುಬ್ಬಳ್ಳಿ

“ಸನಾತನ ಧರ್ಮ''ದ ತಿರುಳು - ಡಾ. ಶ್ರೀರಾಮ ಭಟ್ಟ

“ಸನಾತನ ಧರ್ಮ''ದ ತಿರುಳು - ಡಾ. ಶ್ರೀರಾಮ ಭಟ್ಟ

“ಸನಾತನ ಧರ್ಮ''ದ ತಿರುಳು - ಡಾ. ಶ್ರೀರಾಮ ಭಟ್ಟ 

ಧಾರವಾಡ 20: ಸನಾತನ ಪದವು ​‍್ರಾಪ್ರಚೀನ ಮತ್ತು ಸಕಲಕ್ಕೂ ಆಧಾರವಾದ ಕಾರಣ ಚೈತನ್ಯವನ್ನು ಸೂಚಿಸುವದು. ಶಾಶ್ವತ ಸತ್ಯದ ವಿಸ್ತಾರವೇ ಈ ಸೃಷ್ಟಿ. ವ್ಯಷ್ಟಿ ಮತ್ತು ಸಮಷ್ಟಿ ರೂಪದ ಈ ಜಗವನ್ನು ಧಾರಣ ಮಾಡುವದೇ ಧರ್ಮ. ಮಹಾಭಾರತ ಪ್ರತಿಭೆಯ ವೇದವ್ಯಾಸಮುನಿ ಈ ಸೃಷ್ಟಿಯ ಸಮಸ್ತ ಅವಯವಗಳ ಬದುಕನ್ನು ಎತ್ತಿ ಹಿಡಿದು ಸಲಹಗೊಡುವದು ಧರ್ಮ; ಅದಲ್ಲದಿದ್ದರೆ ಅಧರ್ಮ ಎಂದು “ಸನಾತನ ಧರ್ಮ''ವನ್ನು ನಿರ್ವಚಿಸಿ ನಿರೂಪಿಸಿದ. ಈ ನೆಲದಲ್ಲಿ ಮುಂದೆ ಕಾಣಿಸಿಕೊಂಡ ಜೈನ, ಬೌದ್ಧ ಮುಂತಾದ ಅವೈದಿಕ ಧರ್ಮಗಳಲ್ಲೂ, ದೇಸೀ ಧರ್ಮಪಂಥಗಳಲ್ಲೂ “ಸನಾತನ ಧರ್ಮ'' ಪದದ ಬಳಕೆ ಅರ್ಥಪೂರ್ಣವಾಗಿ ಕಾಣಿಸಿಕೊಂಡಿದೆ. ವೈವಿಧ್ಯಪೂರ್ಣ ಚರ್ಚೆ, ನಂಬಿಕೆ, ಆರಾಧನಾ ಪದ್ಧತಿಗಳಲ್ಲಿ ಸರ್ವರ ಹಿತವನ್ನು ಕಾಣುವದು, ಸಾಧಿಸುವದು ಧರ್ಮದ ಲಕ್ಷಣ ಎಂದು ಹಿರಿಯ ಚಿಂತಕ ಡಾ. ಶ್ರೀರಾಮ ಭಟ್ಟರು ವಿಸ್ತಾರವಾದ ಉದಾಹರಣೆಗಳ ಮೂಲಕ ಮೂಲ ವಿಷಯವನ್ನು ಪರಿಚಯಿಸಿ ಪ್ರತಿಪಾದಿಸಿದರು. 

ಧಾರವಾಡದ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟವು ದಿನಾಂಕ 20-01-2025ರಂದು ಸಾಧನಕೇರಿಯ ‘ಚೈತ್ರ'ದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಸನಾತನ ಧರ್ಮ'' ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತಿದ್ದರು.  

ಕನ್ನಡದ ಶ್ರೇಷ್ಠ ಕತೆಗಾರರೂ, ಹಿರಿಯ ಲೇಖಕರೂ ಆದ ಪ್ರೊ. ರಾಘವೇಂದ್ರ ಪಾಟೀಲರು ಅಧ್ಯಕ್ಷತೆ ವಹಿಸಿ ಮಾತನಾಡಿ ಸುದೀರ್ಘ ಕಾಲದಲ್ಲಿ ಭಾರತೀಯ ಧರ್ಮಕಲ್ಪನೆಯು ಇತರ ಧರ್ಮಗಳಂತೆ ಏಕಮುಖಿ ಅಥವಾ ಏಕವ್ಯಕ್ತಿ ಪ್ರತಿಪಾದಿತವಾದದ್ದಲ್ಲ. ವಿಭಿನ್ನ ಚಿಂತನೆ, ಚರ್ಚೆ, ವಾದ, ಸಂವಾದಗಳ ಮೂಲಕ ನಮ್ಮಲ್ಲಿ ಧರ್ಮವು ವಿಶಾಲನೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಇಂದಿಗೂ ಧರ್ಮದ ಕುರಿತಾಗಿ ಮುಕ್ತವಾಗಿ ಅಭಿವ್ಯಕ್ತಿಸುವ, ಆಚರಿಸುವ ಸ್ವಾತಂತ್ರ್ಯವು ನಮ್ಮ ಇಂದಿನ ಸಮಕಾಲದಲ್ಲೂ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. 

ಅನ್ವೇಷಣಕೂಟದ ಚಾಲಕಶಕ್ತಿಯಾದ ನರಸಿಂಹ ಪರಾಂಜಪೆಯವರ 82ನೇ ಜನ್ಮದಿನದ ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು. ಅವರ ಮಕ್ಕಳು ಪರಾಂಜಪೆ ದಂಪತಿಗಳ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಪ್ರತಿಭಾ ಪುರಸ್ಕಾರ ಪತ್ರ ಹಾಗೂ ಶಿಷ್ಯವೇತನದ ಮೊತ್ತವನ್ನು ಕೆ.ಇ.ಬೋರ್ಡ್‌ ಕೆಲಗೇರಿ ಶಾಖೆಯ ಹೈಸ್ಕೂಲು ವಿದ್ಯಾರ್ಥಿ ಕುಮಾರ ಚಿನ್ಮಯ ಸೂರದ ಅವರಿಗೆ ನೀಡಿ ಗೌರವಿಸಲಾಯಿತು. 

ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಡಾ. ಹ.ವೆಂ. ಕಾಖಂಡಕಿ, ಪ್ರೊ. ದುಷ್ಯಂತ ನಾಡಗೌಡ, ಪ್ರೊ. ಶಶಿಧರ ತೋಡಕರ, ಪ್ರೊ. ಸಿ.ಆರ್‌. ಜೋಶಿ, ಪರಮೇಶ್ವರ ಎಮ್‌.ಎಸ್‌., ಎಮ್‌.ಆರ್‌. ಬಾಳಿಕಾಯಿ, ಮಹಾಬಲೇಶ್ವರ ಸಿಂದಗಿ, ಅರವಿಂದ ಕುಲಕರ್ಣಿ, ಶ್ರೀಪಾದ ನಾಡಿಗೇರ, ಬದರೀ ವಿಶಾಲ ಪರ‌್ವತೀಕರ, ಎಸ್‌.ಬಿ. ದ್ವಾರಪಾಲಕ, ಅನಂತ ಸಿದ್ಧೇಶ್ವರ, ಎಸ್‌.ಬಿ. ಹನುಮೇಶ, ಶ್ರೀನಿವಾಸ ವಾಡಪ್ಪಿ, ಎಂ.ಬಿ. ಸದಾನಂದ, ಆರ್‌.ಎಂ. ಹೊಸಮನಿ, ರಮೇಶ ನಾಡಗೀರ, ಶ್ರೀಕಾಂತ ಮುಮ್ಮಿಗಟ್ಟಿ, ಎಮ್‌.ಎ. ಕಾಮಟೆ, ಆರ್‌.ಎಮ್‌. ದೊಡ್ಡಮನಿ, ಡಾ. ಶಾಲಿನಿ ರಘುನಾಥ, ಡಾ. ಮಂದಾಕಿನಿ ಪುರೋಹಿತ, ಜಯಶ್ರೀ ಜೋಶಿ, ಸೀಮಾ ಪರಾಂಜಪೆ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ