ಜಮಖಂಡಿ

ರೈತರಿಂದ ವಂತಿಗೆ ಸಂಗ್ರಹಿಸಿ ಬ್ಯಾರಲ್ ಸೇತುವೆ ನಿರ್ಮಾಣ

ರೈತರಿಂದ ವಂತಿಗೆ ಸಂಗ್ರಹಿಸಿ ಬ್ಯಾರಲ್ ಸೇತುವೆ ನಿರ್ಮಾಣ

ಜಮಖಂಡಿ 30: ಕೃಷ್ಣಾ ನದಿ ದಾಟಿ ಬರಲು ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ರೈತರು ಸರ್ಕಾರಕ್ಕೆ ಪರಿಪರಿಯಾಗಿ ಬೇಡಿಕೊಂಡರು ಸ್ಪಂದಿಸದಕ್ಕೆ ರೈತರೆಲ್ಲರು ಸೇರಿಕೊಂಡು ವಂತಿಗೆ ಸಂಗ್ರಹಿಸಿ ಬ್ಯಾರಲ್ ಸೇತುವೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. 

ತಾಲ್ಲೂಕಿನ ಕಂಕಣವಾಡಿ ಗ್ರಾಮದ ರೈತರ ಮನೆಗಳು ಆಲಮಟ್ಟಿ 519ರಲ್ಲಿ ಮುಳುಗಡೆಯಾಗಿದ್ದು, ಜಮೀನು ಮಾತ್ರ ಕಂಕಣವಾಡಿ ನಡುಗಡ್ಡೆಯಲ್ಲಿದೆ, ಗ್ರಾಮದಿಂದ ಬೇರೆ ಕಡೆಗೆ ಹೋಗಬೇಕಾದರೆ ಮೊದಲು ಈಜುವ ಮೂಲಕ ನದಿಯನ್ನು ದಾಟುತ್ತಿದ್ದರು. ಇತ್ತೀಚೆಗೆ ಬೋಟ್ ಮೂಲಕ ದಾಟುತ್ತಿದ್ದಾರೆ. ಶಾಶ್ವತವಾಗಿ ಗ್ರಾಮಕ್ಕೆ ಸೇತುವೆ ನಿರ್ಮಿಸಿ ಎಂದು ಸರಕಾರದ ಗಮನ ಸೆಳೆದರು ಪ್ರಯೋಜನವಾಗದ ಹಿನ್ನಲೆ. ಇವಾಗ ಗ್ರಾಮಸ್ಥರು ಸೇರಿಕೊಂಡು ಬ್ಯಾರಲ್ ಸೇತುವೆ ನಿರ್ಮಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಯಾವುದೇ ಇಂಜೀನೀಯರಗಳ ಸಹಾಯವಿಲ್ಲದೆ ತಮ್ಮದೆ ಶ್ರಮದಾನದ ಮೂಲಕ ಕೆಲಸ ಮಾಡುತ್ತಿರುವದು ವಿಶೇಷವಾಗಿದೆ. 

ಕೃಷ್ಣಾ ನದಿಗೆ ಅಡ್ಡಲಾಗಿ ಎರಡು ಕಡೆಗಳಲ್ಲಿ 20 ಅಡಿ ಮಣ್ಣಿನ ಬದು ನಿರ್ಮಿಸಿದ್ದಾರೆ, ಅಲ್ಲಿಂದ 600 ಅಡಿ ಉದ್ದ ಹಾಗೂ 8 ಅಡಿ ಅಗಲವಾದ ಬ್ಯಾರಲ್ ಸೇತುವೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. 20 ಅಡಿಯಂತೆ ಒಟ್ಟು 30 ಕಬ್ಬಿನದ ಆಂಗಲಗಳನ್ನು ಹಾಗೂ ನಟ್ ಬೋಲ್ಟ್‌ ಮೂಲಕ ಜೋಡನೆ ಮಾಡಿದ್ದಾರೆ, ಕೆಳಗೆ ಎರಡು ಸಾಲು, ಪಕ್ಕಕ್ಕೆ ಅಲ್ಲಾಡದಂತೆ ಎರಡು ಸಾಲಿನಂತೆ ಒಟ್ಟು 300 ಬ್ಯಾರಲ್‌ಗಳನ್ನು ಜೋಡನೆ ಮಾಡುತ್ತಿದ್ದು, ಅದರ ಮೇಲೆ ಹಾದು ಹೋಗಲು ಎರಡು ಬದಿಗೆ ಕಟ್ಟಿಗೆಯ ಪಳಿಗಳನ್ನು ಹಾಕಿ ನಡುವೆ ಕಬ್ಬಿನದ ಪಟ್ಟಿ ಹಾಕಿದ್ದಾರೆ. ಎರಡು ಬದಿಗಳಿಗೆ ಕಟಾಂಜಲಿಯನ್ನು ನಿರ್ಮಿಸಿ ಒಟ್ಟು 13 ಟನ್ ಕಬ್ಬಿನದಲ್ಲಿ ಸೇತುವೆ ನಿರ್ಮಾಣಗೊಳುತ್ತಿದೆ. ಗಾಳಿಗೆ ಹಾಗೂ ನೀರಿನ ರಭಸಕ್ಕೆ ಹರಿದು ಹೋಗದಂತೆ ದಪ್ಪವಾದ ಹಗ್ಗವನ್ನು ಹಾಕಿ ಎರಡು ಬದಿಗೆ ಕಟ್ಟಿರುತ್ತಾರೆ. ಅಲ್ಲಾಡದಂತೆ ದಪ್ಪ ಕಲ್ಲುಗಳನ್ನು ನದಿಯಲ್ಲಿ ಬಿಡಲು ತಯಾರಿ ಮಾಡಿಕೊಂಡಿದ್ದಾರೆ. 

ನದಿಯಲ್ಲಿ ಒಳಹರಿವು ಹೆಚ್ಚಳವಾದರೆ ಬ್ಯಾರಲ್ ಸೇತುವೆಯನ್ನು ಬಿಚ್ಚಿ ಇಡುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ, ಎಂಟು ತಿಂಗಳು ಯಾವುದೇ ಸಮಸ್ಯೆ ಇಲ್ಲದಂತೆ ನಡೆದುಕೊಂಡು ಇಲ್ಲ ಬೈಕ್ ಮೇಲೆ 3-4 ಕ್ವಿಂಟಲ್‌ವರೆಗೆ ಭಾರವನ್ನು ತೆಗೆದುಕೊಂಡು 600 ಅಡಿ ನದಿಯನ್ನು ಐದು ನಿಮಿಷದಲ್ಲಿ ದಾಟಬಹುದಾಗಿದೆ. ಸೇತುವೆ ನಿರ್ಮಾಣ ಮಾಡಲು ಪ್ರತಿ ಎಕರೆಗೆ ಒಂದು ಸಾವಿರ ಹಣವನ್ನು ಸಂಗ್ರಹಿಸಿದ್ದು ಹೆಚ್ಚು ಜಮೀನು ಇರುವ ರೈತರು ಸ್ವಲ್ಪ ಹೆಚ್ಚಿಗೆ ಹಣ ನೀಡಿದ್ದಾರೆ, ಈ ಯೋಜನೆಗೆ ಒಟ್ಟು 25 ಲಕ್ಷ ರೂ,ಅಂದಾಜು ವೆಚ್ಚವಾಗುತ್ತದೆ ಎನ್ನುತ್ತಾರೆ ರೈತರು.  

ನಡುಗಡ್ಡೆಯಲ್ಲಿ 600 ಎಕರೆ ಫಲವತ್ತಾದ ಜಮೀನು ಇದೆ, ಅಲ್ಲಿ ಕಬ್ಬು, ಬಾಳೆ, ಗೋವಿನ ಜೋಳವನ್ನು ಬೆಳೆಯುತ್ತವೆ, ಕಾಳು ಕಡಿಗಳನ್ನು ತರಲು ಬೋಟ್ ಒಂದೇ ಆಸರೆ, ಬೋಟ್ ಸರಿಯಾದ ಸಮಯಕ್ಕೆ ಸಿಗದಿದ್ದರೆ ನದಿ ದಾಟಲು ತುಂಬಾ ಕಷ್ಟದ ಕೆಲಸವಾಗಿತ್ತು. ನಾಲ್ಕು ಜನರಿಗೆ ಹಾವು ಕಡೆದಾಗ ನದಿ ದಾಟಲು ಸಾಧ್ಯವಾಗದೆ ಸಾವನಪ್ಪಿದ್ದಾರೆ, ಯಾರಾದರು ಸಾವನಪ್ಪಿದರೆ ರಾತ್ರಿ ಬೋಟ್ ಮೂಲಕ ಅಂತ್ಯಸಂಸ್ಕಾರಕ್ಕೆ ಬರುವ ಪರಿಸ್ಥಿತಿ ಇದೆ ಎನ್ನುತ್ತಾರೆ ರೈತ ಈಶ್ವರ ಕರಬಸಪ್ಪನವರ, 

200 ಕುಟುಂಬ, 250ಕ್ಕೂ ಅಧಿಕ ಜಾನುವಾರಗಳಿವೆ ಪ್ರತಿನಿತ್ಯ ಅಂದಾಜು 1500 ಲೀಟರ್ ಹಾಲು ತೆಗೆದುಕೊಂಡು ನದಿ ದಾಟಬೇಕು, 40ಕ್ಕೂ ಅಧಿಕ ಮಕ್ಕಳಿದ್ದು ಸರಿಯಾದ ಸಮಯಕ್ಕೆ ಬೋಟ್ ಬರದಿದ್ದರೆ ಶಾಲೆಗೆ ಹೋಗದೆ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಇದೆ, ಬ್ಯಾರಲ್ ಸೇತುವೆಯಿಂದ ಬಹಳ ಅನುಕೂಲವಾಗುತ್ತದೆಂದು ಮಲ್ಲಪ್ಪ ಸಿದ್ದನ್ನವರ ತಿಳಿಸಿದರು. 

ಸೇತುವೆಯನ್ನು ನಿರ್ಮಿಸುವಂತ 10 ವರ್ಷದಿಂದ ಸ್ಥಳೀಯ ಜನಪ್ರತಿನಿಧಿಗಳಿಂದ ಮುಖ್ಯಮಂತ್ರಿಯವರೆಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನೆಯಾಗಿಲ್ಲ, ಆಲಮಟ್ಟಿ 524 ಕ್ಕೆ ಮುಳುಗಡೆಯಾಗುತ್ತದೆ ಎಂದು ಅನುದಾನ ನೀಡಲು ಮುಂದೆ ಬರಲಿಲ್ಲ, ಬೇಸತ್ತು ರೈತರೆಲ್ಲರು ಸೇರಿ ಹಣವನ್ನು ಸಂಗ್ರಹಿಸಿ ಬ್ಯಾರಲ್ ಸೇತುವೆ ನಿರ್ಮಿಸಿಕೊಳ್ಳುತ್ತಿದ್ದವೆಂದು ರಾಮಪ್ಪ ಜಗದಾಳ ಹೇಳಿದರು. 

ರೈತರಿಂದ ನಿರ್ಮಾಣ: 

ಕಳೆದ ವರ್ಷ ಕಂಕಣವಾಗಿ ಗ್ರಾಮಸ್ಥರು ನಡುಗಡ್ಡೆಯಿಂದ ಕಬ್ಬು ಸಾಗಿಸಲು ಎರಡು ಬೋಟ್‌ಳಿಗೆ ಕಬ್ಬಿಣದ ರಾಡ್‌ಗಳನ್ನು ಜೋಡಿಸಿ ಕಬ್ಬು ತುಂಬಿದ ಟ್ರ್ಯಾಕ್ಟರ ಬೋಟನಲ್ಲಿ ನಿಲ್ಲಿಸಿ ಕಬ್ಬನ್ನು ಸಾಗಿಸುವ ವಿನೂತನ ಪ್ರಯತ್ನ ಮಾಡಿದ್ದರು. ಅದು ಸಫಲವಾಗಿರುವದರಿಂದ ಈ ಸೇತುವೆ ಮಾಡಲು ಮುಂದಾಗಿದ್ದಾರೆ. 

ತಾಲ್ಲೂಕಿನ ಚಿಕ್ಕಪಡಸಲಗಿ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ರೈತರು ಶ್ರಮದಾನದ ಮೂಲಕ ವಂತಿಗೆ ಸಂಗ್ರಹಿಸಿ ಏಷ್ಯಾ ಖಂಡದಲ್ಲಿಯೇ ಪ್ರಥಮ ರೈತರು ನಿರ್ಮಿಸಿದ ಬ್ಯಾರಟ್ ಎಂಬ ಇತಿಹಾಸ ಇದೆ. 


ಸುದ್ದಿ ಓದಿ