ನಾಡ ವಿರೋಧಿಗಳ ಚಟುವಟಿಕೆಗಳಿಗೆ ಖಂಡನೆ
ಅಥಣಿ 16: ಕಳೆದ ಕೆಲವು ದಿನಗಳಿಂದ ಬೆಳಗಾವಿ ಗಡಿ ಸೇರಿದಂತೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರನ್ನು ಸಹ ಗುರಿಮಾಡಿಕೊಂಡು ಪದೇ ಪದೇ ಕಾಲು ಕೆದರಿ ನಾಡವಿರೋಧಿ ಹೇಳಿಕೆಗಳನ್ನು ನೀಡುತ್ತಾ ಶಿವಸೇನೆಯು ಸಾರಿಗೆ ಬಸ್ಸುಗಳು ಸೇರಿದಂತೆ ಆಸ್ತಿಪಾಸ್ತಿಗಳನ್ನು ಹಾನಿಮಾಡುತ್ತಿದೆ. ಕನ್ನಡಿಗರ ಭಾವನೆಯನ್ನು ಕದಡುತ್ತಿರುವ ಶಿವಸೇನೆ ಮತ್ತು ಇನ್ನಿತರ ನಾಡ ವಿರೋಧಿ ಸಂಘಟನೆಗಳು ಈಗಲಾದರೂ ಎಚ್ಚೆತ್ತುಕೊಂಡು ಸುಖಾಸುಮ್ಮನೆ ಶಾಂತಿಯನ್ನು ಕದಡುವ ಬದಲು ಮಹಾಜನ ವರದಿ ಸಂಪೂರ್ಣವಾಗಿ ಜಾರಿಗೆ ಬರುವವರೆಗೆ ಸುಮ್ಮನೆ ಕುಳಿತುಕೊಳ್ಳಬೇಕಿದೆ. ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕಿರುವ ಸಮಸ್ಯೆಯನ್ನು ವಿನಾಕಾರಣವಾಗಿ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಬಿಟ್ಟು ಅನ್ಯೋನ್ಯವಾಗಿರುವ ಗಡಿ ಭಾಗದ ಜನರಲ್ಲಿ ಭಾಷಾ ವೈಷಮ್ಯವನ್ನು ತುಂಬುವ ಕೆಲಸವನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅವರು ನಾಡವಿರೋಧಿ ಚಟುವಟಿಕೆಗಳನ್ನು ಖಂಡಿಸಿದ್ದಾರೆ.