‘ಬಾಕಿ ರೂ. 200 ರೈತರ ಖಾತೆಗೆ ಜಮಾ ಮಾಡಲು ಬದ್ಧ’
ಅಥಣಿ 08: 2018-19ನೇ ಸಾಲಿನಲ್ಲಿ ಬಾಕಿ ಉಳಿದ 200 ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲು ಬದ್ಧರಾಗಿದ್ದೇವೆ ಎಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ಪರಪ್ಪ ಸವದಿ ರೈತರಿಗೆ ಭರವಸೆ ನೀಡಿದರು.
ಅವರು ಬೆಳಗಾವಿ ಜಿಲ್ಲಾ ರೈತ ಜಾಗೃತಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಕಾರಖಾನೆ ಬಂದ ಮಾಡಬಾರದು ಮತ್ತು ಬಾಕಿ ಉಳಿದ 200 ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿ ಆಯೋಜಿಸಿದ್ದ ರಾ್ಯಲಿಯಲ್ಲಿ ಮನವಿ ಸ್ವೀಕರಿಸಿ ಮಾತನಾಡುತ್ತಿದ್ದರು.
ಕೆಲ ವರ್ಷಗಳಿಂದ ಬರಗಾಲ, ಪ್ರವಾಹದ ಪರಿಣಾಮ ನಿಗದಿತ ಪ್ರಮಾಣದಲ್ಲಿ ಕಬ್ಬು ನುರಿಸಲು ಸಾಧ್ಯವಾಗಿಲ್ಲ ಮತ್ತು ಸಕ್ಕರೆ ದರದ ಕುಸಿತವಾಗಿದ್ದರಿಂದಲೂ ಕಾರಖಾನೆಗೆ ಆರ್ಥಿಕ ಹಿನ್ನಡೆಯಾಗಿದೆ. ಹೀಗಾಗಿ 2018-19 ನೇ ಸಾಲಿನಲ್ಲಿ ಬಾಕಿ ಉಳಿದ 200 ರೂ.ಗಳನ್ನು ಹಂತ ಹಂತವಾಗಿ ಜಮಾ ಮಾಡುತ್ತೇವೆ ಎಂದು ಭರವಸೆ ನೀಡಿದ ಅವರು ಪ್ರಸಕ್ತ ಹಂಗಾಮಿನಲ್ಲಿ ರೈತರಿಗೆ ಪ್ರತಿ ಟನ್ ಕಬ್ಬಿಗೆ 3000 ಘೋಷಿಸಿದ್ದೇವೆ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ರೈತ ಜಾಗೃತಿ ಸಮಿತಿ ಉಪಾಧ್ಯಕ್ಷ ರಾಜು ನಾಡಗೌಡ ಮಾತನಾಡಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ರೈತರ ಕಾರಖಾನೆಯಾಗಿದ್ದು, ಬಾಕಿ ಉಳಿದ 200 ರೂ.ಗಳನ್ನು ಹಂತ ಹಂತವಾಗಿ ಜಮಾ ಮಾಡಿ ಎಂದು ಆಗ್ರಹಿಸಿದರು.
ರೈತ ಜಾಗೃತಿ ಸಮಿತಿ ಸದಸ್ಯ ಅನಂತ ಬಸರಿಖೋಡಿ ಮಾತನಾಡಿ, ಈ ಕಾರಖಾನೆ ಪ್ರಾರಂಭಗೊಳ್ಳುವ ಮೊದಲು ಖಾಸಗಿ ಕಾರಖಾನೆಯವರು ರೈತರನ್ನು ತೂಕ ಮತ್ತು ದರದಲ್ಲಿ ಸುಲಿಗೆ ಮಾಡಿದ್ದಾರೆ. ರೈತರ ಈ ಕಾರಖಾನೆಗೆ ನಾವೆಲ್ಲ ಕಬ್ಬು ಪೂರೈಸುವ ಮೂಲಕ ಕಾರಖಾನೆಯನ್ನು ಗಟ್ಟಿಗೊಳಿಸೋಣ ಎಂದರು.
ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್.ಪಾಟೀಲ ಇವರಿಗೂ ಮನವಿ ಸಲ್ಲಿಸಿದರು. ರೈತ ಧುರೀಣರಾದ ಆನಂದ ಕುಲಕರ್ಣಿ, ರಾಮನಗೌಡ ಪಾಟೀಲ ಮಾತನಾಡಿದರು. ಕಾರಖಾನೆಯ ಸಂಚಾಲಕ ಮಂಡಳಿಯ ಶಾಂತಿನಾಥ ನಂದೇಶ್ವರ, ಶಂಕರ ವಾಘಮೋಡೆ, ಶ್ರೀಶೈಲ ನಾಯಿಕ, ವಿಶ್ವನಾಥ ಪಾಟೀಲ, ಸೌರಭ ಪಾಟೀಲ, ರಮೇಶ ಪಟ್ಟಣ, ಸಿದ್ರಾಯ ನಾಯಿಕ, ಹಣಮಂತ ಜಗದೇವ, ಮಲ್ಲಿಕಾರ್ಜುನ ಗೊಟಖಿಂಡಿ, ಧುರೀಣರಾದ ಬಾಳೇಶ ಸವದಿ, ಜಡೆಪ್ಪ ಕುಂಬಾರ, ಫರೀದ ಅವಟಿ, ಶ್ರೀಶೈಲ ದುಲಾರಿ, ಮಲ್ಲಪ್ಪ ಬಾಳಿಕಾಯಿ, ಸುರೇಶ ಘೂಳಪ್ಪನವರ, ಸತೀಶ ಗುಂಡಕಲ್ಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.