ವಾಣಿಜ್ಯ ಮಳಿಗೆ: ಕನ್ನಡ ನಾಮ ಫಲಕ ಕಡ್ಡಾಯವಾಗಲಿ: ಕರವೇ
ಗಂಗಾವತಿ 13: ನಗರಸಭೆ ವ್ಯಾಪ್ತಿಯಲ್ಲಿ ಬರುವ ಮಳಿಗೆಗಳಿಗೆ ಕನ್ನಡ ನಾಮಫಲಕ ಕಡ್ಡಾಯಗೊಳಿಸಬೇಕು ಮತ್ತು ಆಂಗ್ಲ ಮಾಧ್ಯಮ ನಾಮಫಲಕ ಅಳವಡಿಸುತ್ತಾರೆ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಟಿ.ಏ.ನಾರಾಯಣಗೌಡ ಬಣ)ದ ನಗರ ಘಟಕದ ಅಧ್ಯಕ್ಷ ಯಮನೂರ ಭಟ್ ಅವರು ನಗರಸಭೆಯ ಪೌರಾಯುಕ್ತರಿಗೆ ಇಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ನಗರದಲ್ಲಿ ಆಂಗ್ಲ ಮಾಧ್ಯಮ ನಾಮಪಲಕ ಅಳವಡಿಕೆ ಹೆಚ್ಚಾಗಿದೆ. ನಮ್ಮ ರಾಜ್ಯದ ಭಾಷೆ ಕನ್ನಡ. ಇಲ್ಲಿ ನೂರಕ್ಕೆ ನೂರರಷ್ಟು ಜನ ಕನ್ನಡ ಭಾಷಿಕರಿದ್ದಾರೆ. ಹಳ್ಳಿಗಾಡಿನಿಂದ ಬರುವ ಜನಕ್ಕೆ ಆಂಗ್ಲ ಭಾಷೆ ತಿಳಿಯುವುದಿಲ್ಲ. ಆದರೆ, ನಗರದ ಬಹುತೇಕ ವಾಣಿಜ್ಯ ಮಳಿಗೆಗಳ ನಾಮಫಳಕಗಳು ಆಂಗ್ಲ ಭಾಷೆಯಲ್ಲಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ.
ಕಾರಣ ಕೂಡಲೇ ಈ ಬಗ್ಗೆ ನಗರಸಭೆಯ ಆಯುಕ್ತರು ಕ್ರಮ ಕೈಗೊಂಡು ಆಂಗ್ಲ ಭಾಷೆಯಲ್ಲಿನ ನಾಮಫಲಕಗಳನ್ನ ತೆರೆವುಗೊಳಿಸಿ ಕನ್ನಡ ಭಾಷೆಯ ನಾಮಫಲಕ ಅಳವಿಡಿಸುವಂತೆ ನೋಟಿಸ್ ನೀಡಬೇಕು. ಅದಕ್ಕೆ ಇಂತಿಷ್ಟು ದಿನ ಎಂದು ಗಡುವು ಕೊಡಬೇಕು. ಆ ಗಡುವಿನೊಳಗೆ ನಾಮಫಲಕ ಬದಲಾಯಿಸದಿದ್ದರೆ, ಅವರ ವ್ಯವಹಾರ ಪರವಾಣಿಗೆಯನ್ನ ರದ್ದುಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ಕನ್ನಡ ಭಾಷೆ ಉಳಿಯಬೇಕು ಮತ್ತು ಬೆಳೆಯಬೇಕು ಎನ್ನುವುದು ಕನ್ನಡ ಹೋರಾಟಗಾರರ ಉದ್ದೇಶ. ಕಾರಣ ಅಪ್ಪಟ್ಟ ಕನ್ನಡಿಗರ ನೆಲದಲ್ಲಿ ಆಂಗ್ಲ ಮಾಧ್ಯಮದ ನಾಮಫಲಕ ಅಳವಡಿಸುವುದು ಎಷ್ಟು ಸರಿ ಎಂದು ಯಮನೂರ್ ಭಟ್ ಪ್ರಶ್ನಿಸಿದ್ದಾರೆ.
ಸಂಘಟನೆಯ ತಾಲೂಕು ಅಧ್ಯಕ್ಷ ಕೆ. ಚಂದ್ರಶೇಖರ ಶೆಟ್ಟಿ, ಯುವಘಟಕದ ಅಧ್ಯಕ್ಷ, ಹುಲುಗಪ್ಪ ಕೊಜ್ಜಿ, ಉಪಾಧ್ಯಕ್ಷರಾದ ಲಕ್ಷ್ಮಣ ಸಿಂಗ್, ಹನುಮೇಶ ಕುರುಬರು, ಸಂಘಟನಾ ಸಂಚಾಲಕ ಪವನ್ಕುಮಾರ್ ಗಡ್ಡಿ, ಭಾಷಾಸಾಬ್, ರಮೇಶ್ ಕುಮಾರ್, ಶಶಿಕುಮಾರ, ಅಂಬಾಸ್ ಸೇರಿದಂತೆ ಇತರಿದ್ದರು.