ಭಾರತದ ಪ್ರಥಮ ಪ್ರಧಾನಮಂತ್ರಿಯಾದ ಪಂಡಿತ ಜವಾಹರಲಾಲ ನೆಹರೂ ಅವರ ಜನ್ಮದಿನದ ನೆನಪಿಗಾಗಿ ಮಕ್ಕಳ ದಿನಾಚರಣೆ
ಕೊಲ್ಹಾರ, ನ.14: ಭಾರತದ ಪ್ರಥಮ ಪ್ರಧಾನಮಂತ್ರಿಯಾದ ಪಂಡಿತ ಜವಾಹರಲಾಲ ನೆಹರೂ ಅವರ ಜನ್ಮದಿನದ ನೆನಪಿಗಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಕ್ಕಳ ಮೇಲೆ ಅವರಿಗೆ ಅತಿಯಾದ ಪ್ರೀತಿಯಿತ್ತು, ಮಕ್ಕಳು ಅವರನ್ನು ಚಾಚಾ ನೆಹರೂ ಎಂದು ಪ್ರೀತಿಯಿಂದ ಕರೆಯುತ್ತಿದ್ದರು ಎಂದು ಶಿಕ್ಷಕಿ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಪಾರ್ವತಿ ಗಣಕುಮಾರ ಹೇಳಿದರು.
ಶನಿವಾರ ಪಟ್ಟಣದ ಶ್ರೀ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಮಕ್ಕಳು ಈ ದೇಶದ ಸಂಪತ್ತು ಅವರನ್ನು ಸದೃಢವಾಗಿ ಬೆಳೆಸುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅರಿತಿದ್ದ ಅವರು ದೇಶದ ನಿಜವಾದ ಆಸ್ತಿ ಮತ್ತು ಭವಿಷ್ಯದ ಆಶಾಕಿರಣಗಳು ಎಂದು ನೆಹರೂ ಅವರು ನಂಬಿದ್ದರು.
ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಬಾಲ್ಯ ಸಿಗಬೇಕು ಎಂದು ಅವರು ಬಯಸಿದ್ದರು ಎಂದರು. ನೆಹರೂ ಅವರು ತಮ್ಮ ಕೋಟ್ ಅಥವಾ ಅಂಗಿಗೆ ಪ್ರತಿದಿನ ತಾಜಾ ಕೆಂಪು ಗುಲಾಬಿಯನ್ನು ಪಿನ್ ಮಾಡಿಕೊಳ್ಳುತ್ತಿದ್ದರು. ಇದು ಅವರ ವಿಶಿಷ್ಟ ಗುರುತಾಗಿ ಮತ್ತು ಶೈಲಿಯಾಗಿ ಪ್ರಸಿದ್ಧವಾಗಿತ್ತು. ಅವರು ಮಕ್ಕಳನ್ನು ಗುಲಾಬಿ ಹೂವುಗಳಿಗೆ ಹೋಲಿಸುತ್ತಿದ್ದರು. ಮಕ್ಕಳ ಸರಳತೆ, ಮುಗ್ಧತೆ ಮತ್ತು ಸೌಂದರ್ಯವು ಗುಲಾಬಿ ಹೂವಿನಂತೆ ಶುದ್ಧವಾಗಿದೆ ಎಂದು ಅವರು ನಂಬಿದ್ದರು.
ಈ ಕಾರಣದಿಂದ ಮಕ್ಕಳು ಅವರನ್ನು ಪ್ರೀತಿಯಿಂದ ಚಾ ಚಾ ನೆಹರೂ ಎಂದು ಕರೆಯುತ್ತಿದ್ದರು. ಅವರ ಹುಟ್ಟಿದ ದಿನವಾದ ನವೆಂಬರ್ 14 ಅನ್ನು ಭಾರತದಲ್ಲಿ ಮಕ್ಕಳ ದಿನಾಚರಣೆ ಯನ್ನು ಆಚರಿಸಲಾಗುತ್ತದೆ ಎಂದರು. ಈ ವೇಳೆ ಶಾಲಾ ಉಪ ಪ್ರಧಾನ ಮಂತ್ರಿ ಸ್ಪೂರ್ತಿ ಕೋರಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಶಿಕ್ಷಕ ಬಲವಂತ ಹಿಕ್ಕನಗುತ್ತಿ ಪ್ರಾಸ್ತಾವಿಕವಾಗಿ ಮಾತಾಡಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಎಲ್ಲ ಮಕ್ಕಳಿಗೆ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಟಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಹಾಗೂ ಬಹುಮಾನವನ್ನು ವಿತರಿಸಲಾಯಿತು. ಇನ್ನುಳಿದಂತೆ ಶಾಲೆಯ ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆ ಅಂಗವಾಗಿ ಪೆನ್ನು ಹಾಗೂ ಗುಲಾಬಿಯನ್ನು ಹೂವುಗಳನ್ನು ಕೊಟ್ಟ ಸ್ವಾಗತಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಧಾನ ಮಂತ್ರಿ ಹರ್ಷಿತ್ ಚಕ್ರಮಣಿ ವಹಿಸಿದ್ದರು.
ಈ ವೇಳೆ ಶಾಲೆಯ ಮುಖ್ಯ ಶಿಕ್ಷಕ ಯಲ್ಲಪ್ಪ ಶಿರೋಳ, ಬಲವಂತ ಹಿಕ್ಕನಗುತ್ತಿ, ಮಲ್ಲಿಕಾರ್ಜುನ ಕುಬಕಡ್ಡಿ, ಬಸವರಾಜ ತುಪ್ಪದ, ಮಂಜುನಾಥ ಮುಳವಾಡ, ಶ್ರೀದೇವಿ ಬಿರಾದಾರ, ಶೈಲಾ ಬಿರಾದಾರ, ಶೃತಿ ಬೀಳಗಿ, ಪ್ರಿಯಾ ಕಾಖಂಡಕಿ,ಸೌಮ್ಯ ಹಿರೇಮಠ ಉಪಸ್ತಿತರಿದ್ದರು.ಶಿಕ್ಷಕಿ ಸೌಮ್ಯ ಹಿರೇಮಠ ಪ್ರಾರ್ಥಿಸಿದರು . ಶಿಕ್ಷಕಿ ಶೈಲಾ ಬಿರಾದಾರ ಸ್ವಾಗತಿಸಿದರು. ಶಿಕ್ಷಕಿ ಶೃತಿ ಬೀಳಗಿ ವಂದಿಸಿದರು.ಶಿಕ್ಷಕ ಮಂಜುನಾಥ ಮುಳವಾಡ ನಿರೂಪಿಸಿದರು.