ಚರಂಡಿಯಲ್ಲಿ ಶಿಶುವಿನ ಶವ ಪತ್ತೆ ಪ್ರಕರಣ: ಆಸ್ಪತ್ರೆಗಳ ಪರೀಶೀಲನೆ
ಘಟಪ್ರಭಾ 26: ಸ್ಥಳೀಯ ಕಲಾಲ ಒಣಿಯಲ್ಲಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟಪ್ರಭಾ ಪೊಲೀಸ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಪ್ರಕರಣ ದಾಖಲಾದ ಬೆನ್ನಲೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡಗಳು ಶಿಶುವಿನ ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ ಘಟಪ್ರಭಾದಲ್ಲಿನ ಹೆರಿಗೆ ಆಸ್ಪತ್ರೆಗಳಲ್ಲಿ ಸೋಮವಾರ ತಪಾಸನೆ ನಡೆಸಿದ್ದಾರೆ.
ಶಿಶುವಿನ ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ವಿಶ್ವನಾಥ ಭೋವಿ, ಅವರ ನೇತೃತ್ವ ಅಧಿಕಾರಿಗಳ ತಂಡ ಸುತ್ತಲಿನ ಸಿ.ಸಿ ಕ್ಯಾಮೆರಾಗಳ ಮಾಹಿತಿ ಪಡೆದುಕೊಂಡು ನಂತರ ಘಟಪ್ರಭಾದ ವಿವಿಧ ಹೆರಿಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಶಿಶುವಿನ ಶವ ಪತ್ತೆಯಾದ ಸ್ಥಳಕ್ಕೆ ಸಮೀಪಲ್ಲಿರುವ ಆಸ್ಪತ್ರೆಗಳಲ್ಲಿ ತೀರ ತಪಾಸಣೆ ನಡೆಸಿದ ಅಧಿಕಾರಿಗಳು ಸಂಶಯ ಇರುವ ಆಸ್ಪತ್ರೆಗಳಿಗೆ ನೋಟಿಸ ಜಾರಿ ಮಾಡಲಾಗುವುದು. ಶಿಶುವಿನ ಪೋಸ್ಟ ಮಾರ್ಟಮ ವರದಿಯ ಆಧಾರ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾವುದು ಎಂದು ಡಾ.ಪ್ರವೀಣ ಕರಗಾವಿ ತಿಳಿಸಿದ್ದಾರೆ.
ಸಿಬ್ಬಂದಿಗಳಿಗೆ ತರಾಟೆ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರಿಗೆ ಹಾಗೂ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು ಹಾಗೂ ಕೂಡಲೇ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೂಡಲೇ ಕಲೆಹಾಕಬೇಕೆಂದು ಎಚ್ಚರಿಕೆ ನೀಡಿದರು.
ಘಟನೆ ಹಿನ್ನಲೆ: ರವಿವಾರ ಮುಂಜಾನೆ ಚರಂಡಿಯಲ್ಲಿ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಹಾಕಿ ನವಜಾತ ಗಂಡು ಶಿಶುವಿನ ಶವ ಎಸೆಯಲಾಗಿತ್ತು. ಈ ಪ್ರಕರಣ ಸಮಾಜಿಕ ಜಾಲತಾನಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಹಿಂದೆ ಘಟಪ್ರಭಾದಲ್ಲಿ ಅನಧಿಕೃತ ಗರ್ಭಪಾತ ದಂಧೆೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಕೆಲವು ಕನ್ನಡಪರ ಸಂಘಟನೆಗಳ ಮುಂಖಡರು ಕೂಡಲೇ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದ ಬೆನ್ನಲ್ಲೆ ಎಚ್ಚೆತ್ತುಕೊಂಡ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.