ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ
ಜಮಖಂಡಿ 20: ಉತ್ತಮ ರಸ್ತೆ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ, ಸಾರಿಗೆ, ವಿದ್ಯುತ್, ಶಿಕ್ಷಣ ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಜನರಿಗೆ ಮೂಲ ಸೌಕರ್ಯ ಒದಗಿಸಿ ಕೊಡಲು ನಿರಂತರವಾಗಿ ಶ್ರಮಿಸುವದಾಗಿ ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ತಾಲ್ಲೂಕಿನ ಜಂಬಗಿ ಕೆ,ಡಿ, ಗ್ರಾಮದಿಂದ ತುಂಗಳ ಗ್ರಾಮದವರಿಗೆ ಲೋಕೋಪಯೋಗಿ ಇಲಾಖೆಯ 2022- 23ನೇ ಸಾಲಿನ ಜಿಲ್ಲಾ ರಸ್ತೆ ಸುಧಾರಣೆ ಯೋಜನೆಯ ಅಡಿಯಲ್ಲಿ ಅಂದಾಜು 4.95 ಕೋಟಿ ರೂ, ವೆಚ್ಚದ 4 ಕಿಮೀ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಿರ್ಮಾಣವಾಗಲಿರುವ ರಸ್ತೆ ಕಾಮಗಾರಿ ಗುಣಮಟ್ಟದ ವಿಚಾರದಲ್ಲಿ ನಾನು ರಾಜಿ ಇಲ್ಲ. ಆದ್ದರಿಂದ ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಗುತ್ತಿಗೆದಾರ ಅಯ್ಯನಗೌಡ ಪಾಟೀಲ ಅವರಿಗೆ ಸೂಚಿಸಿದರು.
ಭಾಜಪ ಗ್ರಾಮೀಣ ಮಂಡಲ ಅಧ್ಯಕ್ಷ ಅರವಿಂದಗೌಡ ಪಾಟೀಲ, ಅಜಯ ಕಡಪಟ್ಟಿ, ಲೋಕೋಪಯೋಗಿ ಇಲಾಖೆ ಎಇಇ ಎಸ್, ಆರ್, ಬಂಡಿವಡ್ಡರ, ಜೆಇ ಎಸ್,ಜಿ, ಹಿರೇಮಠ, ಗುತ್ತಿಗೆದಾರ ಅಯ್ಯನಗೌಡ ಪಾಟೀಲ, ಸುರೇಶಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.