ಬಳ್ಳಾರಿ: ಆಡಿಯೋ ಜಿಂಗಲ್ಸ್ ಮೂಲಕ ಮತದಾನದ ಜಾಗೃತಿ
ಬಳ್ಳಾರಿ 19: ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನೆಲೆ ಮಹಾನಗರ ಪಾಲಿಕೆಯ 50ಕ್ಕೂ ಹೆಚ್ಚು ಕಸ ಸಂಗ್ರಹಿಸುವ ಮತ್ತು ಸಾಗಿಸುವ ವಾಹನಗಳ ಮೂಲಕ ಮತದಾನದ ಜಾಗೃತಿ ಮತ್ತು ಮತದಾನದ ಮಹತ್ವ ಸಾರುವ ಸಂದೇಶ ಹೊತ್ತ ಆಡಿಯೋ ಜಿಂಗಲ್ಸ್ಗಳ ಪ್ರಚಾರಕ್ಕೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ತುಷಾರಮಣಿ ಅವರು ಪಾಲಿಕೆ ಆವರಣದಲ್ಲಿ ಚಾಲನೆ ನೀಡಿದರು. ಮತದಾನದ ಮಹತ್ವ ಸಾರುವ ಸಂದೇಶದ ಆಡಿಯೋ ಜಿಂಗಲ್ಸ್ಗಳ ಮೂಲಕ ಕಸ ಸಂಗ್ರಹಿಸುವ ಮತ್ತು ಸಾಗಿಸುವ ವಾಹನಗಳು ನಗರದಾದ್ಯಂತ ಸಂಚರಿಸಿ ಅರಿವು ಮೂಡಿಸಿದವು. ಇನ್ಮುಂದೆ ಚುನಾವಣೆ ನಡೆಯುವವರೆಗೆ ಪ್ರತಿನಿತ್ಯ ನಗರದಾದ್ಯಂತ ಸಂಚರಿಸಿ ಅರಿವು ಮೂಡಿಸಲಿವೆ. ಮತದಾರರಿಗೆ ತಮ್ಮ ಮತದ ಅಮೂಲ್ಯ ಅರಿಯುವ ಉದ್ದೇಶದಿಂದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಅಮೂಲ್ಯ ಮತದಾನ ಮಾಡಲಿ ಎಂಬ ಸದುದ್ದೇಶದಿಂದ ಈ ರೀತಿ ಜಾಗೃತಿ ಮೂಡಿಸಲಾಗುತ್ತಿದೆ. ಶೀಘ್ರ ಉಳಿದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ಇದೇ ರೀತಿ ಮಾಡಲಾಗುವುದು ಎಂದು ಜಿಪಂ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ ಅವರು ಹೇಳಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಹನುಮಂತಪ್ಪ ಸೇರಿದಂತೆ ಪಾಲಿಕೆ ಸಿಬ್ಬಂದಿ ಇದ್ದರು.