ಬಳ್ಳಾರಿ: ರಸ್ತೆ ಸುರಕ್ಷತೆ ಸಮಗ್ರ ವರದಿ ವಾರದೊಳಗೆ ಸಲ್ಲಿಸಿ: ರಾಮ್ ಪ್ರಸಾತ್ ಸೂಚನೆ

ಬಳ್ಳಾರಿ: ರಸ್ತೆ ಸುರಕ್ಷತೆ ಸಮಗ್ರ ವರದಿ ವಾರದೊಳಗೆ ಸಲ್ಲಿಸಿ: ರಾಮ್ ಪ್ರಸಾತ್ ಸೂಚನೆ

ಬಳ್ಳಾರಿ 15: ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿರುವ ಅಪಘಾತಗಳ ಪ್ರಮಾಣ ಮತ್ತು ಯಾವ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳಾಗಿವೆ ಹಾಗೂ ಅಪಘಾತಗಳು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದಕ್ಕೆ ಸಂಬಂಧಿಸಿರುವುದು ಸೇರಿದಂತೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಮಗ್ರ ವರದಿಯನ್ನು ವಾರದೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

   ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

   ರಸ್ತೆ ಸುರಕ್ಷತೆಯನ್ನು ವ್ಯವಸ್ಥಿತವಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ವೈಜ್ಞಾನಿಕ ತಳಹದಿಯಲ್ಲಿ ಜಾರಿಗೊಳಿಸುವ ಉದ್ದೇಶದಿಂದ ಒಂದು ಸಮಗ್ರ ವರದಿ ರೂಪಿಸುವುದು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ವರದಿಯನ್ನು ಸಿದ್ದಪಡಿಸಿ ನೀಡಿ ಎಂದರು.

ಪ್ರತಿ 4 ತಿಂಗಳಿಗೊಮ್ಮೆ ಸಭೆ ನಡೆಸಿ ಸಂಭವಿಸಲಾಗಿರುವ ಅಪಘಾತಗಳು ಮತ್ತು ಸಾವನ್ನಪ್ಪಿರುವ ಪ್ರಕರಣಗಳ ಕುರಿತುಚರ್ಚಿಸಬೇಕು ಮತ್ತು ಮುಂದಾಗದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಹೇಳಿದ ಡಿಸಿ ರಾಮ್ ಪ್ರಸಾತ್ ಅವರು,  ಹೆದ್ದಾರಿಗಳಲ್ಲಿ ಮೀತಿಮೀರಿದ ವೇಗ ಹಾಗೂ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಗಸ್ತು ಹೆಚ್ಚಿಸಬೇಕು. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಪರಿಕರಗಳನ್ನು 5 ವರ್ಷಗಳಲ್ಲಿ ಜಿಲ್ಲೆಗಳಲ್ಲಿ ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.

   ಗುಡ್ಡಗಾಡು ರಸ್ತೆ, ಹಳ್ಳಕೊಳ್ಳಗಳ ಬದಿಯಿರುವ ರಸ್ತೆ ಹಾಗೂ ಅಪಘಾತ ವಲಯದ ರಸ್ತೆಗಳನ್ನು ಗುರುತಿಸಿ ಅಂತ ಸ್ಥಳಗಳಲ್ಲಿ ಹೆಚ್ಚಿನ ಬ್ಯಾರಿಕೇಡ್ಗಳ ವ್ಯವಸ್ಥೆ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬಸ್ ಹಾಗೂ ಆಟೋಗಳ ಪರಿಶೀಲಿಸಿ: ಶಾಲಾ ಬಸ್ಗಳು ಹಾಗೂ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೋಗಳನ್ನು ಪರಿಶೀಲಿಸಿ ಮತ್ತು ನಿಗದಿಪಡಿಸಿದ ಸೀಟುಗಳಿಗಿಂತ ಹೆಚ್ಚಿನ ಪ್ರಮಾಣದ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರೇ ಬಸ್ ಮತ್ತು ಆಟೋ ವಶಪಡಿಸಿಕೊಳ್ಳಿ ಹಾಗೂ ದಂಡ ಹಾಕಿ ಎಂದು ಡಿಸಿ ರಾಮ್ ಪ್ರಸಾತ್ ಸೂಚಿಸಿದರು.

ಕೂಡಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಹೊಸಪೇಟೆ ಮತ್ತು ಬಳ್ಳಾರಿ ಆರ್ಟಿಒ ಅವರಿಗೆ ಹೇಳಿದರು. ಹೊಸಪೇಟೆ ಮಾರ್ಗವಾಗಿ ಹೋಗುವ ಸಂದರ್ಭದಲ್ಲಿ ಅನೇಕ ಬಾರಿ ಆಟೋಗಳಲ್ಲಿ ನಿಗದಿಗಿಂತ ಹೆಚ್ಚಿನ ಜನರು ಪ್ರಯಾಣಿಸುತ್ತಿರುತ್ತಾರೆ; ಆದರೇ ಆರ್ಟಿಒಗಳು ಇದುವರೆಗೆ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ನಿಗದಿಪಡಿಸಿದ ವಯೋಮಿತಿಯೊಳಗಿನ ಮಕ್ಕಳು ಯಾವುದೇ ಕಾರಣಕ್ಕೂ ವಾಹನ ಚಲಾಯಿಸದಂತೆ ನೋಡಿಕೊಳ್ಳಬೇಕು. ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಅರಿವು ಮೂಡಿಸಿ ಎಂದರು. ಜಿಲ್ಲೆಯಲ್ಲಿರುವ ತೆಗ್ಗು-ಗುಂಡಿಗಳನ್ನು ಗುರುತಿಸಿ ವರದಿ ನೀಡಿ ಎಂದು ಹೇಳಿದರು.

108 ಆ್ಯಂಬುಲೆನ್ಸ್ ಕಾರ್ಯನಿರ್ವಹಣೆ ಜಿಲ್ಲೆಯಲ್ಲಿ ತೀರಾ ಸಾಧಾರಣ: ಬಳ್ಳಾರಿ ಜಿಲ್ಲೆಯಲ್ಲಿ 108 ಆ್ಯಂಬುಲೆನ್ಸ್ಗಳ ಕಾರ್ಯನಿರ್ವಹಣೆ ಅತ್ಯಂತ ಸಾಧಾರಣವಾಗಿದೆ. ಅಷ್ಟೇನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಡಿಸಿ ರಾಮ್ ಪ್ರಸಾತ್ ಅವರು, ಕಾಲ್ ರಿಜಿಸ್ಟರ್ ವಿವರ ಮತ್ತು ಆ್ಯಂಬುಲೆನ್ಸ್ಗಳ ನಿಯೋಜನೆ ಕುರಿತ ಒಂದು ತಿಂಗಳ ವರದಿ ಹಾಗೂ ಸರಕಾರದಿಂದ ಭರಿಸಲಾದ ಮೊತ್ತದ ಸಂಪೂರ್ಣ ವಿವರ ಸಲ್ಲಿಸುವಂತೆ ಆರೋಗ್ಯ ಇಲಾಖೆಯ ಪ್ರತಿನಿಧಿಯಾಗಿ ಆಗಮಿಸಿದ್ದ ಡಾ.ಅನಿಲಕುಮಾರ್ ಅವರಿಗೆ ಸೂಚಿಸಿದರು.

15 ದಿನಗಳ ಹಿಂದೆ ಸಂಡೂರು ಬಳಿ ಅಪಘಾತ ಸಂಭವಿಸಿ ಒಂದೂವರೆ ಗಂಟೆಯಾದರೂ ಆ ಸ್ಥಳಕ್ಕೆ ಆ್ಯಂಬುಲೆನ್ಸ್ ತಲುಪಲಿಲ್ಲ; ಸಾವು-ಬದುಕಿನ ಮಧ್ಯೆ ಹೋರಾಡುವವರಿಗೆ ಈ ಸಂದರ್ಭ ಅಮೂಲ್ಯ; ಅಷ್ಟಾದರೂ ಬರದಿದ್ದರೇ ಏನರ್ಥ ಎಂದು ಪ್ರಶ್ನಿಸಿದ ಅವರು, ಕೂಡಲೇ ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಿ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು. ತಪ್ಪಿದ್ದಲ್ಲಿ ಇದರ ನೋಡಲ್ ಅಧಿಕಾರಿಗಳಾಗಿರುವ ಡಿಎಚ್ಒ ಅವರ ಮೇಲೆ ರಸ್ತೆ ಸುರಕ್ಷತಾ ಸಮಿತಿಯಿಂದ ಕ್ರಮಕೈಗೊಳ್ಳುವುದಕ್ಕೆ ಶಿಫಾರಸ್ಸು ಮಾಡಿ ಎಂದರು.

ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಸಂಭವಿಸಿದ ಅಪಘಾತಗಳು/ಸಾವು ಹಾಗೂ ಕೈಗೊಂಡ ರಸ್ತೆ ಸುರಕ್ಷತಾ ಕ್ರಮಗಳ ಕುರಿತ ವಾಷರ್ಿಕ ಅಪಘಾತ ದತ್ತಾಂಶ ಪ್ರಕಟಿಸುವುದಕ್ಕೆ ವ್ಯವಸ್ಥೆ ಮಾಡಿ ಹಾಗೂ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಅನುದಾನ ಲಭ್ಯವಿದ್ದು, ಕ್ರಿಯಾಯೋಜನೆ ಸಲ್ಲಿಸಿದ್ದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಹೊಸಪೇಟೆ/ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರಸ್ತೆ ಸುರಕ್ಷತಾ ಸಮಿತಿಯ ಸದಸ್ಯರು ಇದ್ದರು.

ಸುದ್ದಿ ಓದಿ