ಬಳ್ಳಾರಿ: ಕಾರ್ಯಕರ್ತರೊಂದಿಗೆ ದೇವದಾಸ್ ಮತದಾನ
ಲೋಕದರ್ಶನ ವರದಿ
ಬಳ್ಳಾರಿ 23: ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಎ.ದೇವದಾಸ್ ಸ್ವಂತ ಗ್ರಾಮವಾದ ಸೋಮಸಮುದ್ರದಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಚುನಾವಣೆಗಳಲ್ಲಿ ಬರಿ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳು, ದುಡ್ಡಿನ ಬಲ, ಜಾತಿ ಬಲ ಇವುಗಳೇ ಪ್ರಾಧಾನ್ಯತೆ ಪಡೆದಿವೆ. ಈ ಪರಿಸ್ಥಿತಿಯಲ್ಲಿ ಜನರ ಜ್ವಲಂತ ಸಮಸ್ಯೆಗಳನ್ನು ಚುನಾವಣಾ ವಿಷಯವನ್ನಾಗಿ ಮಾಡಿ, ಬಳ್ಳಾರಿಯ ಮೂಲೆ ಮೂಲೆಯಲ್ಲಿ ಜನರನ್ನು ತಲುಪಲು ಹಾಗೆ ಅವರ ಮನಸ್ಸನ್ನು ಗೆಲ್ಲಲು ಸಾಧ್ಯವಾಯಿತು. ದುಡಿಯುವ ವರ್ಗದ ಪಕ್ಷವಾದ ಎಸ್.ಯು.ಸಿ.ಐ (ಸಿ)ಗೆ ನಿರಂತರವಾಗಿ ಬೆಂಬಲ ನೀಡುತ್ತಿರುವ ರೈತ ಕಾರ್ಮಿಕರಿಗೆ ವಿದ್ಯಾರ್ಥಿ -ಯುವಜನರಿಗೆ, ಮಹಿಳೆಯರಿಗೆ ಹಾಗೂ ಚುನಾವಣಾ ಸಂದರ್ಭದಲ್ಲಿ ಹಗಲಿರುಳು ಕಾರ್ಯನಿರ್ವಹಿಸಿದ ಪಕ್ಷದ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಎಸ್.ಯು.ಸಿ.ಐ (ಸಿ) ಪಕ್ಷದ ಜಿಲ್ಲಾ ಸಮಿತಿ ಧನ್ಯವಾದಗಳನ್ನು ಸಲ್ಲಿಸುತ್ತದೆ. ಮುಂದಿನ ದಿನಗಳಲ್ಲಿ ಎಸ್.ಯು.ಸಿ.ಐ (ಸಿ) ಪಕ್ಷ ಹಾಗೂ ಅದರ ಮುಂದಳಗಳು ಕಟ್ಟುವ ಹೋರಾಟಗಳಿಗೆ ಬಳ್ಳಾರಿಯ ಜನತೆ ತಮ್ಮ ಅಚಲ ಬೆಂಬಲವನ್ನು ಮುಂದುವರೆಸಬೇಕಾಗಿ ಮನವಿ ಮಾಡಿದರು.