ಕಲೆಗಳಿಂದ ಬದುಕು ಸುಂದರಗೊಳ್ಳುತ್ತದೆ: ಈಶ್ವರಚಂದ್ರ ಬೆಟಗೇರಿ
ಗೋಕಾಕ 19: ಕಲಾವಿದರು ದೈವೀಸಂಭೂತರು, ಜಾನಪದ ಕಲೆಗಳು ದೇವರ ಆರಾಧನೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿವೆ. ಹಾಗಾಗಿ ಕಲೆಗಳಿಂದ ಬದುಕು ಸುಂದರಗೊಳ್ಳುತ್ತದೆ ಎಂದು ಗೋಕಾಕದ ಹಿರಿಯ ರಂಗಭೂಮಿ ಸಾಹಿತಿ, ಕಲಾವಿದ ಈಶ್ವರಚಂದ್ರ ಎಸ್. ಬೆಟಗೇರಿ ಹೇಳಿದರು.
ಅವರು ನಗರದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಳಕಟನಾಳದ ಬಲಭೀಮ ದಟ್ಟಿಕುಣಿತ ಪರಿಶಿಷ್ಠ ಪಂಗಡ ಜಾನಪದ ಕಲಾ ಸಂಘದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಎಮ್ಎಫ್ ಬೆಂಗಳೂರು ರಾಜ್ಯಾಧ್ಯಕ್ಷ ಹಾಗೂ ಅರಭಾವಿಯ ಶಾಸಕ ಬಾಲಚಂದ್ರ ಜಾರಕಿಹೊಳಿ ಇವರ ಕಲಾ ಪ್ರೋತ್ಸಾಹದ ಮೇರೆಗೆ ಈ ನೂತನ ಸಂಘ ಉದ್ಘಾಟನೆಗೊಂಡಿದೆ ಎಂದು ಹೇಳಿ ಕಲಾವಿದರಿಗೆ ಹಾಗೂ ಸಂಘಟನೆಗೆ ಕಂಕಣವಾಡಿಯ ಶ್ರೀಕೃಷ್ಣ ಪಾರಿಜಾತ ಹಿರಿಯ ಕಲಾವಿದರು ಹಸನಸಾಬ ನದಾಫ್ ಶುಭ ಕೋರಿದರು.
ಕರ್ನಾಟಕ ಲಲಿತಕಲಾ ಅಕಾಡಮಿ ಬೆಂಗಳೂರ ಸದಸ್ಯ ಪ್ರಾ.ಜಯಾನಂದ ಮಾದರ ಪ್ರಶಸ್ತಿ ಪ್ರದಾನ ಮಾಡಿ ಸಂಘ ಬಾಲಚಂದ್ರ ಜಾರಕಿಹೊಳಿಯಂಥ ಧೀಮಂತ ನಾಯಕರಿಂದ ಸರಕಾರದ ಯೋಜನೆಗಳನ್ನು ಪಡೆಯುವಂತಾಗಲಿ ಮತ್ತು ಕಲಾವಿದರು ಸಂಘಟನೆಗಳ ಮೂಲಕ ನಿರಂತರ ಕಲಾ ಚಟುವಟಿಕೆಯಲ್ಲಿ ತೊಡಗಲಿ ಎಂದು ಹೇಳಿದರು.
ತಳಕಟನಾಳದ ಜಾನಪದ ಹಾಗೂ ಸಂಗೀತ ಕಲಾವಿದ ಲಗಮಣ್ಣ ದೊಡಮನಿ, ಮೆಳವಂಕಿಯ ಶಹನಾಯಿ ವಾದ್ಯಕಲಾವಿದ ರಾಯಪ್ಪಾ ಭಜಂತ್ರಿ, ಅರಬಾವಿಯ ಹಲಗೆ ವಾದ್ಯಕಲಾವಿದ ಸಿಡ್ಲೆಪ್ಪಾ ದೊಡಮನಿ, ಶಿಂಗಳಾಪೂರದ ದೊಡ್ಡಾಟ ಕಲಾವಿದ ಬಾಳೇಶ ಹರಿಜನ, ಪಾಮಲದಿನ್ನಿಯ ಚೌಡಕಿಪದ ಕಲಾವಿದೆ ಶ್ರೀಮತಿ ಕೆಂಪವ್ವಾ ಹರಿಜನ, ಇವರಿಗೆ ಕಲಾ ಸಿರಿಸಂಪದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉದಗಟ್ಟಿಯ ಹಿರಿಯ ಜಾನಪದ ಕಲಾವಿದ ಉದ್ದಣ್ಣಾ ಗೋಡೇರ, ನೂತನ ಸಂಘದ ಅಧ್ಯಕ್ಷ ಮಾಯಾಪ್ಪ ಮುತ್ತೆನ್ನವರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ನಂತರ ಜರುಗಿದ ಜಾನಪದ ಕಾರ್ಯಕ್ರಮದಲ್ಲಿ ತಳಕಟನಾಳ ಭೀಮಪ್ಪಾ ಲ. ಪೂಜೇರಿ ಮುಖ್ಯ ಗಾಯಕರು ಲಕ್ಷ್ಮೀದೇವಿ ಡೊಳ್ಳಿನ ಗಾಯನ ಸಂಘ ಡೊಳ್ಳಿನ ಪದ, ಬಲಭೀಮ ದಟ್ಟಿ ಕುಣಿತ ಜಾನಪದ ಕಲಾ ಸಂಘ ದಟ್ಟಿ ಕುಣಿತ, ಮರಡೀಮಠ (ಕೊ), ಕಾಡಪ್ಪ ಬಂಗೆನ್ನವರ ಹಾಗೂ ತಂಡ ಕರಡೀಮೇಳ, ತಳಕಟನಾಳ ವೇಷಧಾರಿ ಕಲಾವಿದ ವಿಠ್ಠಲ ಬಾಪುಕರಿ ಛದ್ಮ ವೇಷ, ಸಿರಿನಾಡು ಶಿಂಗಳಾಪೂರ ಜಾನಪದ ಕಲಾವಿದರ ಸಂಘ ಸಂಪ್ರದಾಯ ಪದ, ಬಳೋಬಾಳದ ಮಹಾದೇವ ಕಳಸನ್ನವರ ಹಾಗೂ ಸಂಗಡಿಗರಿಂದ ಭಜನಾ ಪದಗಳು ಇನ್ನೂ ಅನೇಕ ಜಾನಪದ ಕಾರ್ಯಕ್ರಮ ಜನ-ಮನ ರಂಜಿಸಿತು.
ಪರಶುರಾಮ ಮುತ್ತೆಣ್ಣವರ ಸ್ವಾಗತಿಸಿದರು. ಸುಗಂಧ ಹೊನಕುಪ್ಪಿ ನಿರೂಪಿಸಿದರು. ಭೀಮಪ್ಪಾ ಪೂಜೇರಿ ವಂದಿಸಿದರು.