ವಿವಿಧ ಬೇಡಿಕೆಗಳನ್ನು ಈಡೇರಸಲು ಮನವಿ
ರಾಣೇಬೆನ್ನೂರ 13: ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ಬೆಂಬಲಿಸಿ ಮತ್ತು ಅವರ ವಿವಿಧ ಬೇಡಿಕೆಗಳನ್ನು ಈಡೇರಿಸಿ ಕೂಡಲೇ ತ್ವರಿತವಾಗಿ ತರಗತಿಗಳನ್ನು ನಡೆಸಬೇಕು ಎಂದು ಒತ್ತಾಯಿಸಿ, ಭಾರತ ವಿದ್ಯಾರ್ಥಿ ಫೆಡರೇಷನ ತಾಲೂಕು ಸಮಿತಿ ನೇತೃತ್ವದಲ್ಲಿ ನಗರದ ಹೊರವಲಯದ,ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಎದುರುಗಡೆ ಮಂಗಳವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾಲೇಜು ಎದುರುಗಡೆ ಧರಣಿ ನಡೆಸಿದ ಭಾರತ್ ವಿದ್ಯಾರ್ಥಿ ಫೆಡರೇಶನ್, ಮುಖಂಡರು ಕಾಲೇಜು ಪ್ರಾಂಶುಪಾಲ ಎಸ್.ಕೆ.ಪಾಟೀಲ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ತಮ್ಮ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್ ಅವರು, ರಾಜ್ಯದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇರುವ ಅತಿಥಿ ಉಪನ್ಯಾಸಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ನವೆಂಬರ್ 23 ರಿಂದ ರಾಜ್ಯದಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಬೃಹತ್ ಪ್ರಮಾಣದಲ್ಲಿ ಹೋರಾಟ ನಡೆಸಿ ಉನ್ನತ ಶಿಕ್ಷಣ ಸಚಿವರ ಜೊತೆಗೆ ಮಾತುಕತೆ ನಡೆಸಿದ್ದರು ಆದರೆ ಸಚಿವರು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಅತಿಥಿ ಉಪನ್ಯಾಸಕರ ಒಕ್ಕೂಟವು ತನ್ನ ಅನಿರ್ದಿಷ್ಟಾವಧಿ ಧರಣಿಯನ್ನು ಮುಂದುವರೆಸಿದ್ದಾರೆ ಎಂದರು.
ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಅತಿಥಿ ಉಪನ್ಯಾಸಕರು ಮತ್ತು ಸರ್ಕಾರದ ಮಧ್ಯ ನಡೆಯುತ್ತಿರುವ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕುತ್ತು ಬಂದಿದೆ. ಆದಷ್ಟು ಬೇಗ ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು. ಎಂದು ಎಚ್ಚರಿಸಿದ ಅವರು ಮಂಡೋತನ ಪ್ರದರ್ಶಿಸಿದರೆ, ಮುಂದಿನ ದಿನಗಳಲ್ಲಿ ಉಪನ್ಯಾಸಕರೊಂದಿಗೆ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾದುವುದು ಅನಿವಾರ್ಯವಾಗುತ್ತದೆ ಎಂದು ಪುನರುಚ್ಚರಿಸಿದರು.
ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಎಸ್ಎಫ್ಐ ಮುಖಂಡ ನಾಗರಡ್ಡಿ ಗೋಡಿಹಾಳ, ಕಿರಣ ಅಬಲೂರ, ಪ್ರಶಾಂತ ನಾಯ್ಕ, ಮಾಲತೇಶ ಸರ್ವಂದ, ನರಸಿಂಹರಾಜ ಎಮ್ಎಚ್, ಪರಿಮಳ ಎಲ್.ಕೆ, ಸಿಂಧೂ ಎಲ್, ಅಶ್ವಿನಿ ಎನ್, ಕುಸಮಾ ಬಿ.ಕೆ, ರೇಷ್ಮಾ ಎಲ್.ಡಿ. ಸೇರಿದಂತೆ ವಿದ್ಯಾರ್ಥಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.