ಸಂವಿಧಾನದ ಅರಿವು ಪ್ರತಿಯೊಬ್ಬ ನಾಗರಿಕನಿಗೂ ಅತ್ಯಗತ್ಯ
ಲೋಕದರ್ಶನ ವರದಿ
ಗದಗ 05: ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ “ಸಂವಿಧಾನದ ಶಕ್ತಿ: ನಾಗರಿಕರ ಸಬಲೀಕರಣ” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮುಂಡರಗಿಯ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಪ್ರೊ. ಹನುಮಂತಪ್ಪ ಎನ್. ಅವರು ಮಾತನಾಡಿ, ಭಾರತೀಯ ಸಂವಿಧಾನವು ದೇಶದ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ. '
ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವುದರ ಜೊತೆಗೆ ಕರ್ತವ್ಯಗಳ ಅರಿವನ್ನೂ ಮೂಡಿಸುತ್ತದೆ. ಸಂವಿಧಾನದ ಆಶಯಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದರು. '
ಸಂವಿಧಾನದ ಅರಿವುಳ್ಳ ನಾಗರಿಕರಿಂದ ಮಾತ್ರ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಎ. ಕೆ. ಮಠ ಅವರು ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಅರಿತು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಚಂದಾಲಿಂಗಪ್ಪ ಹಳ್ಳಿಕೇರಿ ಅವರು ನಿರೂಪಿಸಿದರು. ಬಿ.ಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ರೇಖಾ ಉಮಚಗಿ ಅವರು ಪ್ರಾರ್ಥನಾ ಗೀತೆ ಹಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೀಣಾ ಈ. ಅವರು ಭಾರತದ ಪ್ರಜಾಪ್ರಭುತ್ವದ ಅಸ್ತಿತ್ವ ಮತ್ತು ಯಶಸ್ಸು ನಿಂತಿರುವುದೇ ನಮ್ಮ ಸಂವಿಧಾನದ ಮೇಲೆ. ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಸಾಂವಿಧಾನಿಕ ಜಾಗೃತಿ ಹೆಚ್ಚುತ್ತಿದ್ದು, ಸಂವಿಧಾನವು ಪ್ರತಿಯೊಬ್ಬ ಸಾಮಾನ್ಯ ನಾಗರಿಕನನ್ನು ಹೇಗೆ ಸಬಲೀಕರಣಗೊಳಿಸಿದೆ ಎಂಬ ಚರ್ಚೆ ಮುಂಚೂಣಿಗೆ ಬಂದಿದೆ. ಸಂವಿಧಾನದ ಪೀಠಿಕೆಯ ಮೊದಲ ಸಾಲುಗಳಾದ "ನಾವು, ಭಾರತದ ಜನರು" ಎಂಬುದೇ ಈ ದೇಶದ ನಿಜವಾದ ಅಧಿಕಾರ ಜನಸಾಮಾನ್ಯರ ಕೈಯಲ್ಲಿದೆ ಎಂಬುದನ್ನು ಸಾರುತ್ತದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಬಿ.ಎ. ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ರೂಪಾ ಗದಗಿನ ಅವರು ವಂದನಾರೆ್ಣ ಸಲ್ಲಿಸಿದರು.