ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಆರೋಪ; ಜಿಟಿಟಿಸಿಯಲ್ಲಿ ಪ್ರತಿಭಟನೆ
ಲೋಕದರ್ಶನ ವರದಿ
ಶಿಗ್ಗಾವಿ, ಆ.3: ತಾಲೂಕಿನ ಕಲ್ಯಾಣ ಗ್ರಾಮದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಇತ್ತೀಚೆಗೆ ನೇಮಕಗೊಂಡ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಎಬಿವಿಪಿ ಹಾಗೂ ಕನ್ನಡ ಜಾಗೃತಿ ವೇದಿಕೆಯ ಸಹಯೋಗದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಕೇಂದ್ರದಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹಲವು ಸಮಸ್ಯೆಗಳು ಕಾಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸೆಮಿಸ್ಟರ್ ಪರೀಕ್ಷೆಗೆ ಕೇವಲ ಮೂರು ತಿಂಗಳು ಬಾಕಿ ಇದ್ದರೂ ಬೋಧಕರ ಕೊರತೆಯಿಂದ ಹಲವು ವಿಷಯಗಳ ಬೋಧನೆ ಆರಂಭವಾಗಿಲ್ಲ. ಪ್ರವೇಶದ ವೇಳೆ ಶೇ.70ರಷ್ಟು ಪ್ರಾಯೋಗಿಕ ತರಬೇತಿ ನೀಡುವುದಾಗಿ ತಿಳಿಸಿದ್ದರೂ ಅಗತ್ಯ ಯಂತ್ರೋಪಕರಣಗಳ ಕೊರತೆಯಿಂದ ಗುಣಮಟ್ಟದ ತರಬೇತಿ ಸಿಗುತ್ತಿಲ್ಲ ಎಂದು ದೂರಿದರು.
ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಪ್ರಾಂಶುಪಾಲರ ಗಮನಕ್ಕೆ ತಂದಾಗ ಅವುಗಳನ್ನು ಪರಿಹರಿಸುವ ಬದಲು ಪ್ರಶ್ನಿಸುವ ವಿದ್ಯಾರ್ಥಿಗಳ ವಿಡಿಯೋ ಚಿತ್ರೀಕರಿಸಿ ಪೋಷಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು. ಇತ್ತೀಚೆಗೆ ನೇಮಕಗೊಂಡ ಕೆಲ ಉಪನ್ಯಾಸಕರ ಬೋಧನಾ ಗುಣಮಟ್ಟ ತೃಪ್ತಿಕರವಾಗಿಲ್ಲ. ವಿದ್ಯಾರ್ಥಿವೇತನ ನೀಡುವುದಾಗಿ ಭರವಸೆ ನೀಡಿದ್ದರೂ ಒಂದು ವರ್ಷ ಕಳೆದರೂ ಇನ್ನೂ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.
ಯಾವುದೇ ಸಮಸ್ಯೆ ಕುರಿತು ಪ್ರಾಂಶುಪಾಲರನ್ನು ಭೇಟಿ ಮಾಡಲು ಹೋದರೆ "ಮೀಟಿಂಗ್ ಇದೆ, ನಾಳೆ ಬನ್ನಿ" ಎಂದು ಹೇಳಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸಮರ್ಕ ಬಸ್ ಸೌಲಭ್ಯವೂ ಇಲ್ಲ ಎಂದು ಹೇಳಿದರು.
ವಸತಿ ನಿಲಯದ ಕ್ಯಾಂಟೀನ್ನಲ್ಲಿ ಸ್ವಚ್ಛತೆ ಇಲ್ಲದ ಆಹಾರ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಸಣ್ಣಪುಟ್ಟ ವಿಚಾರಗಳಿಗೂ ವಿದ್ಯಾರ್ಥಿಗಳನ್ನು ಅವಮಾನಿಸಲಾಗುತ್ತಿದೆ ಹಾಗೂ ಸಿಬ್ಬಂದಿಯ ವರ್ತನೆ ಅಸಮಾಧಾನಕರವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಎಲ್ಲಾ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ, ವಿದ್ಯಾರ್ಥಿಗಳಿಗೆ ಸೂಕ್ತ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ, ಬಸವರಾಜ ಕಲ್ಲಪ್ಪನವರ, ವಿನಾಯಕ ಕುಮೂರ, ಕನ್ನಡ ಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಹರೀಶಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ದೊಡ್ಡಮನಿ, ಆಕಾಶ ವನಹಳ್ಳಿ, ವಿನಾಯಕ ಆಚಾರ್ಯ, ಗಗನ್ ಹಡಪದ, ರಕ್ಷಿತ್ ಎಂ., ಗುರುರಾಜ ಸೇರಿದಂತೆ ಜಿಟಿಟಿಐ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೊಲೀಸ್ ಸಿಬ್ಬಂದಿಯೂ ಸ್ಥಳದಲ್ಲಿದ್ದರು.