ಜಿಲ್ಲಾಡಳಿತದಿಂದ ಸಕಲ ಸಿದ್ಧತೆ, 20 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತೆ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಮಾಹಿತಿ
ಬಳ್ಳಾರಿ 13: ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಬಳ್ಳಾರಿ ನಗರದ ಒಟ್ಟು 20 ಪರೀಕ್ಷಾ ಕೇಂದ್ರಗಳಲ್ಲಿ ನವೆಂಬರ್ 15 ರಂದು ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯು ನಡೆಯಲಿದ್ದು, ಜಿಲ್ಲಾಡಳಿತದಿಂದ ಸಕಲ- ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಇದೇ ನ.15 ರಂದು ನಡೆಯಲಿರುವ ಕೆಪಿಎಸ್ಸಿ ಯ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ಸಿದ್ಧತೆಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ಪರೀಕ್ಷೆಗೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 12,004 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷೆಯು ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಜರುಗಲು ಜಿಲ್ಲಾ ಆಡಳಿತದಿಂದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
*ವಸತಿ ಹಾಗೂ ಪ್ರಯಾಣ ವ್ಯವಸ್ಥೆ:*
ಪರೀಕ್ಷೆಗೆ ಹೊರಗಿನಿಂದ ಆಗಮಿಸುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ನವೆಂಬರ್ 14 ರಂದು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ, ಜಿಲ್ಲಾ ಕ್ರೀಡಾಂಗಣದ ಹತ್ತಿರ, ನಲ್ಲಚೆರವು, ಕೌಲ್ ಬಜಾರ್, ಬಳ್ಳಾರಿ. (ನೋಡಲ್ ಅಧಿಕಾರಿ: ನಾಗೇಶ್, ಪ್ರಾದೇಶಿಕ ನಿರ್ದೇಶಕರು - ಮೊ: 9986696487).
ಪುರುಷ ಅಭ್ಯರ್ಥಿಗಳಿಗೆ ಬಾಬು ಜಗಜೀವನ್ ರಾಮ್ ಭವನ, ರಂಗಮಂದಿರ ರಸ್ತೆ, ಕೌಲ್ ಬಜಾರ್, ಬಳ್ಳಾರಿ. (ನೋಡಲ್ ಅಧಿಕಾರಿ: ಚಿದಾನಂದಪ್ಪ, ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ - ಮೊ: 9480843073) ಇಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅದೇರೀತಿಯಾಗಿ ಕೆಕೆಆರ್ಟಿಸಿ ವತಿಯಿಂದ ವಿವಿಧ ಸ್ಥಳಗಳಿಂದ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ತಲುಪಲು ಕಾಲಕಾಲಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಅತ್ಯಾವಶ್ಯಕ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ವ್ಯವಸ್ಥೆಗೊಳಿಸಲಾಗಿದೆ. ವಿದ್ಯುತ್ ವ್ಯತ್ಯಯವಾಗದಂತೆ ಮುಂಜಾಗ್ರತಾ ಕ್ರಮವಾಗಿ ಜನರೇಟರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ಆವರಣವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಜೆರಾಕ್ಸ್ ಸೆಂಟರ್ ಹಾಗೂ ಇಂಟರ್ನೆಟ್ ಸೆಂಟರ್ ಗಳನ್ನು ಕಾರ್ಯನಿರ್ವಹಿಸದಂತೆ ಆದೇಶಿಸಲಾಗಿದೆ ಎಂದು ಹೇಳಿದರು.
*ನಿಗಾ ಮತ್ತು ಭದ್ರತೆ:*
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಫ್ರಿಸ್ಕಿಂಗ್, ಫೇಸ್ ರೆಕಾಗ್ನಿಷನ್ ಮತ್ತು ಜಾಮರ್ ಗಳ ಮುಂತಾದ ಅತ್ಯಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಒಳಗೆ ಮತ್ತು ಹೊರಗೆ 24/7 ಸಿಸಿಟಿವಿ ಅಳವಡಿಸಲಾಗಿದ್ದು, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಜಿಪಂ ಕಚೇರಿಯಲ್ಲಿರುವ ಎನ್ಐಸಿ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ. ಪ್ರತಿ ಕೇಂದ್ರಕ್ಕೆ ನಾಲ್ವರು ನೋಡಲ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಶ್ರವಣ ಅಥವಾ ಇತರೆ ಆರೋಗ್ಯ ಸಮಸ್ಯೆ ಇರುವ ಅಭ್ಯರ್ಥಿಗಳಿಗಾಗಿ ಪ್ಯಾರಾಮೆಡಿಕಲ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೂಕ್ತ ಪೊಲೀಸ್ ಭದ್ರತಾ ವ್ಯವಸ್ಥೆ ಕೂಡ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಎರಡು ಗಂಟೆ ಮುಂಚಿತವಾಗಿ ಹಾಜರಾಗಬೇಕು. ತಮ್ಮ ಪ್ರವೇಶ ಪತ್ರ ಹಾಗೂ ಭಾವಚಿತ್ರವಿರುವ ಗುರುತಿನ ಚೀಟಿ (ಆಧಾರ್ ಕಾರ್ಡ್ / ಚುನಾವಣಾ ಗುರುತಿನ ಚೀಟಿ) ಕಡ್ಡಾಯವಾಗಿ ತರಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದರು.
ಅಭ್ಯರ್ಥಿಗಳು ಪೂರ್ಣ ತೋಳಿನ ಬಟ್ಟೆಗಳನ್ನು ಹಾಗೂ ಹೆಚ್ಚು ಪಾಕೆಟ್ಗಳಿರುವ ಉಡುಪುಗಳನ್ನು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಪಾದರಕ್ಷೆಗಳ ವಿಚಾರದಲ್ಲಿ ಶೂ ಧರಿಸಿದ್ದರೆ ಅವುಗಳನ್ನು ಕಳಚಿ ಪರೀಶೀಲಿಸಲಾಗುವುದು, ಹಾಗೂ ಸಾಮಾನ್ಯ ಚಪ್ಪಲಿ ಧರಿಸಲು ಅವಕಾಶ ನೀಡಲಾಗಿದೆ. ಅದೇರೀತಿಯಾಗಿ ಸ್ಮಾರ್ಟ್ ವಾಚ್ ಗಳು, ಬ್ಲೂಟೂತ್ ಸಾಧನಗಳು, ಇಯರಿಂಗ್ ಬಡ್ ಗಳು ಸೇರಿದಂತೆ ಯಾವುದೇ ರೀತಿಯ ವಿದ್ಯುತ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯಲು ಜಿಲ್ಲಾದ್ಯಂತ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿಂದ ನಿಗಾ ಇರಿಸಲಾಗಿದ್ದು, ತಪ್ಪು ಸಂದೇಶ ಹರಡುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.