ಡಿ. 27ರಂದು ಮತದಾನ ಸುಸೂತ್ರ ಚುನಾವಣೆಗೆ ಅಗತ್ಯ ಕ್ರಮ: ಡಿಸಿ ಅನಿರುದ್ಧ ಶ್ರವಣ್
ವಿಜಯನಗರ (ಹೊಸಪೇಟೆ) 21: ಹೊಸಪೇಟೆ ನಗರಸಭೆ, ಹಗರಿಬೊಮ್ಮನಹಳ್ಳಿ ಪುರಸಭೆ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್.ಪಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರದಂದು ಚುನಾವಣಾ ತರಬೇತಿ ಮತ್ತು ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಮಾತನಾಡಿ, ಹೊಸಪೇಟೆ ನಗರಸಭೆ, ಹಗರಿಬೊಮ್ಮನಹಳ್ಳಿ ಪುರಸಭೆ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯ್ತಿಗಳಿಗೆ ಇದೇ 27ರಂದು ಮತದಾನ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿಗಳು ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಪಾಲಿಸಬೇಕು ಮತ್ತು ಚುನಾವಣಾ ತರಬೇತಿ ಸಂದರ್ಭದಲ್ಲಿ ನೀಡಿದ ಅಂಶಗಳನ್ನು ಚಾಚೂ ತಪ್ಪದೇ ಪಾಲಿಸುವ ಮೂಲಕ ಸುಸೂತ್ರ ಚುನಾವಣೆಗೆ ಸಹಕರಿಸಬೇಕು ಎಂದರು.
ಚುನಾವಣಾ ಕಾರ್ಯವನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತದಿಂದ ಚುನಾವಣೆ ನಡೆಸಬೇಕು. ಯಾವುದೇ ರೀತಿಯ ದೂರುಗಳು ಕಂಡುಬಂದರೇ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಚುನಾವಣಾ ಆಯೋಗದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಯಾವುದೇ ರೀತಿಯ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ ಡಿಸಿ ಅನಿರುದ್ಧ ಶ್ರವಣ್ ಅವರು ಚುನಾವಣಾ ಸಂದರ್ಭದಲ್ಲಿ ಪಕ್ಷಗಳ ಪ್ರಚಾರ, ಅನುಮತಿ ನೀಡುವಿಕೆ ಸೇರಿದಂತೆ ಪಾಲಿಸಬೇಕಾದ ವಿವಿಧ ನಿಯಮಗಳು ಮತ್ತು ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳನ್ನು ವಿವರಿಸಿದರು.
ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಅಭ್ಯರ್ಥಿಗಳು ಯಾವುದನ್ನು ಪಾಲಿಸಬೇಕು ಹಾಗೂ ಯಾವುದನ್ನು ಪಾಲಿಸಬಾರದು ಎಂಬುದನ್ನು ಸವಿವರವಾಗಿ ಜಿಲ್ಲಾಧಿಕಾರಿಗಳು ವಿವರಿಸಿದರು.
ಅಭ್ಯರ್ಥಿಗಳು ಮತದಾನ ಯಾಚನೆಗಾಗಿ ನಿಗದಿಪಡಿಸಿದ ಸಮಯದಲ್ಲಿಯೆ ಪ್ರಚಾರ ಮಾಡಬೇಕು. ಬಹಿರಂಗ ಪ್ರಚಾರ ಚುನಾವಣೆಗೆ 48ಗಂಟೆ ಮುಂಚೆ ನಿಲ್ಲಿಸಬೇಕು. ಮತದಾನ ದಿನದಂದು ಮತಗಟ್ಟೆಯ 100ಮೀಟರ್ ಒಳಗಡೆ (ಮತದಾರರ ಮೇಲೆ ಪ್ರಭಾವ) ಪ್ರಚಾರ ಮಾಡಕೂಡದು. ಸಭೆ, ಮೆರವಣಿಗೆ, ರ್ಯಾಲಿ, ರೋಡ್ ಷೋ, ತಾರಾ ವರ್ಚಸ್ಸುಳ್ಳವರನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವಾಗ ತಮ್ಮ ಕ್ಷೇತ್ರದ ಚುನಾವಣಾಧಿಕಾರಿ, ಪೊಲೀಸ್ ಅಧಿಕಾರಿಗಳಿಂದ ಲಿಖತ ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ಪ್ರಚಾರದ ಸಂದರ್ಭದಲ್ಲಿ ಹಾಗೂ ಮತದಾನದ ಸಂದರ್ಭದಲ್ಲಿಯೂ ಎಲ್ಲರೂ ಕಡ್ಡಾಯವಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಅವರು ಸೂಚನೆ ನೀಡಿದರು.
ಚುನಾವಣಾ ತರಬೇತಿಗೆ ನಿಯೋಜಿತರಾದ ಮಾಸ್ಟರ್ ಟ್ರೇನರ್ಗಳು ಚುನಾವಣಾ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅಪರ ಜಿಲ್ಲಾಧಿಕಾರಿ ಮಹೇಶ್ ಬಾಬು, ಸಾಮಾನ್ಯ ಚುನಾವಣಾ ವೀಕ್ಷಕರು, ಚುನಾವಣಾ ವೆಚ್ಚದ ವೀಕ್ಷಕರು, ಸೆಕ್ಟೋರಲ್ ಅಧಿಕಾರಿಗಳು, ಮಾದರಿ ನೀತಿ ಸಂಹಿತೆ ಅಧಿಕಾರಿಗಳ ತಂಡ, ವೆಚ್ಚದ ನೋಡೆಲ್ ಅಧಿಕಾರಿಗಳ ತಂಡ, ಮಾಸ್ಟರ್ ಟ್ರೇನರ್ ಅಧಿಕಾರಿಗಳ ತಂಡ ಹಾಗೂ ಇತರರು ಇದ್ದರು.