ಅಥಣಿ

ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲಿದೆ

ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲಿದೆ

 ಸಂಪತ್ತಕುಮಾರ ಶೆಟ್ಟಿ ವಿಶ್ವಾಸ: ಪಾರ್ಟಿಯ 10 ನೇ ವರ್ಷಾಚರಣೆ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ  

ವರದಿ: ವೆಂಕಟೇಶ ದೇಶಪಾಂಡೆ 

ಅಥಣಿ 06: ಗುಜರಾತ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶದ ನಂತರ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಆಮ್ ಆದ್ಮಿ ಪಾರ್ಟಿಯ ಚಿಕ್ಕೋಡಿ ಜಿಲ್ಲಾ ಸಂಯೋಜಕ ಸಂಪತ್ತಕುಮಾರ ಶೆಟ್ಟಿ ಹೇಳಿದರು. 

       ಅವರು ಸ್ಥಳೀಯ ಐಎಂಎ ಹಾಲ್ ನಲ್ಲಿ ಅಥಣಿ ತಾಲೂಕಾ ಆಮ್ ಆದ್ಮಿ ಪಾರ್ಟಿಯ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಹಾಗೂ ಪಾರ್ಟಿಯ 10 ನೇ ವರ್ಷಾಚರಣೆ ಅಂಗವಾಗಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  

ರಾಜಕೀಯ ಪಕ್ಷದ ಮೂಲಕ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡ ಆಮ್ ಆದ್ಮಿ ಪಾರ್ಟಿ ಕಳೆದ 10 ವರ್ಷಗಳಿಂದ ದೇಶದಲ್ಲಿ ರಾಷ್ಟ್ರೀಯ ಸಂಯೋಜಕ ಅರವಿಂದ ಕೇಜರಿವಾಲ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. 

        ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ತೊಲಗಿಸಬೇಕು ಮತ್ತು ಬಡ ಹಾಗೂ ಸಾಮಾನ್ಯ ಜನರಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ  ಧೃಢ ಸಂಕಲ್ಪದೊಂದಿಗೆ ಅಸ್ತಿತ್ವಕ್ಕೆ ಬಂದ ಎಎಪಿ ದೆಹಲಿಯಲ್ಲಿ ಎರಡು ಬಾರಿ ಹಾಗೂ ಇದೇ ಪ್ರಥಮ ಬಾರಿಗೆ ಪಂಜಾಬ ರಾಜ್ಯದಲ್ಲಿಯೂ ಕೂಡ ಭಾರೀ ಬಹುಮತದಿಂದ ಸರಕಾರ ರಚಿಸಿದೆ ಎಂದ ಅವರು ದೆಹಲಿ ಹಾಗೂ ಪಂಜಾಬ ರಾಜ್ಯಗಳಲ್ಲಿ ಘೋಷಿಸಿದ ಎಲ್ಲ ಸೌಲಭ್ಯಗಳನ್ನು ಕರ್ನಾಟಕದಲ್ಲಿಯೂ ಸಹ ಅನುಷ್ಠಾನಗೊಳಿಸುವ ಉದ್ದೇಶ ಎಎಪಿ ಯದ್ದಾಗಿದೆ ಎಂದರು. 

       ಅಥಣಿ ಮತಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ಗುರಿ ಹೊಂದಿರುವ ಎಎಪಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದ ಅವರು ದೆಹಲಿ, ಪಂಜಾಬ, ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸಹಕರಿಸಿದಂತೆ ಕರ್ನಾಟಕದಲ್ಲಿಯೂ ಮತದಾರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. 

       ತಾಲೂಕಾ ಸಂಯೋಜಕ ಶಿವಾನಂದ ಖೋತ ಮಾತನಾಡಿ, ಭ್ರಷ್ಟಾಚಾರ ವಿರುದ್ಧ ಮಾತನಾಡುತ್ತಿದ್ದ ಬಿಜೆಪಿ ತನ್ನ ಆಡಳಿತದಲ್ಲಿಯೇ ಭ್ರಷ್ಟಾಚಾರ ಎಸಗುತ್ತಿದೆ. ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ 40 ರಷ್ಟು ಕಮೀಶನ್ ಪಡೆಯುವ ಮೂಲಕ ಇಡೀ ದೇಶದಲ್ಲಿಯೇ ಅತೀ ಹೆಚ್ಚು ಭ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿದ ಅವರು ಭ್ರಷ್ಟಾಚಾರ ನಿರ್ಮೂಲನೆಗಾಗಿ ರಾಜ್ಯದಲ್ಲಿಯೂ  ಎಎಪಿ ಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. 

    ಎಸ್ಸಿ ಮೋರ್ಚಾ ಸಂಯೋಜಕ ಸುಭಾಷ ಬಾಮನೆ, ಪ್ರಧಾನ ಕಾರ್ಯದರ್ಶಿ ಶಂಕರ ಪಾಟೀಲ, ಸಂಘ ಸಂಸ್ಥೆಗಳ ಸಂಯೋಜಕ ಸಿದ್ಧರಾಜ ಬೋರಾಡೆ, ಪ್ರಚಾರ ಸಮಿತಿ ಸಂಯೋಜಕ ಸಿದ್ಧಪ್ಪ ಮ್ಯಾಗೇರಿ, ಅಲ್ಪ ಸಂಖ್ಯಾತ ಸಂಯೋಜಕ ಶಕೀಲ್ ಶೈಖ್, ಅಲ್ಪ ಸಂಖ್ಯಾತ  ಯುವ ಘಟಕ  ಸಂಯೋಜಕ ಅಫಾನ್ ಮಾಸ್ಟರ್, ಅಥಣಿ ಮತಕ್ಷೇತ್ರದ ಕಾರ್ಯದರ್ಶಿ ರೆಹಾನ್ ಮೋಮಿನ್, ಯುವ ಘಟಕ ಸಂಯೋಜಕ ಶಶಿಧರ ಬರ್ಲಿ, ಜಗದೀಶ ಮಿರಜಕರ ಸೇರಿದಂತೆ 66 ಹುದ್ದೆಗಳಿಗೆ ನೇಮಕ ಮಾಡಲಾಯಿತು ಹಾಗೂ ಕಾಗವಾಡ ಮತಕ್ಷೇತ್ರದ ಸಂಯೋಜಕ ಗುರ​‍್ಪ ಮಗದುಮ್ಮ ಉಪಸ್ಥಿತರಿದ್ದರು. 


ಸುದ್ದಿ ಓದಿ