ಗೋಕಾಕ್

ದುಶ್ಚಟಗಳಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಧಕ್ಕೆ

ದುಶ್ಚಟಗಳಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಧಕ್ಕೆ

ಈಶ್ವರಪ್ಪಗೋಳ, ಬಸಾಪೂರ ಅಭಿಪ್ರಾಯ: ಪಾಕ್ಷಿಕ ’ಜ್ಞಾನಾಕ್ಷಯ’ ಚಿಂತಕರ ಚಾವಡಿಯ ಮಾಲಿಕೆ ಕಾರ್ಯಕ್ರಮ

ಗೋಕಾಕ 13: ದುಶ್ಚಟ ಮಾಡುವುದರಿಂದ ಕ್ಷಣಿಕ ಸುಖ ಮಾತ್ರ ಸಿಗುತ್ತದೆ. ಆದರೆ ಮುಂದಿನ ಭವಿಷ್ಯದಲ್ಲಿ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಸುಖ ಶಾಂತಿ ನೆಮ್ಮದಿ ಕಳೆದುಕೊಳ್ಳುತ್ತೇವೆ. ದುಶ್ಚಟಕ್ಕೆ ದಾಸನಾದರೆ ಮುಂದೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು  ಗೋಕಾಕ  ಕುಲಗೋಡ ಪಿಎಚ್‌ಸಿಯ ಕೇಂದ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸನಗೌಡ ಈಶ್ವರ​ಪ್ಪಗೋಳ ಮತ್ತು ಅಕ್ಕತಂಗೇರಹಾಳ ಪಿಎಚ್‌ಸಿಯ ಕೇಂದ್ರ ಆರೋಗ್ಯ ಶಿಕ್ಷಣಾಧಿಕಾರಿ ರುದ್ರ​ಪ್ಪ ಬಸಾಪೂರರವರು ಹೇಳಿದರು.   

ತಾಲೂಕಿನ ಮಮದಾಪೂರದ ಏಳು ಕೋಣೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ ಆಯೋಜಿಸಲಾಗಿದ್ದ ರಸಸವೀ ಫೌಂಡೇಶನ್ ಅಡಿಯಲ್ಲಿ ಪಾಕ್ಷಿಕ ’ಜ್ಞಾನಾಕ್ಷಯ’ ಚಿಂತಕರ ಚಾವಡಿಯ 14ನೇ ಮಾಲಿಕೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.  

ದುಶ್ಚಟ ಮಾಡುವುದರಿಂದ ಮನುಷ್ಯನ ದೇಹ ಮನಸ್ಸು ಹಾಳಾಗುತ್ತದೆ. ಮನುಷ್ಯನ ದೇಹ ಮನಸ್ಸು ಆರೋಗ್ಯ ಚೆನ್ನಾಗಿದ್ದರೆ, ಏನಾದರೂ ಜೀವನದಲ್ಲಿ ಸಾಧನೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ, ಯುವ ಪೀಳಿಗೆಯು ಮೋಜು, ಮಸ್ತಿಗಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವಂತಾಗಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಧಕ್ಕೆ ಆಗುತ್ತಿದೆ ಎಂದು ನೊಂದ ಮನಸ್ಸಿನಿಂದ ಎಚ್ಚರಿಕೆಯ ಮಾತುಗಳಲ್ಲಿ ದುಶ್ಚಟಗಳನ್ನು ಮಾಡದಿರುವಂತೆ ಅವರು ಮಕ್ಕಳಿಗೆ, ಯುವಕರಿಗೆ ಎಚ್ಚರಿಕೆ ಘಂಟೆ ಬಾರಿಸಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಮರಡೀಮಠದ ಅದೃಶ್ಯ ಗುರುಸಿದ್ಧೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಜ್ಯೋತಿ ಎಸ್ ಪಾಟೀಲರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತ ಇಂದಿನ ವಿದ್ಯಾರ್ಥಿಗಳು ತಂಬಾಕು, ಗುಟ್ಕಾ ಸೇವನೆಯಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ದುಶ್ಚಟಗಳು ಸಮಾಜದ ಶಾಂತಿಭಂಗಕ್ಕೆ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವುದರಿಂದ ಯುವಜನತೆ ದುಶ್ಚಟಗಳ ಲೋಕದಿಂದ ದೂರವಾಗಿ ಸತ್ಸಂಗ ಕಾರ್ಯಗಳಲ್ಲಿ ಸಕ್ರಿಯರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಎಚ್ಚರವಹಿಸುವಂತೆ ಮನಒಲಿಸಿದರು.      ವೇದಿಕೆಯಲ್ಲಿ ಶರಣ ಯಲ್ಲಪ್ಪ ಕಮತ, ಗುರುಮಾತೆ ಸುಜಾತಾ ಕೆಂಚನ್ನವರ ಉಪಸ್ಥಿತರಿದ್ದರು.  

ಯುವಕರು, ವಿದ್ಯಾರ್ಥಿಗಳು  ‘ನಾವು ದುಶ್ಚಟಗಳಿಗೆ ಬಲಿಯಾಗುವುದಿಲ್ಲ’ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಪ್ರೇಮಾ ಮಗೆಪ್ಪಗೋಳ ಮತ್ತು ಭಾರತಿ ಮಾಲದಿನ್ನಿ ವಿಜ್ಞಾನ ಗೀತೆ ಹಾಡಿದರು. ಸರಸ್ವತಿ ನೇಸರಗಿಯವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಆಯೋಜಿಸಿದ ಮಮದಾಪೂರದ ಚಿಂತಾಮಣಿ ಪಾವಟೆ ಪ್ರೌಢ ಶಾಲೆ ವಿಜ್ಞಾನ ಶಿಕ್ಷಕ ಜ್ಞಾನಾಕ್ಷಯದ ಸಂಚಾಲಕ ರ. ವೀ ದೇಮಶೆಟ್ಟಿಯವರು ವಂದಿಸಿದರು. ಮಹೇಶ ಗಿಡಗೌಡರ ನಿರೂಪಿಸಿದರು. ಸಾವಿತ್ರಿ ಖನಗಾರ ಬಸವಣ್ಣನವರ ವಚನವನ್ನು ವಾಚಿಸಿದರು. 


ಸುದ್ದಿ ಓದಿ