ವಿಶ್ವ ಹಿರಿಯ ನಾಗರಿಕರ ದಿನಾಚರಣೆ
ಲೋಕದರ್ಶನ ವರದಿ,
ಜಮಖಂಡಿ: 5: ಕುಟುಂಬದ ಒಂದು ತಲೆಮಾರಿನ ಹಾಗೂ ದೇಶದ ಆರ್ಥಿಕ ಬೆಳವಣಿಗೆಯ ನೊಗಹೊತ್ತ ಹಿರಿಯ ನಾಗರಿಕರು ದೇಶದ ಆಸ್ತಿ ಎನಿಸಿದ್ದಾರೆಂದು ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶೆ ಕವಿತಾ ಎಸ್, ಉಂಡೋಡಿ ಹೇಳಿದರು.
ನಗರದ ಭಾರತ ಮಾತಾ ವೃದ್ಧಾಶ್ರಮದ ಆಶ್ರಯದಲ್ಲಿ ನಡೆದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಆಡಳಿತ ಸಹಯೋಗದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ಕೊನೆಯ ದಿನಗಳು ಚೆನ್ನಾಗಿರಬೇಕು. ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು. ಆದರೆ ಆಧುನಿಕತೆಯ ಭರಾಟೆಯಲ್ಲಿ ಇಂದಿನ ಯುವಕರು ಹಿರಿಯರನ್ನು ಕಡೆಗಣಿಸುತ್ತಿರುವುದು ವಿಷಾದನೀಯ. ಇಂದು ಹಿರಿಯರನ್ನು ಕಡೆಗಣಿಸಿದರೆ ನಾಳೆ ಅದೇ ಪರಿಸ್ಥಿತಿ ನಮಗೆ ಬರುತ್ತದೆ ಎಂಬ ಜಾಗ್ರತೆ ಇರಬೇಕು.
ಹಿರಿಯ ನಾಗರಿಕರು ತಮ್ಮ ಮೊಮ್ಮಕ್ಕಳಿಗೆ ಪೌರಾಣಿಕ ಕಥೆಗಳನ್ನು ಹೇಳಬೇಕು.ಮಕ್ಕಳ ಮತ್ತು ಮೊಮ್ಮಕ್ಕಳ ಬೆನ್ನು ತಟ್ಟುವ ಕಾರ್ಯ ಹಿರಿಯ ನಾಗರಿಕರಿಂದ ನಡೆಯಬೇಕು. ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸುವಲ್ಲಿ ಹಿರಿಯ ತಾಯಂದಿರ ಜವಾಬ್ದಾರಿ ಕೂಡ ಹೆಚ್ಚಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಅಬ್ದುಲ್ರಹಿಮಾನ ಎ. ಮುಲ್ಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಕೀಲರ ಸಂಘದ ಅಧ್ಯಕ್ಷ ಎಸ್,ಆರ್, ಕಾಡಗಿ, ವಕೀಲ ಎಸ್.ಬಿ. ಕಾಳೆ, ಜಯ ಭಾರತಮಾತೆ ನಗರ ಮತ್ತು ಗ್ರಾಮೀಣ ಸೇವಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮಾಧುರಿ ಐಗಳಿ, ಪ್ರಾಚಾರ್ಯ ಡಾ.ಟಿ.ಪಿ.ಗಿರಡ್ಡಿ, ಪ್ರಕಾಶ ಐಗಳಿ, ಅಶೋಕ ಸತ್ಯಣ್ಣವರ, ನಿವೃತ್ತ ಎಎಸ್ಐ ಬಿ.ಎಂ.ಕೋಟೆನ್ನವರ, ನಿವೃತ್ತ ಮುಖ್ಯ ಶಿಕ್ಷಕ ಎಂ.ಬಿ. ಕರಾಬೆ, ಗುರು ಮೇಸ್ತ್ರಿ ಸೇರಿದಂತೆ ಅನೇಕರು ಇದ್ದರು.
ಈರಣ್ಣ ಜಾಲಿಮಠ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಡಾ,ಶಶಾಂಕ ಕೆ.ವಳವಾಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಬಿ. ಕಡಕೋಳ ನಿರೂಪಿಸಿದರು. ಎಂಆರ್ಡಬ್ಲ್ಯೂ ಎನ್.ಬಿ. ಹನಗಂಡಿ ವಂದಿಸಿದರು.