ಕಥೆ ಮತ್ತು ವಿಶೇಷ ಲೇಖನಗಳು

ಮನದ ಮೂಲೆ ಹಸನು ಮಾಡಿ ಮತ್ತೊಂದು ಜೀವಕ್ಕೆ ಕಾಯುತ್ತಾ....

ಮನದ ಮೂಲೆ ಹಸನು ಮಾಡಿ ಮತ್ತೊಂದು ಜೀವಕ್ಕೆ ಕಾಯುತ್ತಾ....

- ನಾಗೇಶ ನಾಯಕ

ಅ೦ದುಕೊಂಡ ಆಸೆಗಳೆಲ್ಲ ನೀರ ಮೇಲಿನ ಗುಳ್ಳೆಯಂತೆ ನಿಲ್ಲದಾಗಿ ಹೋದವು. ಕಂಡ ಕನಸುಗಳ ಮರವಣಗಿ ಬರಡು ಬರಡು. ಎದೆಯ ಭಿತ್ತಿಯಲ್ಲಿ ಸಾಲು ಸಾಲು ಬಿರುಕುಗಳು. ಮನದ ಮಹಲಿನಲ್ಲಿ ಭಣಗುಡುವ ಖಾಲಿತನ. ಜೀವದ, ಜೀವನದ ಜಂಜಾಟದ ನಡುವೆ ನಿಲ್ಲದ ಯಾತನೆಯ ಕರಿನೆರಳು ಕವಿದಂತಾಗಿ ದೂರದ ಊರಿಗೆ ಪ್ರೀತಿ ಭಾವಗಳು ಗುಳೆ ಹೊರಟಂತೆ. ಅಂತರಂಗದ ಅಳಲುಗಳೆಲ್ಲ ಭುಗಿಲೆದ್ದು ಚೀತ್ಕರಿಸಿ, ಉತ್ಸಾಹದ ಚಿಲುಮೆಯ ಕತ್ತು ಹಿಚುಕಿದಂತೆ. ಕಣ್ಮುಂದೆ ಕತ್ತಲು....ಕಗ್ಗತ್ತಲು! ಹೆಜ್ಜೆಗಳ ಕಿತ್ತಿಡಲಾಗದ ಹತಾಶತನ.

ಕ್ಷಣಾರ್ಧದಲ್ಲಿ ಬದುಕಿನ ದಿಕ್ಕೆ ಬದಲಾಗುವ, ಮನಸಿಗೆ ಮಂಕು ಕವಿಯುವ, ಎಲ್ಲ ಮುಗಿದೇ ಹೋಯಿತು ಎಂದೆನಿಸುವ ಸಂಗತಿಗಳಿಗೇನೂ ಕೊರತೆಯಿಲ್ಲ. ಎಲ್ಲರೂ ಇಂತಹ ಗೊಂದಲದ ಸಂದಿಗ್ಧತೆಯ ಸುಳಿಗೆ ಸಿಲುಕಿ ಪೇಚಾಡುವವರೇ. ಇಂತಹ ಸಂದಿಗ್ಧತೆ ಆವರಿಸುವ ಬಗೆ ಹೇಗೆ ಗೊತ್ತೇ? ಇನ್ನೊಬ್ಬರ ಮೇಲೆ ನಾವು ಸಂಪೂರ್ಣ ಅವಲಂಬಿತರಾದಾಗ; ಅವರು ನಮ್ಮ ಭಾವನೆಗಳಿಗೆ ಸ್ಪಂದಿಸದೇ, ಅರ್ಧ ಹಾದಿಯಲ್ಲಿ ನಮ್ಮನ್ನು ತೊರೆದು ಮುನ್ನಡೆದಾಗ, ಪ್ರಪಂಚ ಬೇಜಾರೆನಿಸುವದು ಈ ಘಳಿಗೆಯಲ್ಲೇ. ಕಣ್ಣಲ್ಲಿ ಶ್ಯೂನ್ಯ ಮೆತ್ತಿಕೊಂಡು, ಆಲೋಚನೆಗಳೆಲ್ಲ ನಿಂತು ಹೋಗಿ ನೀರಸ ಯಾತ್ರೆಗೆ ನಾವು ರೆಡಿಯಾಗಿ ಬಿಡುತ್ತೇವೆ.

ಇಲ್ಲಿಯೇ ನಾವು ಸೋಲುವದು. ಎದೆಗವುಚಿಕೊಂಡವರು ಬದುಕಿನ ಕೊನೆಯವರೆಗೂ ಜೊತೆ ನಡೆಯಲೇಬೇಕೆಂದಿಲ್ಲ. ಯಾವದೊ ಕಾರಣವೊಡ್ಡಿ ಅವರು ಕೊಂಡಿ ಕಳಚಿಕೊಂಡರೂ, ಮೊದಲೇ ಅವರಿಲ್ಲದೆ ನಾವು ಬದುಕುವದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಂಡಿರಬೇಕು. ಮನದ ಅರಮನೆಗೆ ಒಳಬರುವ ಬಾಗಿಲಿದ್ದಂತೆ ಹೊರ ಹೋಗುವ  ಬಾಗಿಲೂ ಇರಬೇಕು. ಬಂದವರು ಇಷ್ಟವಿದ್ದರೆ ಇದ್ದೇ ಇರುತ್ತಾರೆ, ಕಷ್ಟವಾದರೆ ಖಂಡಿತ ಕಳಚಿಕೊಳ್ಳುತ್ತಾರೆ. ಬಲವಂತ ಮಾಡಿ ಅವರನ್ನು ನಾವು ಎಷ್ಟೇ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಪ್ರಯೋಜನವಾಗುವದಿಲ್ಲ. ಹಾಗೊಮ್ಮೆ ಅವರು ಉಳಿದರೂ ರುಚಿಯಿರುವದಿಲ್ಲ; ಹಳಸಲಾಗಿರುತ್ತದೆ. ಈ ನಿಲುವನ್ನು ನಾವು ತಾಳಿದರೆ ಒಬ್ಬಂಟಿತನ, ಹತಾಶಭಾವ, ಖಾಲಿತನ ನಮ್ಮನ್ನು ಕಾಡುವದಿಲ್ಲ. ಆದರೆ ಅದಷ್ಟು ಸುಲಭವಾಗಿ ರೂಢಿಗತವಾಗುವದಿಲ್ಲ.

ಚಿನ್ನು... ನನಗೆ ಅತ್ಯಂತ ಪ್ರೀತಿ ಪಾತ್ರರೆಲ್ಲ ಯಾತನೆ ನೀಡಿ ದಿಕ್ಕಿಗೊಬ್ಬೊಬ್ಬರು  ನಡೆದಾಗಲೆಲ್ಲ ನಾನು ನನ್ನನ್ನು ಸಂತೈಸಿಕೊಂಡಿದ್ದೇನೆ. ಮನದ ಮೂಲೆ ಹಸನು ಮಾಡಿ ಮತ್ತೊಂದು ಇಷ್ಟದ  ಜೀವಕ್ಕೆ ಕಣ್ಣಿಟ್ಟು ಕಾದಿದ್ದೇನೆ. ಕೆಲವೊಮ್ಮೆ ಅಸಾಧ್ಯ ಅಂತ ಅನಿಸಿದಾಗ ಮನಸಾರೆ ಬಿಕ್ಕಿದ್ದೇನೆ. ಆ ನೋವನ್ನು ಕಾಲನ ಹೆಗಲಿಗೇರಿಸಿ ಹಗುರಾಗಿದ್ದೇನೆ. ನಿನ್ನ ಜೊತೆಯೊಂದು ಸಾವಿರ ನೋವುಗಳನ್ನು ನುಂಗಿ ಮುನ್ನುಗ್ಗುವ ಬಲ ತುಂಬುತ್ತದೆ. ನಿನ್ನಿರುವಿಕೆಗೆ ಥ್ಯಾಂಕ್ಸ್.


ಸುದ್ದಿ ಓದಿ